Advertisement

ಸೌಕರ್ಯ ವಂಚಿತ ಗುರುಮಠಕಲ್‌ ಗ್ರಂಥಾಲಯ

06:00 PM Oct 31, 2019 | Naveen |

ಗುರುಮಠಕಲ್‌: ಜ್ಞಾನಾರ್ಜನೆಗೆ ಪ್ರೇರಣೆ ಆಗಬೇಕಾಗಿದ್ದ ಗುರುಮಠಕಲ್‌ ಗ್ರಂಥಾಲಯ ಸಮಸ್ಯೆಗಳ ಆಗರದಿಂದ ಕೂಡಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತಗೊಂಡಿದೆ. ಅಂದಿನ ಸಹಕಾರ ಸಚಿವರಾಗಿದ್ದ ಡಾ| ಮಲ್ಲಿಕಾರ್ಜುನ ಖರ್ಗೆ ಅವರು, ಸಾರ್ವಜನಿಕರಿಗೆ ಅನುಕೂಲ ಆಗಲೆಂದು ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ 1993ರಲ್ಲಿ ಸಾರ್ವಜನಿಕ ಗ್ರಂಥಾಲಯ ಉದ್ಘಾಟಿಸಿದ್ದರು. ಪ್ರಸ್ತುತ 800 ಸದಸ್ಯರ ನೋಂದಣಿ ಹೊಂದಿರುವ ಗ್ರಂಥಾಲಯದಲ್ಲಿ 16,000 ಪುಸ್ತಕಗಳಿವೆ. ಮೂರು ಕೋಣೆ ಮತ್ತು 20 ಜನ ಓದಲು ಆಸನಗಳ ವ್ಯವಸ್ಥೆ ಇದೆ.

Advertisement

ಆದರೆ ಗ್ರಂಥಾಲಯದಲ್ಲಿ ಮೂಲ ಸೌಲಭ್ಯಗಳು ಮರೀಚಿಕೆ ಯಾಗಿವೆ. ಉತ್ತಮ ವಿದ್ಯುತ್‌ ಸಂಪರ್ಕ ಇಲ್ಲ. ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದರೆ ಛಾವಣಿ ಸೋರುತ್ತದೆ. ಗ್ರಂಥಾಲಯ ಸುತ್ತಲೂ ಹುಲ್ಲು ಮತ್ತು ಜಾಲಿಕಂಟಿ ಬೆಳೆದಿದೆ. ಈ ಸ್ಥಳದಲ್ಲಿಯೇ ಜನರು ಬಯಲು ಶೌಚ ಮಾಡುವುದು ಕಂಡು ಬರುತ್ತಿದೆ.

ಗ್ರಂಥಾಲಯ ಆವರಣದಲ್ಲಿಯೇ ಶಾಲಾ-ಕಾಲೇಜು ಹಾಗೂ ಅಲ್ಪಸಂಖ್ಯಾತರ ಮತ್ತು ಕಾಲೇಜು ಬಾಲಕಿಯರ ವಸತಿ ನಿಲಯ ಇರುವುದರಿಂದ ಶಾಲಾ-ಕಾಲೇಜು ಮಕ್ಕಳು ಸಾಮಾನ್ಯ ಜ್ಞಾನ, ಇತಿಹಾಸ, ವಿಜ್ಞಾನ ಪುಸ್ತಕಗಳತ್ತ ಕಣ್ಣಾಡಿಸುವುದು ಕಂಡು ಬರುತ್ತದೆ. ಆದರೆ ಶಿಥಿಲಗೊಂಡ ಕಟ್ಟಡದಿಂದ ಗ್ರಂಥಾಲಯ ಸದುಪಯೋಗ ಪಡಿಸಿಕೊಳ್ಳಲು ಹಿಂದೇಟು ಹಾಕುವಂತೆ ಆಗಿದೆ.

ಗ್ರಂಥಾಲಯ ದುರಸ್ತಿ ಮಾಡಿಕೊಡುವಂತೆ ಗ್ರಂಥಪಾಲಕರು ಮೇಲಧಿಕಾರಿಗಳಿಗೆ ಅನೇಕ ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಳೆ ಕಟ್ಟಡ ತೆಗೆದು ಹೊಸ ಕಟ್ಟಡ ನಿರ್ಮಿಸಿದರೆ ಸುಮಾರು 40×70 ಅಳತೆಯಲ್ಲಿ ವಿಶಾಲ ಗ್ರಂಥಾಲಯ ನಿರ್ಮಿಸುವ ಮೂಲಕ ಓದುಗರ ಸಂಖ್ಯೆ ಇನ್ನಷ್ಟು ಹೆಚ್ಚಿಸಬಹುದು. ಸಾರ್ವಜನಿಕ ಗ್ರಂಥಾಲಯ ಆಧುನಿಕ ಶೈಲಿಯಲ್ಲಿ ನಿರ್ಮಿಸಿ ಅಭಿವೃದ್ಧಿ ಪಡಿಸಲು ಮುಂದಾಗಬೇಕು. ಓದುಗರಿಗೆ ಅನುಕೂಲ ಆಗುವಂತಹ ಕಟ್ಟಡವನ್ನು ಗ್ರಂಥಾಲಯಕ್ಕೆ ಬಿಟ್ಟು ಕೊಡುವ ಮೂಲಕ ಜ್ಞಾನ ಭಂಡಾರದ ರಕ್ಷಣೆಗೆ ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ಮತ್ತು ಸರ್ಕಾರ ಮುಂದಾಗಬೇಕು ಎಂಬುದು ಓದುಗರ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next