Advertisement

ತಪ್ಪಿನ ಮೇಲೆ ತಪ್ಪು, ಸರಿಪಡಿಸುವಲ್ಲಿ ಗುರುಗಳೇ ಬೆಪ್ಪು!

06:30 AM Jul 23, 2017 | Team Udayavani |

ಬೆಂಗಳೂರು: “ಮಕ್ಕಳೇ… ಪಾಠ-1ರ ಪುಟ ಸಂಖ್ಯೆ-59ರ 4ನೇ ಸಾಲಿನಲ್ಲಿ “ಮರಕಳಿಸಿತು’ ಎಂಬ ಪದವಿದೆ ನೋಡಿ, ಅದು ತಪ್ಪು, ನೀವು ಅದನ್ನು “ಮರುಕಳಿಸಿತು’ ಎಂದು ಮಾಡಿಕೊಳ್ಳಿ. ಹಾಗೆಯೇ, ಪಾಠ-1ರ 2ನೇ ಪುಟದ 8ನೇ ಸಾಲಿನಲ್ಲಿನ “ಬರಾನಿಯ ತಾರೀಖ್‌-ಎ-ಫಿರೋಜ್‌ ಪಾಹಿ’ ಎಂದು ಬರೆದಿದೆಯಲ್ಲವೇ? ಅದನ್ನು ಓದಿಕೊಳ್ಳಲೇಬೇಡಿ, ಅದನ್ನು ಗೀಚಿಬಿಡಿ. ಆಯ್ತಲ್ಲ, ಪಾಠ 5ರ 25ನೇ ಪುಟದ 24ನೇ ಸಾಲಿನ 3ನೇ ಪ್ರಶ್ನೆ ಬೇಡವೇ ಬೇಡ. ಅದು ನಿಮಗಲ್ಲವೇ ಅಲ್ಲ’

Advertisement

ಇದೇನು ಅಂತ ಬಿಟ್ಟ ಕಣ್ಣು ಬಿಟ್ಟ ಹಾಗೆಯೇ ನೋಡುತ್ತಿದ್ದೀರಲ್ಲವೇ? ಹೌದು, ಈ ಗೊಂದಲ ಓದುಗರಾದ ನಿಮಗಷ್ಟೇ ಅಲ್ಲ, ಶಿಕ್ಷಕರಿಗೆ, ಮಕ್ಕಳಿಗೆ ಕೂಡ ಇದೆ. ಏಕೆಂದರೆ, ಒಂದರಿಂದ ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳಲ್ಲಿರುವ ತಪ್ಪುಗಳನ್ನು ಸರಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲೆ ಬಿದ್ದಿದೆ. ಸುಮಾರು 200 ತಪ್ಪುಗಳನ್ನು ಗುರುತಿಸಿಕೊಂಡಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ 19 ಪುಟಗಳ “ಸರಿ ಹೊತ್ತಗೆ’ಯ ತಿಧ್ದೋಲೆಗಳನ್ನು ನೀಡಿದೆ. ಇದನ್ನು ಶಿಕ್ಷಕರು ಮಕ್ಕಳಿಗೆ ತಿಳಿಸುವುದರ ಜತೆಗೆ, ಪಠ್ಯಪುಸ್ತಕದಲ್ಲಿಯೂ ತಿದ್ದುಪಡಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಅದು ಹೇಗೆಂದರೆ,
-9ನೇ ತರಗತಿ ಒಳಗೆ ಪ್ರವೇಶ ಮಾಡುವ ಸಮಾಜ ವಿಜ್ಞಾನ ಬೋಧನೆ ಮಾಡುವ ಶಿಕ್ಷಕ ತನಗೆ ಬಂದಿರುವ ತಿಧ್ದೋಲೆಯನ್ನು ಮೊದಲು ಮಕ್ಕಳಿಗೆ ತಿಳಿಸಿಬೇಕು. “ಸಮಾಜ ವಿಜ್ಞಾನ ಭಾಗ-1ರ ಇತಿಹಾಸ ಪಾಠದ 45ನೇ ಪುಟದ 19ನೇ ಸಾಲಿನಲ್ಲಿ “ಆಳ್ವದಳ’ ಎಂಬ ಪದವಿದೆ. ಅದು ಸರಿಯಲ್ಲ, ಇದನ್ನು “ಅಶ್ವದಳ’ ಎಂದು ಮಾಡಿಕೊಳ್ಳಬೇಕು’ ಎಂದು ಪರಿಷ್ಕರಿಸಿದ ನಂತರವೇ ನಿತ್ಯದ ತರಗತಿ ಆರಂಭಿಸಬೇಕಾಗುತ್ತದೆ.

ಪಠ್ಯಪುಸ್ತಕದ ತಪ್ಪುಗಳನ್ನೆಲ್ಲ ಸಂಗ್ರಹಿಸಿ 19 ಪುಟದ ತಿಧ್ದೋಲೆಯನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ಮೂಲಕ ಶಿಕ್ಷಣ ಇಲಾಖೆಗೆ ನೀಡಲಾಗಿದೆ. ಶಿಕ್ಷಣ ಇಲಾಖೆಯಿಂದ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳಿಗೂ ಕಳುಹಿಸಲಾಗುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಯ ಮುಖ್ಯಶಿಕ್ಷಕರಿಗೆ ತಲುಪಿಸಲಿದ್ದಾರೆ. ಮುಖ್ಯಶಿಕ್ಷಕರು ಅದನ್ನು ಸಂಬಂಧಪಟ್ಟ ಸಹ ಶಿಕ್ಷಕರಿಗೆ ವಿತರಿಸಲಿದ್ದಾರೆ.

ತಪ್ಪು ಪತ್ತೆಹಚ್ಚಿದ ತಂಡ:
2017-18ನೇ ಸಾಲಿಗೆ ಪರಿಷ್ಕರಣೆಗೊಂಡಿರುವ ಪುಸ್ತಕದಲ್ಲಿ ಶಬ್ದಗಳು ತಪ್ಪಾಗಿದೆ. ವಾಕ್ಯರಚನೆಯಲ್ಲಿ ವ್ಯತ್ಯಾಸವಾಗಿದೆ, ಅಕ್ಷರಗಳು ಸರಿಯಾಗಿ ಕಾಣಿಸುತ್ತಿಲ್ಲ. ಹೀಗೆ ನಾನಾ ರೀತಿಯ ತಪ್ಪುಗಳಿವೆ ಎಂದು ಸಾರ್ವನಿಕ ವಲಯದಿಂದ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ಅವರು, 1ರಿಂದ 10ನೇ ತರಗತಿಯ ಪರಿಷ್ಕೃತ ಪುಸ್ತಕದಲ್ಲಿನ ತಪ್ಪುಗಳ ಪತ್ತೆಗೆ ತಜ್ಞರ ತಂಡ ರಚನೆ ಮಾಡಿದ್ದರು.

Advertisement

1ರಿಂದ 10ನೇ ತರಗತಿಯ ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ ಹೀಗೆ ವಿವಿಧ (ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆ) ಭಾಷಾ ವಿಷಯದ ಪಠ್ಯಪುಸ್ತಕದಲ್ಲಿರುವ ಸ್ಪೆಲ್ಲಿಂಗ್‌ ಮಿಸ್ಟೇಕ್‌ ಹಾಗೂ ತಪ್ಪುಗಳನ್ನು ಪತ್ತೆ ಹಚ್ಚಲು 20 ಸದಸ್ಯರ ತಂಡದ ಜತೆಗೆ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯದ ಪಠ್ಯದಲ್ಲಿರುವ ಲೋಪದೋಷ ಪತ್ತೆ ಹಚ್ಚಲು ಮೂರು ವಿಷಯಕ್ಕೂ 10 ಸದಸ್ಯರ ಪ್ರತ್ಯೇಕ ತಂಡ ರಚಿಸಿದ್ದರು.

ಸಮಿತಿಯ ಸದಸ್ಯರೊಬ್ಬರಿಗೆ ಎರಡು ಪುಸ್ತಕ ಪರಿಶೀಲಿಸುವ ಜವಾಬ್ದಾರಿ ನೀಡಲಾಗಿದೆ. ಎಲ್ಲಾ ಸದಸ್ಯರು ಸೇರಿ ಪರಿಷ್ಕೃತ ಪಠ್ಯವನ್ನು ಕೂಲಂಕಷವಾಗಿ ಪರಿಶೀಲಿಸಿ, 200 ತಪ್ಪು ಹಾಗೂ ವಾಕ್ಯರಚನೆ ಮತ್ತು ಹೆಸರು ಇತ್ಯಾದಿಯನ್ನೇ ಬದಲಾಗಿರುವುದನ್ನು ಯಾವ ಪುಟ, ಯಾವ ಪ್ಯಾರ ಹಾಗೂ ಎಷ್ಟನೇ ಸಾಲಿನಲ್ಲಿದೆ ಎಂಬುದರ ಮಾಹಿತಿಯನ್ನು  ವಿವರಣೆ ಸಮೇತ ನೀಡಿದ್ದರು. ಅದರ ಆಧಾರದಲ್ಲಿ ಸಮಿತಿಯು ತಿಧ್ದೋಲೆಯನ್ನು ರಚಿಸಿ, ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ನೀಡಿದ್ದು, ಸಂಘದಿಂದ ಅದನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದೆ.

ತಿಧ್ದೋಲೆ ಹೊಸತೇನಲ್ಲ, ಪ್ರತಿವರ್ಷ  ಪಠ್ಯದಲ್ಲಿ ಈ ರೀತಿಯ ಸಣ್ಣಪುಟ್ಟ ಲೋಪ ಇರುತ್ತದೆ. ಆದರೆ, ನಾವು ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ತಪ್ಪು ಯಾರೇ ಮಾಡಿದರೂ ತಪ್ಪೇ ಆಗಿರುತ್ತದೆ. ಇದು ಪರಿಷ್ಕರಣಾ ಮಂಡಳಿಯ ತಪ್ಪಲ್ಲ. ಮುದ್ರಣ ಹಾಗೂ ಟೈಪ್‌ ಮಾಡಿರುವವರ ತಪ್ಪು, ಪ್ರೂಫ್  ರೀಡಿಂಗ್‌ ಸರಿಯಾಗಿ ಮಾಡಿದ್ದರೆ ಇಷ್ಟು ಗೊಂದಲ ಆಗುತ್ತಿರಲಿಲ್ಲ.
-ಪ್ರೊ. ಬರಗೂರು ರಾಮಚಂದ್ರಪ್ಪ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next