Advertisement

ಅಗತ್ಯಕ್ಕೆ ತಕ್ಕಂತೆ ಆದಾಯ ತರಬಲ್ಲ ಪ್ರತಿಭೆ

11:59 PM Jan 13, 2023 | Team Udayavani |

ಇಂದು ಉದಯವಾಣಿ ಫೇಸ್‌ಬುಕ್‌ ನಲ್ಲಿ ಪ್ರಸಾರ ಗುರುರಾಜ ಮಾರ್ಪಳ್ಳಿಯವರು ಕೊಳಲಿನಲ್ಲಿ ಯಕ್ಷಗಾನದ ಹಾಡುಗಳನ್ನು ನುಡಿಸುವ ಕಾರ್ಯಕ್ರಮ ಜ. 14 ರಂ ದು ರಾತ್ರಿ 7 ಕ್ಕೆ ಉದಯವಾಣಿ ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದೆ.

Advertisement

ಕರ್ನಾಟಕ ಗೃಹ ಮಂಡಳಿಯಲ್ಲಿದ್ದರೂ ಅಪ್ರಾಮಾಣಿಕತೆಯಲ್ಲಿ ತಜ್ಞರಾಗಿರದ ಖ್ಯಾತ ಕವಿ ಕೆ.ಎಸ್‌.ನರಸಿಂಹಸ್ವಾಮಿಯವರಿಗೆ ಹಣದ ಅಡಚಣೆಯಾದಾಗ ಕವನಸಂಕಲನದ ಹಕ್ಕುಗಳನ್ನು ಮಾರಿದರು, ಆಕಾಶವಾಣಿಗೆ ಗೇಯನಾಟಕಗಳನ್ನು ಬರೆದು ಕೊಡುತ್ತಿದ್ದರು. ಇವರನ್ನು ನೆನೆದಾಗ ನಮ್ಮ ನಡುವಿರುವ ಗುರುರಾಜ ಮಾರ್ಪಳ್ಳಿಯವರು ನೆನಪಾಗುತ್ತಾರೆ.

ಡಾ|ಶಿವರಾಮ ಕಾರಂತರಂತೆ ಬದುಕಬೇಕು ಎಂದು ಬಿಎ ಪರೀಕ್ಷೆ ಬರೆಯದೇ, ಕಾಲ ಸರಿದ ಮೇಲೆ ಕಾರಂತರ ಅನುಸರಣೆ ಆಗುವುದು ಬೇಡವೆಂದು ನೇರವಾಗಿ ಎಂಎ ಪದವಿ ಗಳಿಸಿದ ವ್ಯಕ್ತಿ, ನಾಟಕ ನಿರ್ದೇಶನ-ರಚನೆ- ಸಂಗೀತ ನಿರ್ದೇಶನ, ಸಿನೆಮಾ ಸ್ಕ್ರಿಪ್ಟ್, ಯಕ್ಷಗಾನ ಭಾಗವತಿಕೆ-ವೇಷ, ಸ್ವರ ಪ್ರಸ್ತಾರ ಹಾಕುವುದು, ಚಿತ್ರಕಲೆ-ಕಾಷ್ಠಶಿಲ್ಪ, ವ್ಯಂಗ್ಯಚಿತ್ರ, ಕವಿ, ಕಾದಂಬರಿಕಾರ, ಪತ್ರಕರ್ತ, ಕೊಳಲು, ಚೆಂಡೆ, ಮದ್ದಳೆ, ಮೃದಂಗ, ಕೀಬೋರ್ಡ್‌, ತಬ್ಲಾ ಇತ್ಯಾದಿ ಸಂಗೀತೋಪಕರಣಗಳಲ್ಲಿ ಕೈಯಾಡಿಸಿ ಜೀವನ ನಿರ್ವಹಣೆಗೆ ನಿರ್ದಿಷ್ಟ ಆದಾಯದ ವೃತ್ತಿ ಹಿಡಿ ಯದೆ ಅಗತ್ಯಕ್ಕೆ ತಕ್ಕಂತೆ ಆದಾಯ ಗಳಿಸುವ ಪ್ರತಿಭಾ ಶಾಲಿ ಗುರುರಾಜ ಮಾರ್ಪಳ್ಳಿ ಅವರಿಗೆ “ಹುಟ್ಟಿದ್ದೇಕೆ?ಏಕೆ ಬದು ಕುತ್ತಿದ್ದೇವೆ?’ ಎಂಬ ನಿಗೂಢತೆ ಬಗ್ಗೆ ತಣಿಯದ ಕುತೂಹಲವಿದೆ.

***

ಉಡುಪಿ ಹೊರವಲಯದ ಮಾರ್ಪಳ್ಳಿ ಗುರು ರಾಜರ ಹುಟ್ಟಿದೂರು. ಎಲ್ಲರ ಮನೆಯಂತೆ ಆಸ್ತಿ ಪಾಸ್ತಿ ತಕರಾರು ಗುರುರಾಜರನ್ನು ಹೊರಗುಳಿಸಿದರೂ ಕಾಪು ತಾಲೂಕು ಮಜೂರಿನಲ್ಲಿ ನೆಲೆಸಿ ಮಾರ್ಪಳ್ಳಿ ಊರನ್ನು ತಮ್ಮ ಹೆಸರಿನಿಂದ ಹೊರಗುಳಿಸಲಿಲ್ಲ. ತನ್ನ, ಅಕ್ಕ, ತಂಗಿ ಯರ ಸಂಸಾರದ  ಹೊಣೆಗಾರಿಕೆ ನಿಭಾವಣೆಗೆ ಅವರು ನಿರ್ದಿಷ್ಟ ಆದಾಯದ ವೃತ್ತಿಯನ್ನು ಕೈಗೊಳ್ಳಲಿಲ್ಲ.

Advertisement

1994ರಲ್ಲಿ ಅವರಿಗೆ ವಾರಕ್ಕೆ ಸುಮಾರು 4,000 ರೂ. ಆದಾಯ ಬೇಕಿತ್ತು. ಸೋದರಿಯ ಮಕ್ಕಳಾದ ರವಿ ಕಿರಣ್‌ (ಹಾಡುಗಾರಿಕೆ), ಶಶಿಕಿರಣ್‌ (ತಬ್ಲಾ), ಬನ್ನಂಜೆ ಗೋವಿಂದಾಚಾರ್ಯರ ಪುತ್ರಿ ಕವಿತಾ ಬನ್ನಂಜೆ (ಹಾಡು ಗಾರಿಕೆ), ದೇವದಾಸ ಕೂಡ್ಲಿ (ಮದ್ದಳೆ) ಅವರನ್ನು ಒಳ ಗೊಂಡ ತಂಡ “ನಿನಾದ’ ದಿಂದ ಕಾರ್ಯಕ್ರಮಗಳನ್ನು ನೀಡಿ ಅಗತ್ಯದ ಆದಾಯವನ್ನು ನಾಲ್ಕು ವರ್ಷ ಗಳಿಸಿ ದರು. ತಾತ್ವಿಕ ನೆಲೆಯ ಹಾಡು ಗಳನ್ನು ಹಾಡುತ್ತಿದ್ದುದು ಜನಾಕರ್ಷಣೆಯಾಗಿತ್ತು. ತಂಡದ ಸಾಮರ್ಥ್ಯ ಕಂಡ ಕವಿ ಡಾ| ಲಕ್ಷ್ಮೀನಾರಾಯಣ ಭಟ್ಟರು ಬೆಂಗಳೂರಿಗೆ ಕರೆಸಿ 40 ಸಾವಿರ ರೂ. ಸಂಗ್ರಹಿಸಿ ಕೊಟ್ಟದ್ದಲ್ಲದೆ ಬೆಂಗಳೂರಿನಲ್ಲಿ  ನೆಲೆಸಲೂ  ಸಲಹೆ ನೀಡಿದ್ದರು. ಇಂತಹ ಬಂಧನದಿಂದ ಮಾರ್ಪಳ್ಳಿ ಸದಾ ಹೊರಗಿರುವವರು.

ಸಿನೆಮಾಕ್ಕೆ ಸ್ಕ್ರಿಪ್ಟ್ ಬರೆಯುವುದರಿಂದ 25 ಸಾವಿರ ರೂ. ಸಿಗುತ್ತದೆ. “ವಿಮುಕ್ತಿ’, “ಶಂಕರ ಪುಣ್ಯಕೋಟಿ’, “ಭೂ ನಾಟಕ ಮಂಡಳಿ’ ಸಿನೆಮಾಗಳಿಗೆ ಸ್ಕ್ರಿಪ್ಟ್ ಬರೆದ ಹಿರಿಮೆ ಗುರುರಾಜರದ್ದು. ಬಿ.ವಿ.ಕಾರಂತ್‌, ಚಿದಂಬರ ರಾವ್‌ ಜಂಬೆ ಯಂತಹ ಹಿರಿಯರ ಜತೆಗಿನ ಅನುಭವ ದಿಂದ ನಾಟಕ ನಿರ್ದೇಶನ, ರಚನೆ, ಸಂಗೀತ ನಿರ್ದೇಶನ ದಿಂದಲೂ ಆದಾಯ ಬರುತ್ತಿತ್ತು. ಮಧ್ಯೆ ಮಧ್ಯೆ ಯಕ್ಷ ಗಾನದ ಗೀಳೂ ಒಂದಿಷ್ಟು ದುಡಿಮೆಯನ್ನು ತರುತ್ತಿತ್ತು. ಕೊರೊನಾ ಅವಧಿಯಲ್ಲಿ ಬಿ.ಆರ್‌.ಲಕ್ಷ್ಮಣರಾವ್‌ರಂ ತಹ ಕವಿಗಳ ಹಾಡುಗಳಿಗೆ ಸಂಗೀತ ಸಂಯೋಜಿಸಿ ಕಳುಹಿಸಿದಾಗ ಅದನ್ನು ಕಲಾವಿದೆ ಮಾನಸಿ ಕೊಡವೂರು ದೃಶ್ಯ ಕಾವ್ಯವಾಗಿಸಿ ಯೂಟ್ಯೂಬ್‌ನಲ್ಲಿ ಬಿತ್ತರಿಸಿದರು. ಇದೂ ಮಾರ್ಪಳ್ಳಿಯವರಿಗೆ ಆದಾಯವಾಯಿತು.

ಮನೆಯ ನಿರ್ವಹಣೆಗಾಗಿ ಮಲ್ಲಿಗೆ, ಹೈನುಗಾರಿಕೆ, ಭತ್ತ ಕೃಷಿಯನ್ನು ನಡೆಸಿದ್ದ ಮಾರ್ಪಳ್ಳಿಯವರಿಗೆ ಅವಲ ಕ್ಕಿಗೆ ನೀರು ಹಾಕಿ ಹಸಿವು ಇಂಗಿಸಿಕೊಂಡ ಅನುಭವವೂ ತಾಳ್ಮೆಯನ್ನು ಕಲಿಸಿದೆ. “ತರಂಗ’ವೇ ಮೊದಲಾದ ಪತ್ರಿಕೆ ಗಳಿಗೆ ಕತೆಗಳನ್ನು ಕಳುಹಿಸುತ್ತಿದ್ದ ಅವರು ಪತ್ರಕರ್ತರೂ ಆಗಿದ್ದರು. “ಅವ್ವ ನನ್ನವ್ವ’ ಐದನೇ ಕಾದಂಬರಿ ಹೊರಬರಲಿದೆ, ಸಿನೆಮಾ ಆಗುವ ಸಾಧ್ಯತೆಯೂ ಇದೆ. 3ಕಥಾಸಂಕಲನ, 7 ನಾಟಕಗಳು ಹೊರಬಂದಿವೆ. ಒಟ್ಟು 1,200 ಕವನಗಳನ್ನು ಬರೆದಿದ್ದಾರೆ. ಮೊದಲ ಕವನವನ್ನು “ಉದಯವಾಣಿ’ಯಲ್ಲಿ ಪ್ರಕಟಿಸಿ ಬನ್ನಂಜೆ ಗೋವಿಂದಾ ಚಾರ್ಯರು ಹುರಿದುಂಬಿಸಿದ್ದನ್ನು ಮಾರ್ಪಳ್ಳಿ ನೆನೆಯುತ್ತಾರೆ.

ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಎಂ.ಎ. ಹೆಗಡೆಯವರು ನೀಡಿದ 2 ಲ.ರೂ. ಅನುದಾನದಿಂದ 135 ಯಕ್ಷಗಾನದ ಹಾಡುಗಳಿಗೆ ಶಶಿಕಿರಣ್‌, ರವಿಕಿರಣ್‌ ಸಹಕಾರದಲ್ಲಿ ಸ್ವರಪ್ರಸ್ತಾರ ಹಾಕಿ ದಾಖಲಿಸಿ ಕೊಟ್ಟಿದ್ದಾರೆ.  “ಸತ್ಯವೇನು? ಹುಟ್ಟಿದ್ದು ಏಕೆ? ಇಷ್ಟೊಂದು ಜನ ಬದುಕುತ್ತಿರುವುದಾದರೂ ಏಕೆ?’ ಎಂಬಿತ್ಯಾದಿ ಜಿಜ್ಞಾಸೆಗಳು ಅವರನ್ನು ಕೆದಕುತ್ತಲೇ ಇರುತ್ತವೆ. “ಸೋಗಿನ ಬದುಕು ನಡೆಸಬೇಡ’ ಎಂಬ ಜಿಡ್ಡು ಕೃಷ್ಣಮೂರ್ತಿ ಮಾತು ಇವರಿಗೆ ಆಪ್ತವಾಕ್ಯ. ಆದ್ದರಿಂದಲೇ ಹೊರಗೆ ತೋರುವ ಜನಪ್ರಿಯತೆಗಿಂತ ಭಿನ್ನ. ಕಷ್ಟಪಟ್ಟು ಬದುಕುವವನಲ್ಲಿ ನೈತಿಕತೆ ಇರುತ್ತದೆ ಎಂಬ ನಂಬಿಕೆ ಇವರಿಗೆ. ಶುದ್ಧ ಸಂಗೀತದ ಯಕ್ಷಗಾನದ ಪ್ರಾತ್ಯಕ್ಷಿಕೆ ಕೊಡಬೇಕೆಂಬ ಹಂಬಲವಿದೆ. ಕೊಳಲಿನಲ್ಲಿ ನುಡಿಸಿ, ಸ್ವರಸಂಚಾರ ಮಾಡಿ ತೋರಿಸುವ ಪ್ರಾತ್ಯಕ್ಷಿಕೆ ಇದು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ

ವಿದ್ಯಾಲಯದವರ ಕೋರಿಕೆ ಮೇರೆಗೆ “ಭಗವದ್ಗೀತೆಯಲ್ಲಿ  ಅಹಿಂಸೆ’ ಕುರಿತು 200 ಎಪಿಸೋಡ್‌ಗಳನ್ನು ಸಂಯೋಜಿಸಲಿದ್ದಾರೆ.

ಇವರು ಪಟ್ಟು ಹಿಡಿದು ಕೆಲಸ ಮಾಡುವವರಲ್ಲ. ಮನಸ್ಸು ಬಂದಂತೆ ಮಾಡುವವರು. ಅವರ ದೃಷ್ಟಿಯಲ್ಲಿ ಹಣ ದೊಡ್ಡ ವಿಷಯವಲ್ಲ. ಸ್ನೇಹಿತರೂ ಸಕಾಲದಲ್ಲಿ ಸಾಲ ಕೊಟ್ಟು ಸಹಕರಿಸಿದ್ದಾರೆ. ಸಾಲ ಹಿಂದಿರುಗಿಸಲು ಹೋದಾಗ ಒಂದಿಷ್ಟು ಕಾಣಿಕೆ ಕೊಟ್ಟು ಕಳುಹಿಸುವ ತೋಕೂರು ರಾಮಚಂದ್ರ ಭಟ್ಟರಂತಹವರೂ, ಆಪತ್ಕಾಲದಲ್ಲಿ ಸಹಾಯ ಮಾಡುವ ಅಂಬಾಗಿಲಿನ ಲಕ್ಷ್ಮಣರಾಯ ಪ್ರಭು ಗಳಂತಹವರೂ ಇದ್ದಾರೆ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next