ಕಲಬುರಗಿ: ಸಂಕ್ರಾಂತಿ ಹಬ್ಬದಂಗವಾಗಿ ನದಿಯಲ್ಲಿ ಈಜಾಡಿ ಸ್ನಾನ ಮಾಡಿ ಹೊರ ಬರುತ್ತಿದ್ದಂತೆ ಕಮಲಾಪುರ ತಾಲೂಕಿನ ಮಹಾಗಾಂವದ ಪ್ರಸಿದ್ದ ಕಳ್ಳಿಮಠದ ಪೀಠಾಧಿಪತಿ ಗುರುಲಿಂಗ ಶಿವಾಚಾರ್ಯರು (58) ಹೃದಯಾಘಾತಕ್ಕೆ ಒಳಗಾಗಿ ಲಿಂಗೈಕ್ಯ ರಾದ ಘಟನೆ ಸಂಭವಿಸಿದೆ.
ಸಂಕ್ರಾಂತಿ ಹಬ್ಬದಂಗವಾಗಿ ಶಹಾಬಾದ ತಾಲೂಕಿನ ಸುಕ್ಷೇತ್ರ ಹೊನಗುಂಟಾ ಬಳಿಯ ಭೀಮಾನದಿಯಲ್ಲಿ ಸ್ವಲ್ಪ ಈಜಾಡಿ ಸ್ನಾನ ಮಾಡಿ ಹೊರ ಬರುತ್ತಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಅಪಾರ ಭಕ್ತ ಕೋಟಿಯನ್ನು ಅಗಲಿದ್ದಾರೆ.
ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ಸಮಾಜವನ್ನು ಮುನ್ನೆಡೆಸುತ್ತಿದ್ದ ಶಿವಾಚಾರ್ಯರು ಸಾಹಿತ್ಯದಲ್ಲೂ ಉತ್ತಮ ಕೃಷಿ ಮಾಡಿದ್ದಾರೆ. ಮಠದಲ್ಲಿ ಸದಾ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುತ್ತಿದ್ದರಲ್ಲದೇ ಮಠದಡಿ ಉತ್ತಮ ಶಿಕ್ಷಣ ಸಂಸ್ಥೆ ಮುನ್ನೆಡೆಸುತ್ತಿದ್ದರು. ಯಾವುದೇ ಧಾರ್ಮಿಕ ಅಥವಾ ಇತರ ಕಾರ್ಯಕ್ರಮ ದಲ್ಲಿ ಪಾಲ್ಗೊಂಡರೇ ವೇದಿಕೆ ಮೇಲೆಯೇ ಸ್ವರಚಿತ ಕವನ ರಚಿಸುತ್ತಿದ್ದರಲ್ಲದೇ ಸಾಹಿತ್ಯವನ್ನು ಸಹ ಊಣಬಡಿಸುತ್ತಿದ್ದರು.
ಎರಡು ವಾರಗಳ ಹಿಂದೆ ಮಠದ ಹಿಂದಿನ ಪೀಠಾಧಿಪತಿ ಲಿಂ. ವಿರೂಪಾಕ್ಷಯ್ಯ ಶಿವಾಚಾರ್ಯ ರ 42ನೇ ಪುಣ್ಯ ಸ್ಮರಣೋತ್ಸವ ಆಚರಿಸಿ ಐವರು ಸಾಧಕರಿಗೆ ಕಲ್ಪವೃಕ್ಷ ಪ್ರಶಸ್ತಿ ನೀಡಿ ಸತ್ಕರಿಸಿದ್ದರು.
ಎಲ್ಲ ವರ್ಗದ ಹಾಗೂ ಎಲ್ಲರೊಂದಿಗೆ ಭಕ್ತಿ ಭಾವದಿಂದ ಇದ್ದು ಅಪಾರ ಭಕ್ತ ಸಮೂಹವನ್ನು ಪೂಜ್ಯ ಲಿಂ. ಗುರುಲಿಂಗ ಶಿವಾಚಾರ್ಯರು ಹೊಂದಿದ್ದರು.
ಪೂಜ್ಯರ ಶಿವೈಕ್ಯ ವಿಷಯ ಕೇಳಿ ಮಹಾಗಾಂವ ಕಳ್ಳಿಮಠಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಪೂಜ್ಯರ ದಿಢೀರ್ ಅಗಲುವಿಕೆಯಿಂದ ಭಕ್ತಕೋಟಿ ಶೋಕ ಸಾಗರ ದಲ್ಲಿ ಮುಳುಗಿದೆ.
ಜ. 15ರಂದು ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಮಹಾಗಾಂವ ಕಳ್ಳಿಮಠದ ಆವರಣದಲ್ಲಿ ಪೂಜ್ಯರ ಅಂತ್ಯಕ್ರಿಯೆ ನೆರವೇರಲಿದೆ ಮಠದ ಭಕ್ತ ಮೂಲಗಳು ತಿಳಿಸಿವೆ.