ಸೂರತ್: ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿ ಆಕೆ ಹಾಗೂ ಜತೆಗಿದ್ದ ವ್ಯಕ್ತಿಯನ್ನು ರೈಲಿನಿಂದ ತಳ್ಳಿರುವ ಘಟನೆ ಸೂರತ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಸೋಮವಾರ ರಾತ್ರಿ (ಜೂ.19 ರಂದು) ಜಾರ್ಖಂಡ್ ನ ಮುಜಾಫರ್‌ಪುರದಿಂದ ಗುಜರಾತ್‌ನ ಸೂರತ್‌ಗೆ ಹೋಗುವ ಸೂರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆ ತನ್ನ ಸಂಬಂಧಿಕಯೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಎಂದು ಗುರುವಾರ ಪೊಲೀಸರು ಹೇಳಿದ್ದಾರೆ.
ಮಹಿಳೆ ತನ್ನ ಪುರುಷ ಸಂಬಂಧಿಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಐದು ಮಂದಿ ಅಪರಿಚಿತರು ಮಹಿಳೆಯ ಪಕ್ಕಕ್ಕೆ ಬಂದು ಆಕೆಯ ಫೋಟೋಗಳನ್ನು ತೆಗೆದಿದ್ದಾರೆ. ಈ ವೇಳೆ ಮಹಿಳೆ ಹಾಗೂ ಗುಂಪಿನೊಂದಿಗೆ ವಾಗ್ವಾದ ನಡೆದಿದೆ. ಮಹಿಳೆಯೊಂದಿಗಿದ್ದ ಸಂಬಂಧಿ ಪ್ರಶ್ನೆ ಮಾಡಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಮಹಿಳೆ ಜಾಗವನ್ನು ಬದಲಾಯಿಸಿದ್ದಾರೆ. ಆದರೆ ಆರೋಪಿಗಳು ಮಹಿಳೆಯನ್ನು ಹಿಂಬಾಲಿಸಿ ಆಕೆಯ ಸೀರೆಯನ್ನು ಎಳೆದು ಕಿರುಕುಳ ನೀಡಿದ್ದಾರೆ. ಆಕೆಯ ಬಟ್ಟೆಯನ್ನು ಬಲವಂತವಾಗಿ ಎಳೆದು ಚಲಿಸುತ್ತಿರುವ ರೈಲಿನಿಂದಲೇ ತಳ್ಳಿದ್ದಾರೆ. ಅರೆ ಬೆತ್ತಲೆ ಮಾಡಿ ಮಹಿಳೆ ಹಾಗೂ ಆಕೆಯ ಸಂಬಂಧಿಯನ್ನು ತಳ್ಳಿದ್ದಾರೆ ಎಂದು ವರದಿ ತಿಳಿಸಿದೆ.
ರಾತ್ರಿಯಿಡೀ ಗಾಯಾಳುಗಳು ಬರೋಡಿ ಗ್ರಾಮದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದರು, ಅವರನ್ನು ಸ್ಥಳೀಯ ಗ್ರಾಮಸ್ಥರು ನೋಡಿ ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಸಂಬಂಧ ಸಂತ್ರಸ್ತ ಮಹಿಳೆ ಬಿಲುವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಸ್‌ಪಿ ಗ್ವಾಲಿಯರ್ ರಾಜೇಶ್ ಸಿಂಗ್ ಚಾಂಡೆಲ್ ನೇತೃತ್ವದ ಅಧಿಕಾರಿಗಳು, ಘಟನೆಯ ಸತ್ಯಾಸತ್ಯತೆಯನ್ನು ಕೂಲಂಕಷವಾಗಿ ತನಿಖೆ ಮಾಡಲು ತಂಡವನ್ನು ರಚಿಸಲು ಎಸ್‌ಡಿಒಪಿ ದಾಬ್ರಾ ಮತ್ತು ಬಿಲೌವಾ ಠಾಣೆಯ ಉಸ್ತುವಾರಿಗೆ ಸೂಚನೆ ನೀಡಿದ್ದಾರೆ.