ಬೆಂಗಳೂರು: ಗ್ರಾಮೀಣ ಯುವ ಸಮೂಹವನ್ನು ವೃತ್ತಿ ರಂಗಭೂಮಿಯತ್ತ ಸೆಳೆಯುವ ಸಲುವಾಗಿ ಕರ್ನಾಟಕ ನಾಟಕ ಅಕಾಡೆಮಿ, ಈಗ “ಗುರುಕುಲ ಮಾದರಿಯ ರಂಗ ಶಿಕ್ಷಣ’ಕ್ಕೆ ಮುಂದಾಗಿದೆ. ಗುರುಕುಲ ಮಾದರಿಯ ರಂಗ ಶಿಕ್ಷಣ ನೀಡುವ ಸಲುವಾಗಿ ಯೋಜನೆ ರೂಪಿಸಿರುವ ನಾಟಕ ಅಕಾಡೆಮಿ, ವೃತ್ತಿ ರಂಗಭೂಮಿ ಬಗ್ಗೆ ಆಸಕ್ತಿ ಇರುವ ಗ್ರಾಮೀಣ ಭಾಗದ ಯುವ ಸಮುದಾಯದ ಹುಡುಕಾಟ ನಡೆಸಿದೆ. ಉತ್ತರ ಕರ್ನಾಟಕ ಭಾಗದಲ್ಲಿರುವ ವೃತ್ತಿ ರಂಗಭೂಮಿಯ ನಾಟಕ ಕಂಪನಿಗಳಲ್ಲಿ ಅಭ್ಯರ್ಥಿಗಳಿಗೆ ತರಬೇತಿ ಸಿಗಲಿದೆ.
ವೃತ್ತಿ ರಂಗಭೂಮಿಯಲ್ಲಿ ತೊಡಗಿಕೊಳ್ಳುವ ಯುವ ಸಮೂಹ ಪ್ರಮಾಣ ದಿನೇದಿನೆ ಕ್ಷೀಣಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಾಟಕ ಅಕಾಡೆಮಿ ಗುರುಕುಲ ಮಾದರಿಯ ರಂಗ ಕಲಿಕೆಗೆ ರೂಪು-ರೇಷೆ ಹಾಕಿಕೊಂಡಿದೆ. ರಂಗ ಶಿಕ್ಷಣ ಕಲಿಸಲು ಕೆಲವು ಮಾನದಂಡಗಳನ್ನು ರೂಪಿಸಲಾಗಿದ್ದು ಸಂದರ್ಶನ ಸಹ ಇರಲಿದೆ. ಇದರಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳು ಆಯ್ಕೆಯಾಗಲಿದ್ದು ಅವರಿಗೆ 10 ಸಾವಿರ ರೂ. ಮಾಸಿಕ ಶಿಷ್ಯ ವೇತನ ಸಹ ನಾಟಕ ಅಕಾಡೆಮಿ ನೀಡಲಿದೆ.
15 ಅಭ್ಯರ್ಥಿಗಳಿಗೆ ಅವಕಾಶ: ಗುರುಕುಲ ಮಾದರಿಯ ಕಲಿಕೆಗೆ ಕೇವಲ 15 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಆಯ್ಕೆ ಯಾದ ಅಭ್ಯರ್ಥಿಗಳನ್ನು ಉತ್ತರ ಕರ್ನಾಟಕ ಭಾಗದ ನಾಟಕ ಕಂಪನಿಗಳಿಗೆ ಕಳುಹಿಸಿ ಕೊಡಲಾಗುವುದು. ಇದು ಯಶಸ್ವಿಯಾದರೆ ಮುಂದಿನ ವರ್ಷದಿಂದ 30 ಅಭ್ಯರ್ಥಿಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ರಂಗ ಶಿಕ್ಷಣದಡಿ ನಟನೆ ಜತೆಗೆ ರಂಗಸಜ್ಜಿಕೆ ಸಿದ್ಧಪಡಿಸುವಿಕೆ, ಹಾರ್ಮೋನಿಯಂ, ಪ್ರಸಾದನ ಸೇರಿ ವೃತ್ತಿ ರಂಗಭೂಮಿ ಕುರಿತಾದ ಹಲವು ಮಜಲುಗಳನ್ನು ಕಲಿಯಲಿದ್ದಾರೆ. ನಾಡಿನ ವಿವಿಧೆಡೆ ಸುಮಾರು 26 ನೋಂದಾಯಿತ ನಾಟಕ ಕಂಪನಿಗಳಿದು,ª ಇವುಗಳಲ್ಲಿ ಕೆಲವು ವೃತ್ತಿ ರಂಗಭೂಮಿ ಚಟುವಟಿಕೆಯಲ್ಲಿ ಸಕ್ರಿಯವಾಗಿವೆ. 15ಕ್ಕೂ ಹೆಚ್ಚು ನಾಟಕ ಕಂಪನಿಗಳು ಬೇಸಿಗೆ ಕಾಲದಲ್ಲಿ ಮಾತ್ರ ನಾಟಕವನ್ನು ಪ್ರದರ್ಶಿಸುತ್ತಿದ್ದು, ಇನ್ನೂ ಕೆಲವು ನಾಟಕ ಕಂಪನಿಗಳು ವರ್ಷ ಪೂರ್ತಿ ನಾಟಕ ಪ್ರದರ್ಶಿಸುತ್ತವೆ. ವರ್ಷ ಪೂರ್ತಿ ಪ್ರದರ್ಶಿಸುವ ನಾಟಕ ಕಂಪನಿಗಳಿಗೆ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕಳುಹಿಸಿ ಕೊಡಲಾಗುವುದು.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯಲ್ಲಿ ಚಿತ್ತರಗಿಯ ಗಂಗಾಧರ ಶಾಸ್ತ್ರೀ ನಾಟಕ ಕಂಪನಿ, ಜೇವರ್ಗಿಯ ರಾಜಣ್ಣ ನಾಟಕ ಕಂಪನಿ ಮತ್ತು ಶೇಖ್ ಮಾಸ್ತರ್ ನಾಟಕ ಕಂಪನಿಗಳು ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ನಾಟಕ ಅಕಾಡೆಮಿ ತಿಳಿಸಿದೆ.
ಧಾರವಾಡದಲ್ಲಿ ಆಯ್ಕೆ ಪ್ರಕ್ರಿಯೆ: ಗುರುಕುಲ ಮಾದರಿಯ ರಂಗ ಕಲಿಕೆ ಕೇವಲ ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ. ನಾಟಕ ಅಕಾಡೆಮಿ ವೃತ್ತಿರಂಗ ಭೂಮಿ ಬಗ್ಗೆ ಆಸಕ್ತಿ ಇರುವ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಜ.10 ಅರ್ಜಿ ಸಲ್ಲಿಸಲು ಕೊನೇ ದಿನವಾಗಿದೆ. ಹಲವು ಸಂಖ್ಯೆಯಲ್ಲಿ ಯುವ ರಂಗಾಸಕ್ತರು ಅರ್ಜಿ ಸಲ್ಲಿಸಿದ್ದು, ಆಯ್ಕೆ ಪ್ರಕ್ರಿಯೆ ಧಾರವಾಡಲ್ಲಿ ನಡೆಯಲಿದೆ. ಮೂವರು ಸದಸ್ಯರುಳ್ಳ ಆಯ್ಕೆ ಸಮಿತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದು ನಾಟಕ ಅಕಾಡೆಮಿ ಹಿರಿಯ ಅಧಿಕಾರಿ ಗಳು ಹೇಳಿದ್ದಾರೆ.
ವೃತ್ತಿ ರಂಗಭೂಮಿ ಇತ್ತೀಚಿನ ದಿನಗಳಲ್ಲಿ ಅಪಾಯದ ಅಂಚಿಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ಗುರುಕುಲ ಮಾದರಿಯ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗಿದೆ.
ಜೆ.ಲೋಕೇಶ್, ನಾಟಕ ಅಕಾಡೆಮಿ ಅಧ್ಯಕ್ಷ
●ದೇವೇಶ ಸೂರಗುಪ್ಪ