ಗುತ್ತಿಗಾರು: ಯುವಜನರು ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಗುತ್ತಿಗಾರಿನಲ್ಲಿ ಕಮಿಲದ ಬಾಂಧವ್ಯ ಗೆಳೆಯರ ಬಳಗ ನಡೆಸಿದ ಮಾದರಿ ಕಾರ್ಯವೇ ಸಾಕ್ಷಿ. ಈ ತಂಡ ಬಳ್ಪ-ಕಮಿಲ ರಸ್ತೆಯ ಸುಮಾರು 2 ಕಿಮೀ ಕಾಡಿನ ನಡುವೆ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಸ್ವತ್ಛತೆ ಕಾರ್ಯ ನಡೆಸಿದೆ. ಈ ವೇಳೆ, ಕಾಡಿನ ದಾರಿಯಲ್ಲಿ 2 ಲೋಡ್ ಪಿಕ್‌ಅಪ್‌ನಲ್ಲಿ ತುಂಬುವಷ್ಟು ತ್ಯಾಜ್ಯ ಸಿಕ್ಕಿದೆ.
ಪರಿಸರ ಕಾಳಜಿಯಿಂದ ಕಾಡಿನ ದಾರಿ ಸ್ವತ್ಛಗೊಳಿಸಿದ ತಂಡ ಈಗ ಅಲ್ಲಲ್ಲಿ ಸ್ವತ್ಛತೆ ಜಾಗೃತಿ ಫಲಕ ಅಳವಡಿಸಿದೆ. ಅರಣ್ಯ ಇಲಾಖೆ ಸಹಯೋಗದೊಂದಿಗೆ ಸಿಸಿ ಕೆಮರಾ ಅಳವಡಿಸಿ ಕಸ ಎಸೆಯುವವರ ಪತ್ತೆಗೂ ಮುಂದಾಗಿದೆ. ತ್ಯಾಜ್ಯ ಎಸೆಯುವವರನ್ನು ಕಂಡರೆ ತಕ್ಷಣವೇ ಫೋಟೋ ಸಹಿತ ಇಲಾಖೆಗಳಿಗೆ ಮಾಹಿತಿ ನೀಡಲು ಅದು ಕ್ರಮ ಕೈಗೊಂಡಿದೆ.
ಬಾಂಧವ್ಯ ಗೆಳೆಯರ ಬಳಗದ ಅಧ್ಯಕ್ಷ ತುಂಗನಾಥ ಕಾಯನಕೋಡಿ, ಕಾರ್ಯದರ್ಶಿ ಹರ್ಷಿತ್ ಕಾಂತಿಲ, ಸದಸ್ಯರಾದ ಚೇತನ್ ಕಾಂತಿಲ, ಪವನ್ ಕಾಂತಿಲ, ನಿತ್ಯಾನಂದ ಅಂಬೆಕಲ್ಲು ಕಮಿಲ, ವಿನಯಚಂದ್ರ ಕಾಂತಿಲ, ಉದಯಕುಮಾರ್ ಕಾಂತಿಲ, ಭರತ್ ಕಾಂತಿಲ, ಕುಸುಮಾಧರ ಕಾಂತಿಲ, ತನ್ವಿತ್, ನಿರಂಜನ ಕಾಂತಿಲ, ಪ್ರಣಾಮ್, ಜಯಪ್ರಕಾಶ್ ಕಾಂತಿಲ, ವೆಂಕಟ್ರಮಣ ಮೊದಲಾದವರು ಸೇವಾ ಕಾರ್ಯದ ಮುಂಚೂಣಿಯಲ್ಲಿದ್ದಾರೆ. ಸ್ಥಳೀಯ ಮುಖಂಡರು ಬೆಂಬಲ ನೀಡಿದ್ದಾರೆ.
ಕಾಡಿನ ದಾರಿಯಲ್ಲಿ ಎಲ್ಲೆಂದ ರಲ್ಲಿ ಕಸ ಎಸೆದು ಹೋಗುತ್ತಾರೆ. ವಿಷಪೂರಿತ ಹಾವುಗಳನ್ನು ರಸ್ತೆ ಬದಿಯೇ ಬಿಟ್ಟು ಹೋಗುತ್ತಾರೆ. ರಸ್ತೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರೂ ನಡೆದಾಡುವ ಪ್ರದೇಶ ಇದು. ಹೀಗಾಗಿ ಸ್ವಚ್ಛತೆಯನ್ನು ಕಾಪಾಡಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಂಡಿದ್ದೇವೆ. ಮುಂದೆ ಈ ಪ್ರದೇಶದಲ್ಲಿ ನಮ್ಮ ಯುವಕರೂ ತ್ಯಾಜ್ಯ ಎಸೆಯುವಿಕೆ ಮೇಲೆ ಕಣ್ಣಿಡಲಿದ್ದಾರೆ.
-ತುಂಗನಾಥ ಕಾಯನಕೋಡಿ, ಅಧ್ಯಕ್ಷರು, ಬಾಂಧವ್ಯ ಗೆಳೆಯರ ಬಳಗ
ಹೀಗೆ ಮಾಡಬೇಡಿ: ಗೆಳೆಯರ ಮನವಿ
- ಕಾಡಿನ ದಾರಿಯ ಪಕ್ಕದಲ್ಲಿ ಕಸ, ಬಾಟಲಿ, ಪ್ಲಾಸ್ಟಿಕ್ ಎಸೆಯಬೇಡಿ.
- ಸಿಮೆಂಟ್ ತ್ಯಾಜ್ಯ ಎಸೆದು ಹೋಗುವುದಕ್ಕೂ ಕಡಿವಾಣ ಹಾಕಬೇಕು.
- ಕಾಡಿನ ರಸ್ತೆಯ ಬದಿಯಲ್ಲಿ ವಿಷಪೂರಿತ ಹಾವು ಬಿಡದಂತೆ ಫಲಕ ಅಳವಡಿಕೆ
- ಕಾಡುಪ್ರಾಣಿಗಳು ಪ್ಲಾಸ್ಟಿಕ್ ತಿಂದು ಸಂಕಷ್ಟ ಉಂಟಾಗುವ ಸಾಧ್ಯತೆಯೂ ಇದೆ.
-ಕೃಷ್ಣ ಪ್ರಸಾದ್ ಕೋಲ್ಚಾರು