ಕಲಬುರಗಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ವಿದ್ಯಾಧರ ಗುರೂಜಿ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬದವರು ಗುರೂಜಿ ಆಶಯದಂತೆ ರವಿವಾರ ಮಧ್ಯಾಹ್ನ ನಗರದ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿಗೆ ದೇಣಿಗೆ ನೀಡಿದರು.
ವೈದ್ಯ ಕಾಲೇಜಿಗೆ ಗುರೂಜಿ ಮೃತದೇಹ ಹಸ್ತಾಂತರಿಸುವ ಸಂದರ್ಭದಲ್ಲಿ ಗುರೂಜಿ ಅವರ ಪತ್ನಿ ಸವಿತಾದೇವಿ, ಪುತ್ರರಾದ ಅರವಿಂದ ಗುರೂಜಿ, ಅಶೋಕ, ಅನಿಲ, ಪುತ್ರಿ ಅರ್ಚನಾ ಹಾಗೂ ಕುಟುಂಬದ ಸದಸ್ಯರು ಮತ್ತು ಗಣ್ಯರು ಹಾಜರಿದ್ದರು. ವಿದ್ಯಾಧರ ಗುರೂಜಿ ಅವರ ಪಾರ್ಥಿವ ಶರೀರವನ್ನು ಇದಕ್ಕೂ ಮುನ್ನ ಬೆಳಗ್ಗೆ ಸೇಡಂ ರಸ್ತೆಯಲ್ಲಿರುವ ಹಿಂದಿ ಪ್ರಚಾರ ಸಭಾಂಗಣದ ಆವರಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಗಣ್ಯರು ಅಗಲಿದ ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರು ವಿದ್ಯಾಧರ ಗುರೂಜಿ ಪಾರ್ಥಿವ ಶರೀರಕ್ಕೆ ಪುಷ್ಪಗುತ್ಛ ಅರ್ಪಿಸಿದರು.
ಹೈಕ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಾ| ವೈಜನಾಥ ಪಾಟೀಲ ಅವರು ಪಾರ್ಥಿವ ಶರೀರದ ಮೇಲೆ ಹೈದ್ರಾಬಾದ್ ಕರ್ನಾಟಕದ ಧ್ವಜವನ್ನು ಇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಮೃತದೇಹವನ್ನು ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸುವ ಮುನ್ನ ವಿದ್ಯಾಧರ ಗುರೂಜಿ ಪತ್ನಿ ಸವಿತಾದೇವಿ ಅವರು ಮೃತದೇಹಕ್ಕೆ ಆರತಿ ಬೆಳಗಿದ ನಂತರ ಡಾ| ವೈಜನಾಥ ಪಾಟೀಲ ಅವರು ಆರತಿ ಬೆಳಗಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು. ಪ್ರಾದೇಶಿಕ ಆಯುಕ್ತ ಹರ್ಷಾ ಗುಪ್ತಾ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ವಿಧಾನ ಪರಿಷತ್ ಸದಸ್ಯ ಕೆ.ಬಿ. ಶಾಣಪ್ಪ, ಮಾಜಿ ಸಚಿವ ಎಸ್.ಕೆ. ಕಾಂತಾ, ವಿಧಾನ ಪರಿಷತ್ ಮಾಜಿ ಸದಸ್ಯ ಮಾರುತಿರಾವ್ ಡಿ. ಮಾಲೆ, ಹೈಕ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮಹಾಂತಗೌಡ ಪಾಟೀಲ, ಮುಖಂಡರಾದ ಶರಣಪ್ಪ ತಳವಾರ, ಸಂಗಣ್ಣ ಇಜೇರಿ, ಹಣಮಂತ ಗುಡ್ಡಾ, ಅಪ್ಪಾರಾವ ಅಕ್ಕೋಣಿ, ಸಂಗಣ್ಣ ಇಜೇರಿ ಹಾಗೂ ಮತ್ತಿತರರು ವಿದ್ಯಾಧರ ಗುರೂಜಿ ಪಾರ್ಥಿವ ಶರೀರಕ್ಕೆ ಹೂಮಾಲೆ ಹಾಕಿ ಅಂತಿಮ ನಮನ ಸಲ್ಲಿಸಿದರು.
ಶಾಸಕರಾಗಿ ಉತ್ತಮ ಕಾರ್ಯ
ವಿದ್ಯಾಧರ ಗುರೂಜಿ ನಿಧನಕ್ಕೆ ತೀವ್ರ ದುಃಖವಾಗಿದೆ. ವಿದ್ಯಾಧರ ಗುರೂಜಿ ಶಾಸಕರಾಗಿ ತಮ್ಮ ಸುದೀರ್ಘ ರಾಜಕೀಯ ಹಾಗೂ ಸಮಾಜ ಸೇವೆಯಲ್ಲಿ ಒಂದೂ ಕಪ್ಪು ಚುಕ್ಕೆ ಬಾರದ ರೀತಿಯಲ್ಲಿ ಸ್ವತ್ಛ ಹಾಗೂ ಪ್ರಾಮಾಣಿಕ ಜೀವನವನ್ನು ನಡೆಸಿಕೊಂಡು ಬಂದಿದ್ದರು.
ಡಾ| ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ನಾಯಕ