Advertisement

ನಗುವ ಕಡಲೊಳೊಂದು ಅಳುವ ಹಾಯಿದೋಣಿ

10:49 AM Feb 12, 2017 | |

ಚಿತ್ರ: ಸ್ಮೈಲ್ ಪ್ಲೀಸ್‌  ನಿರ್ಮಾಣ: ಕೆ.ಮಂಜು  ನಿರ್ದೇಶನ: ರಘು ಸಮರ್ಥ್
ತಾರಾಗಣ: ಗುರುನಂದನ್‌, ಕಾವ್ಯಾಶೆಟ್ಟಿ, ನೇಹಾ ಪಾಟೀಲ್‌, ಶ್ರೀನಿವಾಸ ಪ್ರಭು, ರಂಗಾಯಣ ರಘು, ಅವಿನಾಶ್‌, ಸುಧಾ ಬೆಳವಾಡಿ ಇತರರು.

Advertisement

ಅವನದು ಹುಡುಗಾಟದ ಜೀವನ. ಎಲ್ಲವನ್ನೂ ಸಿಲ್ಲಿಯಾಗಿಯೇ ನೋಡುವ ಜಾಯಮಾನ. ಸಿಂಪಲ್‌ ಫ್ಯಾಮಿಲಿ ಹುಡುಗ. ಅವನಪ್ಪ ಮಿಲಿóಮ್ಯಾನ್‌ ಆಗದಿದ್ದರೂ ಸದಾ ಸ್ಟ್ರಿಕ್ಟ್ ಆಗಿರುವ ಸ್ವಭಾವ. ರಂಗನಾಯಕಿಯಂತಿರುವ ಅವನಮ್ಮನದು ಸದಾ ಮೇಕಪ್‌ ಮಾಡಿಕೊಂಡು, ಓವರ್‌ ಆ್ಯಕ್ಟಿಂಗ್‌ನಲ್ಲೇ ಕಾಲ ಕಳೆಯೋ ಖಯಾಲಿ. ನಾಳೆ ಬಗ್ಗೆ ಯೋಚಿಸದೆ, ಇರುವಷ್ಟು ದಿನ ನಗುತ್ತ, ನಗಿಸುತ್ತ ದಿನ ಸವೆಸಬೇಕು ಎಂಬ ಮನೋಭಾವದ ಹುಡಗನಿಗೆ, ಲೈಫ‌ಲ್ಲಿ ಗಂಭೀರತೆ ಅನ್ನೋದೇ ಇರೋದಿಲ್ಲ. ಅಂತಹವನಿಗೆ ಮದುವೆ ಮಾಡಿದರೆ ಗಂಭೀರತೆಯಾದರೂ ಬರಬಹುದು ಅಂತ ಮನೆಯವರು ಮದುವೆ ಮಾಡೋಕೆ ಮುಂದಾಗುತ್ತಾರೆ. ಬರೋಬ್ಬರಿ 100 ಹುಡುಗಿಯರನ್ನು ನೋಡುವ ಅವನು, ಯಾವೊಬ್ಬ ಹುಡುಗಿಯನ್ನೂ ಒಪ್ಪೋದಿಲ್ಲ! ಅದಕ್ಕೆ ಬಲವಾದ ಕಾರಣವೂ ಇದೆ. ಅದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ “ತಾಳ್ಮೆ’ಯಿಂದ ಸಿನಿಮಾ ನೋಡಬಹುದು.

ಕನ್ನಡದಲ್ಲಿ ಇದು ಹೊಸತನದ ಚಿತ್ರ ಅಂದುಕೊಳ್ಳುವಂತಿಲ್ಲ. ಅಂತಹ ಯಾವ ಪವಾಡವೂ ಇಲ್ಲಿ ನಡೆಯೋದಿಲ್ಲ. ಸಿನಿಮಾ ನೋಡುವಾಗ, ಹಾಗೊಮ್ಮೆ ತೆಲುಗು ನಟ ಪ್ರಭಾಸ್‌ ಅಭಿನಯದ “ಚಕ್ರಂ’ ಚಿತ್ರ ನೆನಪಾಗದೇ ಇರದು. ಹಾಗಾಗಿ ಕಥೆಯಲ್ಲೇನೂ ಹೆಚ್ಚು ವಿಶೇಷತೆಗಳಿಲ್ಲ. ಆದರೆ, ನಿರೂಪಣೆ ಬಗ್ಗೆ ವಿನಾಕಾರಣ ಮಾತಾಡುವಂತೂ ಇಲ್ಲ. ಮೊದಲರ್ಧ ಅಲ್ಲಲ್ಲಿ ಸತಾಯಿಸುವ ಚಿತ್ರಕಥೆ, ದ್ವಿತಿಯಾರ್ಧದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ ಎಂಬುದೊಂದೇ ಸಮಾಧಾನ. ಹಾಗಂತ, ಈ ಶೀರ್ಷಿಕೆಗೂ ಸಿನಿಮಾಗೂ ಹೊಂದಿಕೆಯಾಗುತ್ತಾ? ಅದನ್ನು ಹೇಳುವುದು ಕಷ್ಟ. ಒಂದು ವೇಳೆ ಶೀರ್ಷಿಕೆಯನ್ನೇ ನಂಬಿಕೊಂಡವರು ಚಿತ್ರದೊಳಗೆ ಭರಪೂರ “ನಗು’ ವನ್ನು ನಿರೀಕ್ಷಿಸುವಂತಿಲ್ಲ. ಚಿತ್ರದುದ್ದಕ್ಕೂ ಸಣ್ಣಪುಟ್ಟ ಮಿಸ್ಟೇಕ್‌ ಗಳುಂಟು. ಆದರೆ ನಿರ್ದೇಶಕರು ತಮ್ಮ ಪ್ರಥಮ ಪ್ರಯತ್ನವನ್ನು ಕೊಂಚಮಟ್ಟಿಗೆ “ಸಮರ್ಥ’ ವಾಗಿ ನಿರ್ವಹಿಸಿರುವುದಕ್ಕೆ “ಸ್ಮೈಲ್’ ಮಾಡಲ್ಲಡ್ಡಿಯಿಲ್ಲ. ಚಿತ್ರದಲ್ಲಿ ಆಗಾಗ ಭಾವುಕತೆ ಹೆಚ್ಚಿಸುವ ಅಂಶಗಳು ಬಂದು ಹೋಗುತ್ತವೆ. ಬಹುಶಃ ಅವುಗಳೇ  ಚಿತ್ರದ ಸಣ್ಣಮಟ್ಟಿಗಿನ “ಪ್ಲಸ್‌’ ಎನ್ನಬಹುದು. ನೋಡುಗರ ಮೊಗದಲ್ಲಿ ಎಲ್ಲೋ ಒಂದು ಕಡೆ “ಸ್ಮೈಲ್’ ಕಾಣೆಯಾಗುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಬರುವ ಒಂದೆರೆಡು ಹಾಡುಗಳು ಪುನಃ ಸಣ್ಣದ್ದೊಂದು ಸಮಾಧಾನಕ್ಕೆ ಕಾರಣವಾಗುತ್ತವೆ ಎಂಬುದೇ
ಖುಷಿಯ ವಿಷಯ

ತನ್ನ ಮಗನಿಗೆ ಮದುವೆ ಮಾಡಬೇಕು ಅಂತ ಡಿಸೈಡ್‌ ಮಾಡುವ ಪೋಷಕರಿಗೆ, ಮಗನ ಸಾವು ಕೆಲವೇ ದಿನಗಳು ಮಾತ್ರ ಅನ್ನೋದು ಗೊತ್ತಿರುವುದಿಲ್ಲ. ತಾನು ಬದುಕುವುದು ಬೆರಳೆಣಿಕೆ ದಿನಗಳು ಅಂತ ಗೊತ್ತಿದ್ದರೂ, ಮನು (ಗುರುನಂದನ್‌)ಗೆ ಯಾರನ್ನೂ ಗೊಳ್ಳೋ ಅಂತ ಕಣ್ಣೀರು ಹಾಕಿಸಲು ಇಷ್ಟವಿಲ್ಲ. ಇರುವಷ್ಟು ದಿನ ನಗುತ್ತ, ನಗಿಸುತ್ತಲೇ ಇರಬೇಕು ಅಂತ ಡಿಸೈಡ್‌ ಮಾಡಿ, ತನ್ನ ಮಾವನ ಮನೆಗೆ ಬರುತ್ತಾನೆ. ಆ ಮನೆಯಲ್ಲಿ ಎಲ್ಲವೂ ಮಾವನ ಮಾತಿನಂತೆಯೇ ನಡೆಯಬೇಕು. ಆದರೆ, ಅದನ್ನು ಪಾಲಿಸುವುದು ಆ ಮನೆಯವರ ಅನಿವಾರ್ಯ. ಎಲ್ಲವನ್ನೂ ಅರ್ಥ ಮಾಡಿಕೊಳ್ಳುವ ಮನು, ಮಾವನ ಇಷ್ಟದ ವಿರುದ್ಧ ನಿಲ್ಲುತ್ತಾನೆ.

ಕೊನೆಗೆ, ಮನೆಯವರ ಒಬ್ಬೊಬ್ಬರ ಸಮಸ್ಯೆ ನಿವಾರಿಸಿ, ಎಲ್ಲರಿಗೂ ಇಷ್ಟವಾಗುತ್ತಾನೆ. ತನಗೆ ಪ್ರೀತಿಸಬೇಕೆಂಬ ಆಸೆ ಇದ್ದರೂ, ಕಣ್ಣೆದುರಿಗೆ ಸಾವು ಓಡಾಡುತ್ತಿರುತ್ತೆ. ಅವನ ತುಂಟಾಟಗಳನ್ನು ವಿರೋಧಿಸುತ್ತಲೇ ತನಗರಿವಿಲ್ಲದಂತೆ ಪ್ರೀತಿಸೋ ಮಾವನ ಮಗಳನ್ನು ಮನು ಮದುವೆಯಾಗುತ್ತಾನೋ, ಇಲ್ಲವೋ ಅನ್ನುವುದು ಸಿನಿಮಾದ ಕ್ಲೈಮ್ಯಾಕ್ಸ್‌. ಇಲ್ಲಿ ನಗುವಿನ ಜತೆ ಕಣ್ತುಂಬಿಕೊಳ್ಳುವ ಸಣ್ಣ ಅವಕಾಶವೂ ಉಂಟು. ಮನಸ್ಸಿದ್ದರೆ ಹಿಡಿಯಷ್ಟು ನಕ್ಕು ಬೊಗಸೆಯಷ್ಟು ಅತ್ತು ಬರಬಹುದು. ಗುರುನಂದನ್‌ ಇಲ್ಲಿ ನಗಿಸುವುದಕ್ಕೆ ತುಂಬಾ ಕಷ್ಟಪಟ್ಟಿದ್ದಾರೆ. ಪಾತ್ರದಲ್ಲೇನೋ ಜೋಶ್‌ ಇದೆ. ನಟನೆಯಲ್ಲಿ ಇನ್ನಷ್ಟು ಲವಲವಿಕೆ ಬೇಕಿತ್ತು. ಆದರೆ, ಭಾವುಕತೆ ಹೆಚ್ಚಿಸುವಲ್ಲಿ ಹಿಂದೆ ಬಿದ್ದಿಲ್ಲ.

Advertisement

ಶ್ರೀನಿವಾಸ ಪ್ರಭು, ಅದೇ ಗತ್ತು ಗಮತ್ತಿನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಂಗಾಯಣ ರಘು ಹಾಸ್ಯ ಅಷ್ಟೊಂದು ವಕೌìಟ್‌ ಆಗಿಲ್ಲ. ಕಾವ್ಯಾಶೆಟ್ಟಿ “ಲಿಪ್‌ಲಾಕ್‌’ ಮಾಡಿದ್ದೇ ಸಾಧನೆ! ನೇಹಾ ಪಾಟೀಲ್‌ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಅವಿನಾಶ್‌, ಸುಧಾ ಬೆಳವಾಡಿ, ಅರುಣಾ ಬಾಲರಾಜ್‌, ರವಿಭಟ್‌, ಗಿರೀಶ್‌ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ವಾಲಿ ಅವರ ಕ್ಯಾಮೆರಾ ಕೈಚಳಕದ ಬಗ್ಗೆ ಮಾತಾಡುವಂತಿಲ್ಲ. ಅನೂಪ್‌ ಸೀಳಿನ್‌ ಸಂಗೀತದಲ್ಲಿ ಒಂದು ಹಾಡು ಗುನುಗುವಂತಿದೆ.
ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next