ಸಿಂದಗಿ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ತಾಂಬಾದಲ್ಲಿ ರೈತರು ಕಳೆದ 48 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಈ ಭಾಗದ ರೈತರ ಸಮಸ್ಯೆಗೆ ಸರಕಾರ ಇಚ್ಛಾಶಕ್ತಿ ತೋರಿಸದೇ ಇರುವುದು ರೈತ ವಿರೋಧಿ ಸರಕಾರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಆರೋಪಿಸಿದರು.
ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ನೀರಾವರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿದ್ದರು. ಆದರೆ ನೀರಿಗಾಗಿ ಹೋರಾಡುತ್ತಿರುವ ರೈತರಿಗೆ ಸ್ಪಂದಿಸಲು ಹೋರಾಟ ಸ್ಥಳಕ್ಕೆ ಭೇಟಿ ನೀಡಿಲ್ಲ. ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರು ನಿರಾಸಕ್ತಿ ತೋರಿಸಿದ್ದಾರೆ. ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯಿಂದ ಕಾಲುವೆಗೆ ನೀರು ಹರಿಸುವ ಯಂತ್ರಗಳು ಕೆಟ್ಟಿವೆ. ನೀರು ಸರಬರಾಜು ಮಾಡಲು ಹೊಸ 8 ಯಂತ್ರಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಕ್ಷೇತ್ರದ ಶಾಸಕರು 3-4 ತಿಂಗಳಿನಿಂದ ಹೇಳುತ್ತ ಹೊರಟಿದ್ದಾರೆ. ಆದರೆ ಖರೀದಿ ಮಾಡಿ ಮೋಟಾರ್ ಅಳವಿಡಿಸಿ ಕಾಲುವೆಗೆ ನೀರು ಹರಿಸುವ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದರು.
ಹೋರಾಟ ಮಾಡುವ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು ರೈತರ ಪ್ರಶ್ನೆಗೆ ಕಬ್ಬು, ನಿಂಬೆ ಬೆಳೆಯುತ್ತಿರಿ ಎಂದು ಉಡಾಪೆ ಉತ್ತರ ನೀಡಿರುವುದು ಖಂಡನೀಯ. ಬಳಗಾನೂರ ಏತ ನೀರಾವರಿ ಆರಂಭಿಸಿ ಬಳಗಾನೂರ ಕೆರೆಯಿಂದ ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ನೀರು ಹರಿಸಿ ರೈತರ ಸಮಸ್ಯೆ ಪರಿಹರಿಸಿ ಎಂದು ಸರಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆ ಸೂಕ್ತವಾಗಿದೆ ಎಂದು ಹೇಳಿದರು.
ಶಾಸಕ ದಿ| ಎಂ.ಸಿ. ಮನಗೂಳಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಕಡಣಿ ಬ್ಯಾರೇಜ್ ಕಾಮಗಾರಿಗೆ, ಆಲಮೇಲ ಪಟ್ಟಣದಲ್ಲಿ ತೋಟಗಾರಿಕೆ ಕಾಲೇಜು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಹಣ ಮಂಜೂರು ಮಾಡಿಸಿದ್ದರು. ಆದರೆ ಇಂದಿನ ಶಾಸಕರು ಆಸಕ್ತಿ ತೋರಿಸುತ್ತಿಲ್ಲ. ಯಾವುದೇ ಕಾಮಗಾರಿಗಳು ಮಾಡುತ್ತಿಲ್ಲ. ಅತಿವೃಷ್ಟಿ ಸಂದರ್ಭದಲ್ಲಿ ಕ್ಷೇತ್ರದ ಗ್ರಾಮಗಳ ರಸ್ತೆ ಅಭಿವೃದ್ಧಿಗಾಗಿ 88 ರಸ್ತೆಗಳ ಅಭಿವೃದ್ಧಿ, ಶಾಲೆ ಕೊಠಡಿ, ಅಂಗನವಾಡಿ ಕಟ್ಟಡ ದುರಸ್ತಿ ಕಾಮಗಾರಿಗೆ ಒಟ್ಟು 3 ಕೋಟಿ ರೂ. ಬಿಡುಗಡೆ ಮಾಡಿಸಿದ್ದರು. ಆದರೆ ಈಗ ಶಾಸಕ ಭೂಸನೂರ ಅವರ ಅವಧಿಯಲ್ಲಿ 88 ರಸ್ತೆ ಕಾಮಗಾರಿಗಳನ್ನು ಮಾಡದೇ ಬಿಲ್ ತೆಗೆಯುವ ಮೂಲಕ ಅನುದಾನ ದುರ್ಬಳಕೆ ಮಾಡಿದ್ದಾರೆ. ಶಾಸಕ ದಿ| ಎಂ.ಸಿ. ಮನಗೂಳಿ ಅವರು ಮಂಜೂರು ಮಾಡಿಸಿದ ಕಾಮಗಾರಿಗಳು ಶಾಸಕ ರಮೇಶ ಭೂಸನೂರ ಅವರು ಶೀಘ್ರದಲ್ಲಿ ಮಾಡಿಸಬೇಕು ಎಂದು ಆಗ್ರಹಿಸಿದರು.
ತಳವಾರ ಸಮಾಜದ ಮುಖಂಡ ಸಂತೋಷ ಹರನಾಳ ಮಾತನಾಡಿ, ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿ ಖಂಡನೀಯ. ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವುದಾಗಿ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಇಲಾಖೆ ಸಚಿವರು, ಶಾಸಕರು ಭರವಸೆ ನೀಡಿದ್ದರು. ಚುನಾವಣೆ ಮುಗಿದ ನಂತರ ಅವರು ನೀಡಿದ ಭರವಸೆ ಮರೆತಿದ್ದಾರೆ. ಮತ ಪಡೆಯಲು ಸುಳ್ಳು ಭರವಸೆ ನೀಡಿದ್ದಾರೆ ಎಂದು ಆರೋಪಿಸಿದರು.
ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿ, ಶಾಸಕ ರಮೇಶ ಭೂಸನೂರ ಅವರು ಪಟ್ಟಣದಲ್ಲಿ 1.31 ಕೋಟಿ, 2 ಕೋಟಿ ರೂ. ಅನುದಾನ ನೀಡಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ ಎಂದು ದಿನಕ್ಕೊಂದು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಅವರ ಹಿಂದಿನ ಅಧಿಕಾರದ ಅವಧಿಯಲ್ಲಿ ಕೇವಲ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ನಂತರ ಎಂ.ಸಿ. ಮನಗೂಳಿ ಅವರು 1 ಕೋಟಿ ರೂ. ಅನುದಾನ ಭವನಕ್ಕೆ ನೀಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಮುಖಂಡರಾದ ಸುರೇಶ ಪೂಜಾರಿ, ಎಂ.ಎ. ಖತಿಬ, ಇಕ್ಬಾಲ್ ತಲಕಾರಿ, ಮಂಜುನಾಥ ಬಿಜಾಪುರ ಇದ್ದರು.