ಮುಂಬಯಿ: ವೇದ, ಕುರಾನ್, ಬೈಬಲ್‌ಗಳು ದೇವರ ಮಾತುಗಳು. ಅದನ್ನು ಅನುಸರಿಸಿ ನಾವು ಪರಿಶುದ್ಧರಾಗಬೇಕು. ಧರ್ಮ ಗಳು ಹೊಂದಾಣಿಕೆಯ ಬದುಕನ್ನು ಕಲ್ಪಿಸುತ್ತದೆ. ಸಮಾಜದ ಉನ್ನತಿಯನ್ನು ಬಯಸುತ್ತವೆೆ. ಜಾತಿ, ಮತ, ಧರ್ಮಗಳ ಅಡ್ಡಗೋಡೆಗಳಿಂದ ಹೊರ ಬಂದು ಲೋಕಶಾಂತಿಗಾಗಿ ಶ್ರಮಿಸಬೇಕು. ಒಳ್ಳೆಯ ವಿಚಾರಧಾರೆ, ಶುದ್ಧವಾದ ನಡೆನುಡಿ, ಉತ್ತಮ ಸಾಹಿತ್ಯಗಳು ಜಗತ್ತಿನ ಕ್ಷೇಮವನ್ನು ಬಯಸುತ್ತವೆ ಎಂದು ಬಹುಭಾಷಾ ಕವಿ, ವಾಗ್ಮಿ ಮೊಹಮ್ಮದ್ ಬಡೂxರು ಅವರು ಅಭಿಪ್ರಾಯಿಸಿದರು.
ಫೆ. 17ರಂದು ಸಂಜೆ ಮೀರಾ ರೋಡ್ ಪೂರ್ವದ ಶಾಂತಿ ನಗರ ಸೆಕ್ಟರ್ 2ರ ಶ್ರೀ ಅಯ್ಯಪ್ಪ ಮಂದಿರದ ಸಭಾಗೃಹದಲ್ಲಿ ನಡೆದ ಗುರುಕುಲ ಮುಂಬಯಿ ಇದರ ಕರ್ನಾಟಕ ಸಾಂಸ್ಕೃತಿಕ ವೈಭವ ಸಂಭ್ರಮದಲ್ಲಿ ಕೃತಿಕಾರ ಶಿವ ಶೆಟ್ಟಿ ಮೊಗಪಾಡಿ ಪಂಜ ಅವರ ಸ್ಮಶಾನ ಮೌನ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಿಡುವಿಲ್ಲದ ಸಮಯವನ್ನು ಸವಾಲಾಗಿ ಸ್ವೀಕರಿಸಿ, ಅನೇಕ ಆರ್ಥಿಕ ಅಡೆತಡೆಗಳನ್ನು ಎದುರಿಸಿ, ಹೊಟೇಲ್‌ಲಿನಲ್ಲಿ ಉದ್ಯೋಗ ಮಾಡಿಕೊಂಡು ಸಾಹಿತ್ಯ ಕ್ಷೇತ್ರವನ್ನು ವಿಸ್ತರಿಸಿದ ಕೃತಿಕಾರರು ಅಸಾಧಾರಣ ಸಾಧಕರಾಗಿದ್ದಾರೆ. ಕಷ್ಟ, ಸುಖ, ಸಂಭ್ರಮದಲ್ಲಿ ನಾವು ಮೌನರಾಗುತ್ತೇವೆ. ಆದರೆ ಸ್ಮಶಾನ ಮೌನ ಕಾದಂಬರಿಯ ಮೌನ ಗೌರವದ ಮೌನವಾಗಿದೆ. ಕೃತಿಯನ್ನು ಖರೀದಿಸುವ ಮೂಲಕ ಲೇಖಕರ ಆತ್ಮಸ್ಥೈರ್ಯದ ಮೌನವನ್ನು ಹೆಚ್ಚಿಸಬೇಕು ಎಂದು ನುಡಿದು ಅವರು ಶುಭಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರ್ ಅವರು, ಮೌಲ್ಯಪ್ರಜ್ಞೆ, ಮಾನವೀಯತೆಯ ಆದರ್ಶ, ನೈತಿಕತೆಯ ಎಚ್ಚರ ಇರುವ ಸ್ಮಶಾನ ಮೌನ ಕಾದಂಬರಿಯು ಓದುಗರ ಮೆಚ್ಚುಗೆಗೆ ಪಾತ್ರವಾಗಲಿ. ಓರ್ವ ಹೊಟೇಲ್ ಕಾರ್ಮಿಕ ಏನೆಲ್ಲಾ ಸಾಧಿಸ ಬಹುದು ಎಂಬುವುದಕ್ಕೆ ಕೃತಿಕಾರ ಶಿವ ನಿದರ್ಶನರಾಗಿದ್ದಾರೆ ಎಂದು ನುಡಿದು ಅವರನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ಕೃತಿಕಾರ ಶಿವ ಶೆಟ್ಟಿ ಪಂಜ ಮೊಗಪಾಡಿ ಅವರನ್ನು ಗುರುಕುಲದ ವತಿಯಿಂದ ಗೌರವಿಸಲಾಯಿತು. ಲೇಖಕಿ ಲತಾ ಸಂತೋಷ್ ಶೆಟ್ಟಿ ಕೃತಿಯನ್ನು ಪರಿಚಯಿಸಿದರು. ಸಮಾರಂಭದಲ್ಲಿ ಲೇಖಕಿ ಲತಾ ಸಂತೋಷ್ ಶೆಟ್ಟಿ, ರಾಜಕೀಯ ನೇತಾರ ಸುಲೇಮಾನ್ ಕುಳವೂರು, ನಟ-ನಿರ್ದೇಶಕ ರಹೀಂ ಸಚ್ಚೇರಿಪೇಟೆ, ರಂಗನಟ ಉಮೇಶ್ ಹೆಗ್ಡೆ ಕಡ್ತಲ, ಕಿಶೋರ್ ಶೆಟ್ಟಿ ಪಿಲಾರ್ ಅವರನ್ನು ಗಣ್ಯರು ಸಮ್ಮಾನಿಸಿ ಗೌರವಿಸಿದರು.
ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಮಾನ್ವಿತ್ ಶೆಟ್ಟಿ ಮತ್ತು ಪ್ರಜ್ವಲ್ ಅಂಚನ್ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಕೃತಿಕಾರ ಶಿವ ಶೆಟ್ಟಿ ಅವರು ಕೃತಿಯ ಬಗ್ಗೆ ತಿಳಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಂಘಟಕರಾದ ಸುರೇಶ್ ಶೆಟ್ಟಿ ಗಂಧರ್ವ, ರಮೇಶ್ ರೈ, ವಿನೋದಾ ಶೆಟ್ಟಿ, ರವೀಂದ್ರ ಶೆಟ್ಟಿ ಕೊಟ್ರಪಾಡಿ, ನ್ಯಾಯವಾದಿ ಆರ್. ಜಿ. ಶೆಟ್ಟಿ ಅವರು ಶುಭಹಾರೈಸಿದರು.
ಗುರುಕುಲ ಮುಂಬಯಿ ಅಧ್ಯಕ್ಷ ಅಜಿತ್ ಬೆಳ್ಮಣ್ ಸ್ವಾಗತಿಸಿದರು. ಸ್ಥಾಪಕ ನಿರ್ದೇಶಕ ನಾಗರಾಜ ಗುರುಪುರ ವಂದಿಸಿದರು. ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಸಮಾಜ ಸೇವಕರಾದ ಪ್ರಭಾಕರ ಶೆಟ್ಟಿ, ನರೇಶ್ ಪೂಜಾರಿ, ಸಂಪತ್ ಶೆಟ್ಟಿ ಪಂಜದಗುತ್ತು, ರಮೇಶ್ ಶೆಟ್ಟಿ ಸಿದ್ಧಕಟ್ಟೆ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಂಗಮಿಲನ ಮುಂಬಯಿ ಕಲಾ ವಿದರಿಂದ ತೆಲಿಕೆ ನಲಿಕೆ ಹಾಸ್ಯ ನಾಟಕ, ರಹೀಂ ಸಚ್ಚೇರಿಪೇಟೆ ನಿರ್ದೇಶನದಲ್ಲಿ ವೈವಿಧ್ಯಮಯ ಕವ್ವಾಲಿ, ಅಮಿತ ಮತ್ತು ಬಳಗದವ ರಿಂದ ಜಾನಪದ ನೃತ್ಯ ವೈವಿಧ್ಯ, ಭಜನೆ ಇನ್ನಿತರ ಕಾರ್ಯಕ್ರಮಗಳು ನಡೆಯಿತು. ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು. ತುಳು- ಕನ್ನಡಿಗರು ಪಾಲ್ಗೊಂಡಿದ್ದರು.
ಚಿತ್ರ-ವರದಿ :ರಮೇಶ್ ಅಮೀನ್