“ರಾಜು ಕನ್ನಡ ಮೀಡಿಯಂ’ ಸಕ್ಸಸ್ ಬಳಿಕ ಹೀರೋ ಗುರುನಂದನ್ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಇತ್ತು. ಅವರೀಗ ಕೇಳಿರುವ ಅದೆಷ್ಟೋ ಕಥೆಗಳಲ್ಲಿ ಎರಡು ಕಥೆಗಳನ್ನು ಮಾತ್ರ ಒಪ್ಪಿದ್ದಾರೆ. ಈ ವರ್ಷ ಎರಡು ಮತ್ತೂಂದು ಚಿತ್ರಗಳಲ್ಲಿ ನಟಿಸುವ ಸಾಧ್ಯತೆ ಇದೆ. “ರಾಜು ಕನ್ನಡ ಮೀಡಿಯಂ’ ನಂತರ ಗುರುನಂದನ್ ಒಳ್ಳೆಯ ಕಥೆಗಳಿಗೆ ಹುಡುಕಾಟ ನಡೆಸಿದ್ದರು.
ಕೇಳಿದ ಬಹಳಷ್ಟು ಕಥೆಗಳ ಪೈಕಿ ಎರಡು ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಒಂದು ಚಿತ್ರವನ್ನು ನಿರ್ದೇಶಕ ಮಂಜು ಸ್ವರಾಜ್ ಅವರೊಂದಿಗೆ ಮಾಡುವ ತಯಾರಿಯಲ್ಲಿದ್ದರೆ, ಇನ್ನೊಂದು ಚಿತ್ರ ಕೂಡ ಅದರ ಹಿಂದೆಯೇ ಶುರುವಾಗುವ ಸಾಧ್ಯತೆ ಇದೆ. “ರಾಜು ಕನ್ನಡ ಮೀಡಿಯಂ’ ಮಾಡಿದ ಮೇಲೆ ಗುರುನಂದನ್ ಅವರನ್ನು ಹುಡುಕಿ ಬಂದ ಕಥೆಗಳ ಸಾಲಲ್ಲಿ, ರಿಮೇಕ್ ಚಿತ್ರಗಳ ಅವಕಾಶ ಬಂದಿದ್ದೇ ಹೆಚ್ಚು.
ಆದರೆ, ಗುರುನಂದನ್ ಮಾತ್ರ, ಯಾವ ರಿಮೇಕ್ ಚಿತ್ರಗಳಿಗೂ ಅಂಟಿಕೊಳ್ಳದೆ, ಸ್ವಮೇಕ್ ಕಥೆ ಇರುವ ಚಿತ್ರ ಮಾಡಬೇಕೆಂಬ ನಿರ್ಧಾರ ಮಾಡಿದ್ದಾರೆ. ತೆಲುಗು, ಮಲಯಾಳಂ ಮತ್ತು ಹಿಂದಿ ಈ ಮೂರು ಭಾಷೆಯ ರಿಮೇಕ್ ಚಿತ್ರಗಳು ಅವರನ್ನು ಹುಡುಕಿ ಬಂದಿದ್ದು ನಿಜವಂತೆ. ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡು ಚಿತ್ರ ಮಾಡುವ ತಯಾರಿಯಲ್ಲಿರುವ ಗುರುನಂದನ್, ಏಪ್ರಿಲ್ ಅಥವಾ ಮೇ ಹೊತ್ತಿಗೆ ಒಂದು ಸಿನಿಮಾ ಶುರುಮಾಡಲಿದ್ದಾರೆ.
ಅದಾದ ಬಳಿಕ ಇನ್ನೊಂದು ಹೊಸ ಚಿತ್ರವನ್ನು ಘೋಷಣೆ ಮಾಡಲಿದ್ದಾರೆ. ಸದ್ಯಕ್ಕೆ ಮಂಜು ಸ್ವರಾಜ್ ಹೇಳಿರುವ ಕಥೆ ಬಗ್ಗೆ ಚರ್ಚೆಯಾಗಿದ್ದು, ಹೊಸ ಜಾನರ್ ಕಥೆಯಾಗಿದ್ದರಿಂದ ಅದನ್ನು ಮಾಡುವ ಮನಸ್ಸು ಮಾಡಿದ್ದಾರೆ. ಸದ್ಯಕ್ಕೆ ಆ ಚಿತ್ರದ ಶೀರ್ಷಿಕೆಯಾಗಲಿ, ತಂತ್ರಜ್ಞರಾಗಲಿ ಪಕ್ಕಾ ಆಗಿಲ್ಲ. ಈಗಷ್ಟೇ ಮಾತುಕತೆ ನಡೆದಿದ್ದು, ಇಷ್ಟರಲ್ಲೇ ಎಲ್ಲವನ್ನೂ ವಿವರಿಸುವುದಾಗಿ ಹೇಳಿದ್ದಾರೆ ಗುರುನಂದನ್.
ಇನ್ನು, “ಫಸ್ಟ್ ರ್‍ಯಾಂಕ್ ರಾಜು’ ಸಿನಿಮಾ ತಂಡದ ಜೊತೆಯಲ್ಲಿ ಮತ್ತೂಂದು ಚಿತ್ರ ಮಾಡಲಿರುವ ಗುರುನಂದನ್, ಈ ವರ್ಷ ಎರಡು ಚಿತ್ರ ಮುಗಿಸಿ, ಮುಂದಿನ ವರ್ಷ ನರೇಶ್‌ಕುಮಾರ್ ಜೊತೆಗೆ ಹೊಸ ಚಿತ್ರ ಮಾಡುವ ಯೋಚನೆಯೂ ಅವರಿಗಿದೆ. ತೆಲುಗು ಭಾಷೆಯಲ್ಲಿ “ಫಸ್ಟ್ ರ್‍ಯಾಂಕ್ ರಾಜು’ ರಿಮೇಕ್ ಆಗುತ್ತಿದ್ದು, ಅದನ್ನು ನರೇಶ್‌ಕುಮಾರ್ ನಿರ್ದೇಶಿಸುತ್ತಿದ್ದಾರೆ. ಆ ಸಿನಿಮಾ ಮುಗಿಸಿದ ಬಳಿಕ ಆ ತಂಡದ ಜತೆ ಮತ್ತೂಂದು ಚಿತ್ರದ ತಯಾರಿ ನಡೆಯಲಿದೆ ಎಂಬುದು ಗುರುನಂದನ್ ಮಾತು.