Advertisement
ಕುವೆಟ್ಟು ಗ್ರಾ.ಪಂ.ಗೆ ಒಳಪಡುವ ಗುರುವಾ ಯನಕೆರೆ ಪೇಟೆಯಿಂದ ಮೂಡುಬಿದ್ರೆ- ಕಾರ್ಕಳ ರಸ್ತೆಯಾಗಿ ಸಂಚರಿಸುವಾಗ ಎಡ ಬದಿಯಲ್ಲಿ ಕಾಣಸಿಗುತ್ತದೆ. ಬೆಳ್ತಂಗಡಿ ತಾಲೂಕಿಗೆ ಒಳಪಟ್ಟಂತೆ ಇರುವ ಐತಿಹಾಸಿಕ ಬೃಹತ್ ಕೆರೆ ಇದಾಗಿದೆ. ಬಂಗಾಡಿ ಅರಸ ಆಳ್ವಿಕೆ ಅವಧಿಯಲ್ಲಿ ನೀರಿನ ಸಂರಕ್ಷಣೆ ಹಾಗೂ ಗದ್ದೆ ಬೇಸಾಯಕ್ಕೆ ಅನುಕೂಲವಾಗುವಂತೆ ಆಗಿನ ಪಾಳೆಗಾರ ಗುರುವಯ್ಯ ಕೆರೆಯ ನಿರ್ಮಿಸಿದ್ದರು ಎನ್ನುತ್ತದೆ ಇತಿಹಾಸ. ಪ್ರಸಕ್ತ ಈ ಕೆರೆ ನಿರ್ವಹಣೆ ಇಲ್ಲದೆ ಹೂಳು ತುಂಬಿ, ಕೆಲವೆಡೆ ಅತಿಕ್ರಮಣಗೊಂಡು ಕಿರಿದಾಗತೊಡಗಿದೆ.
Related Articles
Advertisement
ಪ್ರವಾಸಿ ಕೇಂದ್ರವಾಗಿ ಗುರುವಾಯನ ಕೆರೆ ಅಭಿವೃದ್ಧಿಪಡಿಸುವ ದೂರದೃಷ್ಟಿ ಚಿಂತನೆಯೊಂದಿಗೆ ಶಾಸಕ ಹರೀಶ್ ಪೂಂಜ ಈಗಾಗಲೆ ನೀಲ ನಕಾಶೆ ಸಿದ್ಧಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಹಕಾರದಿಂದ ಉಪ್ಪಿನಂಗಡಿ ಸಮೀಪದ ಮೊಗ್ರು ಗ್ರಾಮದಲ್ಲಿ ನೇತ್ರಾವತಿಗೆ ಅಡ್ಡಲಾಗಿ ಮೊಗ್ರು-ಮುಗೇರಡ್ಕದಲ್ಲಿ ನಿರ್ಮಾಣವಾಗಲಿರುವ 240 ಕೋ.ರೂ. ವೆಚ್ಚದ ಸೇತುವೆ ಸಹಿತ ಬೆಳ್ತಂಗಡಿ ಏತ ನೀರಾವರಿ ಯೋಜನೆಯ ಒಂದು ಭಾಗವಾಗಿ 18 ಕೋ.ರೂ. ವೆಚ್ಚದಲ್ಲಿ ಗುರುವಾಯನ ಕೆರೆ ಅಭಿವೃದ್ಧಿ ಕಾರ್ಯ ನಡೆಯಲಿದೆ.
ಬೋಟಿಂಗ್ ವ್ಯವಸ್ಥೆ:
ಗುರುವಾಯನಕೆರೆ ಬಹುತೇಕ ವರ್ಷಂಪೂರ್ತಿ ನೀರಿನಿಂದ ಕೂಡಿರುತ್ತದೆ. ಬೇಸಗೆಯಲ್ಲಿ ನೀರಿನ ಕೊರತೆಯಾಗದಂತೆ ಏತ ನೀರಾವರಿ ಯೋಜನೆಯಡಿ ವರ್ಷಪೂರ್ತಿ ನೀರಿನ ಸೌಲಭ್ಯ ಒದಗಿಸಲಾಗುತ್ತದೆ. ಈ ಮೂಲಕ ಬೋಟಿಂಗ್ ವ್ಯವಸ್ಥೆಗೆ ಚಿಂತನೆ ನಡೆಸಲಾಗಿದೆ. ತಡೆಬೇಲಿ ರಚಿಸಿ ವಾಚಿಂಗ್ ಗಾರ್ಡ್ ಜತೆಗೂಡಿ ಬೋಟಿಂಗ್ ವ್ಯವಸ್ಥೆ ಇರಲಿದೆ. ಅದಕ್ಕೆ ಇಂತಿಷ್ಟು ಪಾವತಿ ರೂಪದಲ್ಲಿ ಅದರ ನಿರ್ವಹಣೆ ಕಾರ್ಯವೂ ನಡೆಯಲಿದೆ. ಬೆಳೆಯುತ್ತಿರುವ ಬೆಳ್ತಂಗಡಿಗೆ ನಾನಾ ಕೊರತೆಗಳನ್ನು ನೀಗಿಸುವಲ್ಲಿ ಈಗಾಗಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಗುರುವಾಯನಕೆರೆ ಅಭಿವೃದ್ಧಿ ಇದಕ್ಕೊಂದು ಸೇರ್ಪಡೆಯಾಗಲಿದೆ. ಆ ಮೂಲಕ ಪ್ರವಾಸೋದ್ಯಮ ಕೇಂದ್ರವಾಗಲಿದೆ. ಪ್ರಸಕ್ತ ಪೂಂಜಾಲಕಟ್ಟೆ-ಚಾರ್ಮಾಡಿ ಚತುಷ್ಪಥ ರಸ್ತೆ ಕಾಮಗಾರಿಯ ಚಿಂತನೆ ಚುರುಕುಗೊಂಡಿದ್ದು, ಸರ್ವೇ ಕಾರ್ಯ ನಡೆದು ನೋಟಿಫಿಕೇಶನ್ ಡಿಸೆಂಬರ್ ಒಳಗಾಗಿ ನಡೆದಲ್ಲಿ ಗುರುವಾಯನಕೆರೆ ರಸ್ತೆಯ ಸಂಚಾರ ದಟ್ಟಣೆಗೂ ಮುಕ್ತಿ ದೊರೆಯಲಿದೆ. ಅತ್ತ ಮೂಡುಬಿದಿÃ-ಕಾರ್ಕಳದಿಂದ ಆಗಮಿಸುವವರಿಗೆ, ಇತ್ತ ಉಪ್ಪಿನಂಗಡಿ ಕಡೆಯಿಂದ ಅತ್ತ ಬೆಂಗಳೂರಿಂದ ಬರುವ ಪ್ರವಾಸಿಗರನ್ನು ಗುರುವಾಯನಕೆರೆ ಆಕರ್ಷಿಸಲಿದ್ದು ಪ್ರವಾಸೋಧ್ಯಮ ಬಲವರ್ಧನೆಗೆ ಮತ್ತಷ್ಟು ಶಕ್ತಿ ನೀಡಲಿದೆ.
ಹೂಳು ತೆರವು :
ಮಳೆಗಾಲ ಪೂರ್ಣಗೊಂಡ ತತ್‌ಕ್ಷಣವೇ ಕೆರೆಯ ಒತ್ತುವರಿ ಪ್ರದೇಶದ ಸರ್ವೇ ಕಾರ್ಯ ನಡೆದು ಒತ್ತುವರಿ ತೆರವುಗೊಳಿಸಲಾಗುತ್ತದೆ. ಬಳಿಕ ಸಂಪೂರ್ಣ ನೀರನ್ನು ಆವಿಗೊಳಿಸಿ ಪ್ರಥಮ ಹಂತದಲ್ಲಿ ಕೆರೆ ಸುತ್ತ ತಡೆಗೋಡೆ (ರಿಟೇನಿಂಗ್ ವಾಲ್)ನಿರ್ಮಾಣ ಕಾರ್ಯ ಆರಂಭವಾಗಲಿದೆ. ಈ ಕಾರ್ಯ ಮುಗಿದಾಗ ಸಂಪೂರ್ಣ ಹೂಳು ತೆರವಾಗಲಿದೆ. ಈ ವೇಳೆಗಾಗಲೆ ಕೆರೆ ಚಿತ್ರಣ ಬದಲಾಗಲಿದೆ.
ವಾಕಿಂಗ್ ಟ್ರ್ಯಾಕ್-ಪ್ಲೇ ಗ್ರೌಂಡ್ :
ಕೆರೆ ಸುತ್ತ ಪ್ರವಾಸಿಗರಿಗೆ ಹಾಗೂ ವಾಕಿಂಗ್ ತೆರಳುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಂದರ ವಾಕಿಂಗ್ ಟ್ರ್ಯಾಕ್ ನಿರ್ಮಾಣವಾಗಲಿದೆ. ಕುಳಿತುಕೊಳ್ಳಲು ಆಸನ, ಸಂಜೆಯ ವಿವಾಹರಕ್ಕೆ ಅನುಕೂಲವಾಗುವಂತೆ ಲೈಟಿಂಗ್ ವ್ಯವಸ್ಥೆ, ವಾಹನ ಪಾರ್ಕಿಂಗ್‌ಗೆ ಬೇಕಾದ ಸ್ಥಳವನ್ನ ಕಾಯ್ದಿರಿಸಲಾಗುತ್ತದೆ. ಇಷ್ಟೇ ಅಲ್ಲದೆ ಮಕ್ಕಳ ಆಕರ್ಷಣೆಯ ಕೇಂದ್ರವಾಗಿಸುವಲ್ಲಿ ಪ್ಲೇ ಗ್ರೌಂಡ್ ರಚನೆಯಾಗಲಿದೆ.
ಪ್ರವಾಸೋದ್ಯಮ ಊರಿನ ಜನರಿಗೆ ಉದ್ಯೋಗದ ಜತೆಗೆ ಆದಾಯದ ಶಕ್ತಿಯಾಗಿದೆ. ತಾಲೂಕಿನಲ್ಲಿ ಈಗಾಗಲೆ ಉಜಿರೆ ಅತ್ತಾಜೆ ಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಇದೇ ಹಾದಿಯಲ್ಲಿ ಗುರುವಾಯನ ಕೆರೆ ಸಮಗ್ರ ಅಭಿವೃದ್ಧಿಗೆ 18 ಕೋ.ರೂ. ಇರಿಸಲಾಗಿದೆ. ಪ.ಪಂ. ವ್ಯಾಪ್ತಿಯ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ನರಸಿಂಹಘಡ, ಜಲಪಾತ ತಾಣಗಳೆಡೆಗೂ ಹೊಸ ರೂಪ ನೀಡಲಾಗುವುದು. –ಹರೀಶ್ ಪೂಂಜ, ಶಾಸಕರು
-ಚೈತ್ರೇಶ್ ಇಳಂತಿಲ