Advertisement

ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆ: ಬೇಕಿದೆ ಸೂಚನ ಫಲಕ

06:20 AM Apr 29, 2018 | |

ಬೆಳ್ತಂಗಡಿ : ಸುಮಾರು ಏಳು ವರ್ಷಗಳ ಹಿಂದೆ ರಸ್ತೆ ಸರಿಯಿಲ್ಲದೆ ಉತ್ತಮ ರಸ್ತೆ ಬೇಕು ಎನ್ನುವ ಬೇಡಿಕೆ ಜನರದ್ದಾಗಿತ್ತು. ಇದೀಗ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದ್ದು, ವಾಹನ ದಟ್ಟಣೆ ಜತೆಗೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದ್ದು, ಸೂಚನ ಫಲಕ ಅಳವಡಿಕೆ ಮಾಡಬೇಕು ಎನ್ನುವುದು ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರ ಬೇಡಿಕೆಯಾಗಿದೆ.

Advertisement

ತಿಂಗಳ ಹಿಂದೆ ಉಪ್ಪಿನಂಗಡಿಯಿಂದ ಗುರುವಾಯನಕೆರೆ ದಾರಿಯಲ್ಲಿ ಸಿಗುವ ಕರಾಯ ಬಳಿ ದ್ವಿಚಕ್ರ ವಾಹನ ಸವಾರ ಬಸ್‌ ಢಿಕ್ಕಿಯಾಗಿ ಬಲಿಯಾಗಿದ್ದ. ಮದುವೆ ನಿಗದಿಯಾಗಿದ್ದ ಯುವಕ ಎ. 25ರಂದು ಅಪಘಾತಕ್ಕೆ ಬಲಿಯಾಗಿದ್ದಾನೆ. ಇದು ಕೇವಲ ಒಂದೆರಡು ದಿನದ ಕಥೆಯಲ್ಲ, ದಿನಂಪ್ರತಿ ಅಪಘಾತಗಳು ನಡೆದರೂ ರಾಜಿಯಲ್ಲಿ  ಪ್ರಕರಣಗಳು ಮುಗಿಯುತ್ತಿರುವುದರಿಂದ ಬೆಳಕಿಗೆ ಬರುತ್ತಿಲ್ಲ.

ತಿರುವಿನಲ್ಲೂ ನಿಲುಗಡೆ
ಕೆಲವು ಖಾಸಗಿ ವಾಹನಗಳು, ಬಸ್‌ಗಳು ತಿರುವು ಮೊದಲಾ ದೆಡೆ ಪ್ರಯಾಣಿಕರನ್ನು ಹತ್ತಿಸಲು ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಇತರ ವಾಹನಗಳ ಚಾಲಕರು ಗೊಂದಲಕ್ಕೀಡಾಗುವ  ಪ್ರಮೇಯ ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಅತಿವೇಗ
ರಸ್ತೆ ಅಭಿವೃದ್ಧಿಗೊಂಡಿರುವುದರಿಂದ ವಾಹನಗಳು ವೇಗ ವಾಗಿ ಚಲಿಸುತ್ತಿವೆ. ಕೆಲವು ಕಡೆ ರಸ್ತೆ ಕಾಮಗಾರಿ ನಡೆಯ ದಿರುವುದರಿಂದ ಹಠಾತ್ತನೆ ಕಿರಿದಾದ ರಸ್ತೆ ಎದುರಾಗಿ ಅಪಘಾತ  ನಡೆದ ಪ್ರಕರಣಗಳೂ ಸಂಭವಿಸಿವೆ.  ತಿರುವು ಇದ್ದು ಚಾಲಕರಿಗೆ ಅರಿವಾಗದೆ ಅಪಘಾತಗಳು ಸಂಭವಿಸುತ್ತಿವೆ.

ಮುಗಿಯಬೇಕಿದೆ ಕಾಮಗಾರಿ
ಸುಮಾರು 13 ಕೋಟಿ ರೂ. ವೆಚ್ಚದಲ್ಲಿ 20 ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇನ್ನೂ ವಿವಿಧೆಡೆ ಸುಮಾರು 300 ಮೀ.ಗೂ ಹೆಚ್ಚು ದೂರದ ಕಾಮಗಾರಿ ಬಾಕಿಯಿದೆ. ವಿದ್ಯುತ್‌ ಕಂಬ ತೆರವು, ರಸ್ತೆ ಸಮೀಪ ಇರುವ ಮರಗಳ ತೆರವಿನ ಕಾರ್ಯ ಮಾಡಬೇಕಿದೆ.

Advertisement

ಇಲಾಖೆಗಳ ಸಮನ್ವಯತೆ ಅಗತ್ಯ
ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿ ತೆರವಿಗೆ ಸೂಚಿಸಿದ ಮರಗಳಲ್ಲಿ 24 ಮರಗಳ ತೆರವು ಕಾರ್ಯ ಬಾಕಿ ಉಳಿದಿದೆ. ಆದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದರೆ ಮರಗಳ ತೆರವು ಸಾಧ್ಯ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬಂದಿ. ಮೆಸ್ಕಾಂ ಸಿಬಂದಿ ತಿಳಿಸುವಂತೆ ವಿದ್ಯುತ್‌ ಕಂಬಗಳ ತೆರವು ಗುತ್ತಿಗೆದಾರರಿಗೆ ನೀಡಿದ್ದು, ಅವರು ಕಂಬಗಳ ತೆರವು ಮಾಡಬೇಕಿದೆ ಎನ್ನುವ ಮಾತು ಕೇಳಿ ಬಂದಿದೆ. ತೆರವು ಕಾರ್ಯ ನಡೆಯದೆ ವಿವಿಧೆಡೆ ಉಳಿದಿರುವ ಸುಮಾರು 300 ಮೀ.ಗಳ ಕಾಮಗಾರಿಯೂ ಬಾಕಿಯಾದಂತಾಗಿದೆ.

ಫಲಕಕ್ಕೆ ಹೊಸ ಪ್ರಸ್ತಾವನೆ
ವಿದ್ಯುತ್‌ ಕಂಬ ಹಾಗೂ ಮರಗಳ ತೆರವು ಆದಲ್ಲಿ ಉಳಿಕೆ ಕಾಮಗಾರಿ ಪೂರ್ಣಗೊಳಿಸಬಹುದು. ಸೂಚನೆಗಾಗಿ ಬಿಳಿ ಬಣ್ಣ ಬಳಿಯಲಾಗಿದೆ. ಸೂಚನ ಫಲಕಗಳ ಅಳವಡಿಕೆಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಬೇಕಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು.

ಸೂಚನ ಫಲಕ ಅಗತ್ಯ
ಪೂರ್ಣಗೊಂಡಿರುವ ರಸ್ತೆಯಲ್ಲಿ ಈಗಾಗಲೇ ರಸ್ತೆ ಅಂಚಿಗೆ ಬಿಳಿ ಬಣ್ಣದ ಪಟ್ಟಿಯನ್ನು ಬಳಿಯಲಾಗಿದೆ. ಆದರೆ ರಸ್ತೆ ವಿಸ್ತರಣೆ ಮಾಡಿದ್ದರೂ ಹೊಸ ದಾಗಿ ರಸ್ತೆಯಲ್ಲಿ ಸಂಚರಿಸು ವವರಿಗೆ ತಿರುವಿನ ಬಗ್ಗೆ  ಅರಿವಿ ರದೆ ಅಪಘಾತ ಸಂಭವಿ ಸುವ ಸಾಧ್ಯತೆಗಳೂ ಹೆಚ್ಚಾಗಿವೆ. ಮುಖ್ಯವಾಗಿ ಶಿರಾಡಿ ಘಾಟಿ ಸಂಚಾರಕ್ಕೆ ನಿರ್ಬಂಧವಿದ್ದು, ಮಂಗಳೂರು, ಪುತ್ತೂರು ಮೊದ ಲಾದ ಕಡೆಯಿಂದ ಆಗಮಿಸುವ ವಾಹನಗಳು ಪರ್ಯಾಯವಾಗಿ ಈ ರಸ್ತೆಯ ಮೂಲಕ ಚಾರ್ಮಾಡಿ ಘಾಟಿಗೆ  ತೆರಳುತ್ತಿರುವುದರಿಂದ ವಾಹನ ದಟ್ಟಣೆಯೂ ಹೆಚ್ಚಿದೆ. ಆದುದ ರಿಂದ ಸೂಚನ ಫಲಕ ಅಳವಡಿಕೆ ಅಗತ್ಯ. 

ತಿರುವಿನ ಅರಿವಾಗುವುದಿಲ್ಲ 
ವೇಗದ ಚಾಲನೆಯಿಂದ ಅಪಘಾತಗಳು ಸಂಭವಿಸಿವೆ. ಬಿಳಿಬಣ್ಣ ಬಳಿದಿದ್ದರೂ ತತ್‌ಕ್ಷಣ ತಿರುವಿನ ಅರಿವಾಗುವುದಿಲ್ಲ.  ಸೂಚನ ಫಲಕ ಅಳವಡಿಸಿದಲ್ಲಿ ದೂರದೂರುಗಳಿಂದ ಆಗಮಿಸುವವರಿಗೆ ಮುಂದೆ ಇರುವ ತಿರುವುಗಳ ಬಗ್ಗೆ ಅರಿವು ಉಂಟಾಗಿ ವಾಹನ ಚಾಲನೆಗೆ  ನೆರವಾಗಲಿದೆ. ಈ ಮೂಲಕ ಸಂಭಾವ್ಯ ಅಪಘಾತಗಳು ತಪ್ಪುವ ಸಾಧ್ಯತೆ ಹೆಚ್ಚು.
– ಲಕ್ಷ್ಮೀಕಾಂತ್‌ ಪ್ರಯಾಣಿಕ

 ಸುರಕ್ಷತೆಗೆ ಕ್ರಮ
ವಾಹನ ಚಾಲಕರು ರಸ್ತೆ ನಿಯಮ ಪಾಲಿಸಿದರೆ ಅಪಘಾತ ಸಂಭವಿಸುವುದಿಲ್ಲ. ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆಯಲ್ಲಿ ಸೂಚನ ಫಲಕಗಳು ಇಲ್ಲ. ಅಳವಡಿಕೆಗೆ ಹಾಗೂ ಸುರಕ್ಷತ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚಿಸಲಾಗುವುದು.
– ಜಯ ಕೆ. ಬೆಳ್ತಂಗಡಿ ಸಂಚಾರ ಠಾಣೆ ಎಸ್‌.ಐ.

–   ಹರ್ಷಿತ್‌ ಪಿಂಡಿವನ

Advertisement

Udayavani is now on Telegram. Click here to join our channel and stay updated with the latest news.

Next