Advertisement

ಗುರುಪುರ: 37 ಕೋಟಿ ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣ

10:05 AM Jun 25, 2018 | |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರ- ಮೂಡಬಿದಿರೆ ನಡುವೆ ಫಲ್ಗುಣಿ ನದಿಗೆ ಗುರುಪುರದಲ್ಲಿ 37 ಕೋ. ರೂ. ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ಧರಿಸಿದೆ. ಮಳೆಗಾಲ ಮುಗಿದ ತತ್‌ಕ್ಷಣದಿಂದಲೇ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಗುರುಪುರದಲ್ಲಿ ಈಗ ಇರುವ ಸೇತುವೆ ಸುಮಾರು 95 ವರ್ಷಗಳಿಗೂ ಅಧಿಕ ಹಳೆಯದಾದ ಕಾರಣದಿಂದ ಶಿಥಿಲಾವಸ್ಥೆಯಲ್ಲಿದೆ. ಹೀಗಾಗಿ ಇಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಸುದೀರ್ಘ‌ ಕಾಲದಿಂದ ಕೇಳಿಬರುತ್ತಿತ್ತು.

Advertisement

ಫುಟ್‌ಪಾತ್‌ ವ್ಯವಸ್ಥೆ
ಈಗ ಇರುವ ಹಳೆ ಸೇತುವೆ 175 ಮೀ. ಉದ್ದ ಹಾಗೂ 5.10 ಮೀ. ನಷ್ಟು ಅಗಲವಿದೆ. ನೂತನ ಸೇತುವೆಯು 175 ಮೀ. ಉದ್ದವಿರಲಿದ್ದು, 16 ಮೀ. ಅಗಲವಿರಲಿದೆ. ಹಳೆ ಸೇತುವೆ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣವಾಗಲಿದೆ. ದ್ವಿಪಥ ರಸ್ತೆಯ ಜತೆಗೆ ಜನರು ನಡೆದುಕೊಂಡು ಹೋಗಲು ಫುಟ್‌ಪಾತ್‌ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಜತೆಗೆ ಸೇತುವೆಗೆ ಸಂಪರ್ಕ ರಸ್ತೆಯನ್ನು ಕೂಡ ನಿರ್ಮಿಸಲಾಗುತ್ತದೆ.

ಒಂದು ತಿಂಗಳಲ್ಲಿ ಟೆಂಡರ್‌
ಈ ಮೊದಲು ಗುರುಪುರ ಹೊಸ ಸೇತುವೆಗೆ 33 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಿದ್ಧ ಪಡಿಸಲಾಗಿದ್ದು, ಈಗ ಈ ಮೊತ್ತವನ್ನು 37 ಕೋಟಿ ರೂ. ಗಳಿಗೆ ಏರಿಸಿ ವಿಸ್ತೃತ ಯೋಜನ ವರದಿಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದಾರೆ. ಇದಕ್ಕೆ ಒಪ್ಪಿಗೆ ದೊರೆತಿದೆ. ಟೆಂಡರ್‌ ಪ್ರಕ್ರಿಯೆಗೆ ಅನುಮೋದನೆ ಮುಂದಿನ ಒಂದು ತಿಂಗಳ ಒಳಗೆ ದೊರೆಯುವ ಸಾಧ್ಯತೆ ಇದೆ. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಇತ್ತೀಚೆಗೆ ಮಂಗಳೂರಿನಲ್ಲಿ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಈ ಕುರಿತಂತೆ ಮಾಹಿತಿ ಪಡೆದುಕೊಂಡಿದ್ದಾರೆ.

ಹಳೆಯ ಸೇತುವೆ ಯಥಾಸ್ಥಿತಿ
ಸಾರ್ವಜನಿಕ ಅಭಿಪ್ರಾಯದ ಪ್ರಕಾರ, 1923ರಲ್ಲಿ ಬ್ರಿಟಿಷರು ಕಪ್ಪಕಾಣಿಕೆ ಸಂಗ್ರಹಕ್ಕಾಗಿ ಫಲ್ಗುಣಿ ನದಿಗೆ ಅಡ್ಡಲಾಗಿ ಗುರುಪುರ ಸೇತುವೆ ನಿರ್ಮಾಣ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈಗ ಇದು ರಾಷ್ಟ್ರೀಯ ಹೆದ್ದಾರಿ ಸೇತುವೆಯಾಗಿ ಮಾರ್ಪಟ್ಟಿದೆ. ಈ ಸೇತುವೆ 40 ಟನ್‌ಗಳಷ್ಟು ಭಾರ ಹೊರುತ್ತಿದೆ. ಹೊಸ ಸೇತುವೆ ನಿರ್ಮಾಣ ಮಾಡಿದ ಅನಂತರ ಹಳೆ ಸೇತುವೆಯನ್ನು ಏನು ಮಾಡಬೇಕು ಎಂಬುದರ ಬಗ್ಗೆ ಇನ್ನೂ ರಾ.ಹೆ.ಇಲಾಖೆ ತೀರ್ಮಾನ ಕೈಗೊಂಡಿಲ್ಲ. ಪಾಣೆಮಂಗಳೂರಿನಲ್ಲಿ ಹೊಸ ಸೇತುವೆ ಆದ ಬಳಿಕವೂ ಹಳೆ ಸೇತುವೆಯಲ್ಲಿ ಪ್ರಯಾಣಕ್ಕೆ ಅವಕಾಶ ನೀಡಿದಂತೆ, ಇಲ್ಲೂ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.

ಸಾವಿರಾರು ವಾಹನಗಳ ಸಂಚಾರದ ಸೇತುವೆ
ಮಂಗಳೂರಿನಿಂದ ಕೈಕಂಬ, ಮೂಡಬಿದಿರೆ, ಕಾರ್ಕಳ ಮುಂತಾದ ಪ್ರದೇಶಗಳಿಗೆ ಸಂಪರ್ಕ ಸಾಧಿಸಲು ಗುರುಪುರ ಸೇತುವೆ ಪ್ರಮುಖ ಕೊಂಡಿಯಾಗಿದೆ. ನಿತ್ಯ ಬಸ್‌ಗಳು 500ಕ್ಕೂ ಹೆಚ್ಚು ಟ್ರಿಪ್‌ ನಡೆಸುತ್ತವೆ. ಇದರ ಜತೆಗೆ ಟಿಪ್ಪರ್‌, ಲಾರಿಗಳು ಸಹಿತ ಸಾವಿರಾರು ವಾಹನಗಳು ಓಡಾಡುತ್ತವೆ.

Advertisement

16 ಮೀ.ಅಗಲದ ನೂತನ ಸೇತುವೆ
ಗುರುಪುರ ನೂತನ ಸೇತುವೆಗೆ ಮಳೆಗಾಲದಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ, ಮಳೆಗಾಲದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಒಟ್ಟು 37 ಕೋ.ರೂ. ವೆಚ್ಚದಲ್ಲಿ 16 ಮೀ. ಅಗಲದಲ್ಲಿ ನೂತನ ಸೇತುವೆ ನಿರ್ಮಾಣವಾಗಲಿದೆ. 
– ಯಶವಂತ ಕುಮಾರ್‌,
ಸಹಾಯಕ ಕಾರ್ಯಪಾಲಕ
ಎಂಜಿನಿಯರ್‌, ರಾ.ಹೆ. ಉಪವಿಭಾಗ, ಮಂಗಳೂರು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next