Advertisement

ಗುರುನಾರಾಯಣ ರಾತ್ರಿ ಶಾಲೆ 57ನೇ ವಾರ್ಷಿಕೋತ್ಸವ

11:30 AM Jan 16, 2018 | |

ಮುಂಬಯಿ: ಬಡ ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದು ಎನ್ನುವ ದೃಷ್ಟಿ ಯಿಂದ ಬಿಲ್ಲವ ಸಮಾಜದ ಜಯ ಸುವರ್ಣರಂ ತಹ ಶಿಕ್ಷಣಾಭಿಮಾನಿಗಳು ಕನಿಷ್ಠ ರಾತ್ರಿ ಶಾಲೆ ಮೂಲಕವಾದರೂ ಮಕ್ಕಳನ್ನು ಓದಿಸಬೇಕು ಎಂದು ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡರು. ಪ್ರಸ್ತುತ ರಾತ್ರಿ ಶಾಲೆ ಓದಿ ಸಾಧನಾ ಶಿಖರಕ್ಕೇರಿ ಮೆರೆದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಪ್ರತಿಷ್ಠೆ ಯನ್ನು ತಂದೊದಗಿಸಿದ್ದು ಅಭಿಮಾನ ತಂದಿದೆ. ಮಹಾರಾಷ್ಟ್ರ ರಾಜ್ಯದ 173 ರಾತ್ರಿ ಶಾಲೆಯಲ್ಲಿ ಗುರು ನಾರಾಯಣ ರಾತ್ರಿ ಶಾಲೆ ಪ್ರಥಮ ಸ್ಥಾನದಲ್ಲಿರುವುದಕ್ಕೆ ಶಿಕ್ಷಕರ ಪ್ರಾಮಾಣಿಕ ದುಡಿಮೆ ಒಂಡೆಡೆಯಾದರೆ, ವಿದ್ಯಾರ್ಥಿಗಳ ಅವಿರತ ಶ್ರಮವೇ ಇದಕ್ಕೆ ಸಾಕ್ಷಿ ಎಣಿಸಿದೆ. ಹಗಲು ಶಾಲೆಗಳಗಿಂತ ರಾತ್ರಿ ಶಾಲೆಗಳಲ್ಲಿ ಕಲಿಯುವುದು ಕೀಳು ಅಲ್ಲ ಎಂದು ಈ ಮೂಲಕ ಶಾಲಾ ಮಕ್ಕಳು ತೋರಿಸಿಕೊಟ್ಟಿದ್ದಾರೆ. ಭವಿಷ್ಯತ್ತಿನಲ್ಲೂ ಉತ್ತಮವಾಗಿ ಕಲಿತು ದೇಶದ ಶ್ರೇಷ್ಠ ನಾಗರಿಕರಾಗುವಲ್ಲಿ ಇಂತಹ ಶಾಲೆಗಳು ಪ್ರೋತ್ಸಾಹಕವಾಗಲಿ ಎಂದು  ಬಿಲ್ಲವರ ಅಸೋಸಿಯೇಶನ್‌ನ ನಿಕಟಪೂರ್ವ ಅಧ್ಯಕ್ಷ, ಕನ್ನಡ ಸಂಘ ಸಾಂತಾಕ್ರೂಜ್‌ನ ಅಧ್ಯಕ್ಷ ಎಲ್‌. ವಿ. ಅಮೀನ್‌ ಅವರು ಅಭಿಪ್ರಾಯಿಸಿದರು.

Advertisement

ಜ. 13ರಂದು  ಸಾಂತಾಕ್ರೂಜ್‌ನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ನಡೆದ ಬಿಲ್ಲವರ ಅಸೋಸಿಯೇಶನ್‌ ಸಂಚಾಲಕತ್ವದ ಗುರುನಾರಾಯಣ ನೈಟ್‌ ಹೈಸ್ಕೂಲ್‌ನ  57 ನೇ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಕ್ಕಳಿಗೆ ಶುಭಹಾರೈಸಿದರು.

ಅಕ್ಷಯದ ಮಾಜಿ ಗೌರವ ಪ್ರಧಾನ ಸಂಪಾದಕ, ಭಾರತ್‌ ಬ್ಯಾಂಕ್‌ನ ನಿರ್ದೇಶಕ  ಎಂ.ಬಿ. ಕುಕ್ಯಾನ್‌ ಅವರು  ದೀಪ ಬೆಳಗಿಸಿ ಸಮಾರಂಭವನ್ನು  ಉದ್ಘಾಟಿಸಿ ಮಕ್ಕಳಿಗೆ ಹಿತವಚನ ನೀಡಿ ಶುಭಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌  ಮುಂಬಯಿ  ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಸ್ತು ಶಿಕ್ಷಣದ ಅಡಿಗಲ್ಲು ಎಂಬುವುದು ಜೀವನದಲ್ಲಿ ರೂಡಿಸಿಕೊಳ್ಳಬೇಕು. ಶಿಸ್ತಿನ ಶಿಕ್ಷಣ ಉತ್ತಮ ಪ್ರಜೆಗಳಾಗಲು ಸಾಧ್ಯ. ಅಂತಹ ಶಿಸ್ತಿನಿಂದ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಫಲಿತಾಂಶದ ಮೂಲಕ ಬಿಲ್ಲವರ ಅಸೋಸಿಯೇಶನ್‌ಗೆ ಕೀರ್ತಿ ತಂದಿದ್ದಾರೆ. ಇದು ಇದೇ ರೀತಿಯಲ್ಲಿ ಮುಂದುವರಿಯಬೇಕು. ಅದಕ್ಕಾಗಿ ಅಸೋಸಿಯೇಶನ್‌ ಎಲ್ಲಾ ರೀತಿಯಲ್ಲಿ ಸಹಕರಿಸಲಿದೆ ಎಂದರು.

ಗೌರವ ಅತಿಥಿಗಳಾಗಿ ಭಾರತ್‌ ಬ್ಯಾಂಕ್‌ನ ನಿರ್ದೇಶಕ ಭಾಸ್ಕರ ಎಂ. ಸಾಲ್ಯಾನ್‌, ತುಳು ಚಿತ್ರರಂಗದ ನಟ, ತೌಳವ ಸೂಪರ್‌ಸ್ಟಾರ್‌ ಸೌರಭ್‌ ಸುರೇಶ್‌ ಭಂಡಾರಿ ಅವರು ಉಪಸ್ಥಿತರಿದ್ದರು. ಅಸೋಸಿಯೇಶನ್‌ನ  ಉಪಾಧ್ಯಕ್ಷ ಶಂಕರ ಡಿ. ಪೂಜಾರಿ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ಅವರನ್ನೊಳಗೊಂಡು ಅತಿಥಿಗಳು ವಿವಿಧ ಸ್ಪರ್ಧೆಯಲ್ಲಿ ವಿಜೇತ ಮತ್ತು ಉತ್ತಮ  ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಹಾಗೂ ಗತ ಸಾಲಿನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶಾಲಾ ವಿದ್ಯಾರ್ಥಿನಿ ಕು| ಪ್ರೀತಿ ಮೂಲ್ಯ ಅವರಿಗೆ ಎಂ. ಬಿ. ಕುಕ್ಯಾನ್‌ ಅವರು  ಸ್ವರ್ಣ ಪದಕ ಪ್ರದಾನಿಸಿ ಅಭಿನಂದಿಸಿದರು.

Advertisement

ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕಿಯರುಗಳಾದ ಶಿವರಾಜ್‌ ಪಾಟೀಲ್‌, ಎಂ. ಐ. ಬಡಿಗೇರಾ, ಸಿದ್ಧರಾಮಯ್ಯ ದಶಮನಿ, ಮೋಹಿನಿ ಪೂಜಾರಿ, ಹೇಮಾ ಗೌಡ, ನವಿತಾ ಎಸ್‌. ಸುವರ್ಣ, ವಿಮಲಾ ಡಿ. ಎಸ್‌., ಮಲ್ಲೇಶ್‌ ಗೌಡ, ಸುನೀಲ್‌ ಪಾಟೀಲ್‌ ವಿದ್ಯಾರ್ಥಿ ಪ್ರತಿನಿಧಿ ಕಾಶಿನಾಥ್‌ ಎಲ್‌. ಮಾನ್ಕೋಜಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಬಂಗೇರ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಬಳಗ ಪ್ರಾರ್ಥನೆಗೈದರು. ಶಾಲಾ ಉಪ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್‌ ಸ್ವಾಗತಿಸಿದರು. ಆನಂದ ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರಯ್ಯ ಸಿ. ಅವರು ಶಾಲಾ  ವಾರ್ಷಿಕ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ಎಂ. ಐ. ಬಡಿಗೇರ ವಂದಿಸಿದರು. 

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕ ಸಿದ್ಧರಾಮ ದಶಮನಿ ನಿರ್ದೇಶನದಲ್ಲಿ ಶಾಲಾ ಅಧ್ಯಾಪಕರು ರಚಿತ “ಅವಿವೇಕಿ ಅರಸ ಅಜ್ಞಾನಿ ಪ್ರಜೆಗಳು’ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. 

ಸಂಸ್ಕಾರ ಮತ್ತು ಸಂಸ್ಕೃತಿ ಬೆಳಗಲು ಕಲೆ ಎಂಬುವುದು ಜ್ಯೋತಿ ಇದ್ದಂತೆ. ಇಂತಹ ಕಲೆಯ ಮೂಲಕ ತಮ್ಮ ಪ್ರತಿಭೆಯನ್ನು ವೇದಿಕೆಯಲ್ಲಿ ಅನಾವರಣಗೊಳಿಸಿರುವ ರಾತ್ರಿ ಶಾಲೆಯ ಮಕ್ಕ ಳನ್ನು ಕಂಡು ನನಗೆ ತುಂಬಾ ಖುಷಿ ತಂದಿದೆ ಹಾಗೂ ಅತೀವ ಅಭಿಮಾನವಾಗಿದೆ. ಕಲೆ ಮತ್ತು ಭವ್ಯ ಭಾರತದ ಸತøಜೆಗಳ ದೃಷ್ಟಿಯಿಂದ ನಾನು ಇಂತಹ ಮಕ್ಕಳಿಗೆ ಸಹಕಾರ ಪ್ರೋತ್ಸಾಹ ನೀಡಲು ಸಿದ್ಧ. ಮಕ್ಕಳೆಲ್ಲರೂ ಬದ್ಧತೆಯನ್ನು ಮೈಗೂಡಿಸಿ ಸುಶಿಕ್ಷಣ ಪಡೆದು ಕಲೆಯ ಮೂಲಕ ರಾಷ್ಟ್ರದ ಸಂಸ್ಕೃತಿ ಎತ್ತಿ ಹಿಡಿಯಬೇಕು 
– ಸೌರಭ್‌ ಎಸ್‌. ಭಂಡಾರಿ, ತುಳು ಚಿತ್ರ ನಟ

ಶಿಕ್ಷಕರು ಮಕ್ಕಳ ಪೋಷಕರೆಂದು ಭಾವಿಸಿ ವಿದ್ಯಾಭ್ಯಾಸ ನೀಡಿದಾಗ ಮಕ್ಕಳು ಸಂಸ್ಕಾರಯುತ ಬದುಕನ್ನು ಮೈಗೂಡಿಸಿ ಸರ್ವೋತ್ಕೃಷ್ಟ ಭವಿಷ್ಯ ರೂಪಿಸಲು ಸಾಧ್ಯ. ಇಂತಹ ಮಕ್ಕಳು ರಾಷ್ಟ್ರದ ಸತøಜೆಗಳಾಗಬಲ್ಲರು. ಮಕ್ಕಳು ಕೇವಲ ಪಠ್ಯ ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿರಬೇಕು. 
-ಧರ್ಮಪಾಲ ಜಿ. ಅಂಚನ್‌, ಗೌರವ ಪ್ರಧಾನ ಕಾರ್ಯದರ್ಶಿ, ಬಿಲ್ಲವರ ಅಸೋಸಿಯೇಶನ್‌, ಮುಂಬಯಿ

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next