Advertisement

ಗುರುಗುಂಟಿರಾಯರ ಒಂದು ಕೋಟಿ ರುಪಾಯಿ

12:52 PM Dec 04, 2017 | |

ಜಾಸ್ತಿ ಹಣದುಬ್ಬರದ ಯುಗದಲ್ಲಿ ಅಣ್ಣಾವ್ರು ಹೇಳಿದಂತೆ “ನೀನು ನಾಳೆ ಮಾಡುವ ಕೆಲಸ ಇಂದೇ ಮಾಡು; ಆ ನಾಳೆ ಎಂಬ ಮಾತ ಮುಂದೇ ದೂಡು’. ಹಾಗಂತ ನಾಳೆ ಮಾಡುವ ಊಟ ಇಂದೇ ಮಾಡಲಾಗುವುದಿಲ್ಲವಾದರೂ ನಾಳೆ ಕಟ್ಟುವ ಮನೆಯನ್ನು ಇಂದೇ ಕಟ್ಟಬಹುದಲ್ಲವೆ? ದಯವಿಟ್ಟು ಗಮನಿಸಿ, ನಾವಿಲ್ಲಿ ದುಂದುವೆಚ್ಚದ ಮಾತನ್ನು ಆಡುತ್ತಿಲ್ಲ. ಅಗತ್ಯಕ್ಕಿರುವ ಖರ್ಚನ್ನು ಶೀಘ್ರವೇ ಮಾಡಿ ಎನ್ನುತ್ತಿದ್ದೇವೆ ಅಷ್ಟೆ.

Advertisement

ಮೊನ್ನೆ ಸಂಜೆ ಕುಳಿತುಕೊಂಡು ನಮ್ಮ ದೇಶದ ಭವಿಷ್ಯದ ಬಗ್ಗೆ ಚಿಂತನೆಯಲ್ಲಿ ಮುಳುಗಿರಬೇಕಾದರೆ ದೂರದಲ್ಲಿ ಎಲ್ಲೋ ಯಾರದೋ ಮೊಬೈಲ್‌ ರಿಂಗ್‌ ಆಗುವ ಧ್ವನಿ ಕೇಳಿಸಿ ಕಿರಿಕಿರಿ ಯೆನಿಸಿತು. ಅರೇ ಯಾರದಪ್ಪಾ ಇದು? ಅಂತ ಸಿಂಡರೆಲ್ಲಾಳಂತೆ ಮುಖ ಸಿಂಡರಿಸಬೇಕಾದರೆ “ಅರೆ, ನನ್ನದೇ ಫೋನ್‌ ಅಲ್ವಾ’ ಎಂಬ ಜ್ಞಾನೋದಯವೂ ಆಯಿತು. 

ಪ್ರತೀ ಬಾರಿ ಹೊಸ ಮೊಬೈಲ್‌ ಕೊಂಡಾಗಲೂ ಹೀಗೇ ಆಗುತ್ತದೆ. ಹೊಸ ರಿಂಗ್‌ ಟೋನಿನ ಪರಿಚಯ ಆಗುವವರೆಗೂ ದೂರದಲ್ಲಿ ಯಾರದೋ ಫೋನ್‌ ಅರಚುತ್ತಿದೆ ಎಂಬ ಭಾವನೆಯೇ ಮೊತ್ತಮೊದಲು ಬರುತ್ತದೆ. ಆಮೇಲೆ ನಿಧಾನವಾಗಿ ನಮ್ಮದೇ ಫೋನ್‌ ಇದು ಎಂಬ ಅರಿವು ಮೂಡುತ್ತದೆ. ಕೋಣನಿಗೆ ಬಾರುಕೋಲಿನಿಂದ ಜೋರಾಗಿ ಹೊಡೆದರೂ ಅದಕ್ಕೂ ಹಾಗೆಯೇ ಆಗುತ್ತದಂತೆ. ದೂರದಲ್ಲಿ ಯಾರಿಗೋ ಹೊಡೆಯುತ್ತಾ ಇದ್ದಾರೆ ಅಂತ. ಇದೆಲ್ಲ ದಪ್ಪ ಚರ್ಮದ ಎಡ್ವಾಂಟೇಜಸ್‌, ಸಾರ್‌!

ಆಫ್ಟರ್‌ ಉಭಯ ಕುಶಲೋಪರಿ ಮತ್ತು ಕಳೆದ ವಾರದ FII ಮಹಾತ್ಮೆಯ ಒಂದು ಕಿರು ಮಹಜರಿನ ಅನಂತರ ನಮ್ಮ ಗುರುಗುಂಟಿರಾಯರು “ಈಗ ನಿಮ್ಮ ಹತ್ರ ಒಂದು ಕೋಟಿ ಇದೆ ಅಂತ ಇಟ್ಟುಕೊಳ್ಳಿ…’ ಅಂತ ಅಚಾನಕ್ಕಾಗಿ ನುಡಿದರು.

“ಎಷ್ಟು, ಒಂದು ಕೋಟಿಯಾ?’ ನನ್ನ ಬಾಯಿ ದೊಡ್ಡದಾಗಿ ತೆರೆಯಿತು. ಹಾರ್ಟ್‌ ಒಮ್ಮಗೇ ಛಕ್‌ ಅಂತ ಫ್ರೀಜ್‌ ಆದ ಅನುಭವ ಆಯಿತು.  

Advertisement

“ಹೌದು, ಒಂದು ಕೋಟಿ- ಅ ಸಮ್‌ ಆಫ್ ರೂಪೀಸ್‌ ಒನ್‌ ಕ್ರೋರ್‌ ಒನ್ಲಿ’ ಅಂತ ಅಪ್ಪಟ ಬ್ಯಾಂಕ್‌ ಶೈಲಿಯಲ್ಲಿ ಅದನ್ನು “ಇನ್‌ ವರ್ಡ್ಸ್‌’ ದೃಢೀಕರಿಸಿದರು. ಬಳಿಕ, “ಆ ಒನ್‌ ಕ್ರೋರ್‌ ಅನ್ನು ಯಾವ ಯಾವ ರೀತಿಯಲ್ಲಿ ಎಲ್ಲೆಲ್ಲಿ ಇನ್ವೆಸ್ಟ್ ಮಾಡ್ತೀರಾ?’ ಅಂತ ಅದರ ಬೆನ್ನಿಗೇ ಒಂದು ದೂಸ್ರಾ ಎಸೆದು ಸುಮ್ಮನಾದರು.

ಅರೆ, ಈ ಸ್ಟೈಲ್‌ ಎಲ್ಲೋ ಕೇಳಿದಂತಿದೆಯಲ್ಲ ಎಂದು ತಲೆ ಕೆರೆದು ಹೊಟ್ಟು ಉದುರಿಸುತ್ತಿರಬೇಕಾದರೆ ಓಆಇಯಲ್ಲಿ ಬಿಳಿ ಗಡ್ಡ ಕಪ್ಪು ಕೂದಲಿನ ಅಮಿತಾಭ್‌ ಕೂಡ ಆಗೊಮ್ಮೆ ಈಗೊಮ್ಮೆ ಈ ರೀತಿ “ಅಗರ್‌ ಆಪ್‌ಕೋ ಏಕ್‌ ಕರೋಡ್‌ ಮಿಲ್‌ಗ‌ಯಾ ತೋ ಆಪ್‌ ಉಸ್ಕೋ ಲೇಕೇ ಕ್ಯಾ ಕರೇಂಗೇ?’ ಎಂಬ ಹೃದಯಾಘಾತಕ ಪ್ರಶ್ನೆಯನ್ನು ಹಾಟ್‌ಸೀಟಿನಲ್ಲಿ ಕುಳಿತು already ಬೆವರುತ್ತಿರುವ ಸ್ಪರ್ಧಿಯತ್ತ ಎಸೆದು ತಮಾಷೆ ನೋಡುವುದು ನೆನಪಾಯ್ತು. 

ಈ ಗುರುಗುಂಟಿರಾಯರ ಸಹವಾಸ ಕಷ್ಟ ಮಾರಾಯೆ ಇವರಿಂದ ನಕ್ಷತ್ರಿಕನೇ ವಾಸಿ. ಇವರ ಲೆಕ್ಕ ಶುರುವಾಗುವುದೇ ಕೋಟಿಯಿಂದ. ನನಗಾದರೋ ಒಂದು ಕೋಟಿ ಬರೆಯುವಾಗ ಎಷ್ಟು ಬಾರಿ ಶೂನ್ಯ ಶೂನ್ಯ ಬರೆಯಬೇಕು ಅಂತಲೇ ಗೊತ್ತಾಗುವುದಿಲ್ಲ. ಹಲವೊಮ್ಮೆ ಅಷ್ಟೂ ಗೊತ್ತಾಗದೆ ಬ್ರೇಕ್‌ ಫೈಲ್‌ ಗಾಡಿಯಂತೆ ನೂರಾರು ಕೋಟಿ ಬರೆದದ್ದೂ ಇದೆ! ಅಂಥದ್ದರಲ್ಲಿ, ಇಲ್ಲದ ಒಂದು ಕೋಟಿ ರೂಪಾಯಿಯನ್ನು ಇದೆ ಎಂದು ಅಷ್ಟು ಸುಲಭವಾಗಿ ಇಟ್ಟುಕೊಳ್ಳುವುದು ಹೇಗೆ ಸ್ವಾಮೀ? ನೀವೇ ಹೇಳಿ. ಈಗಂತೂ ಈ ಹೆಚ್ಚುವರಿ ದುಡ್ಡನ್ನು ಯಾವ ಕರೆನ್ಸಿ ನೋಟಿನಲ್ಲಿ ಎಲ್ಲಿ ಎಷ್ಟು ಹೇಗೆ ಇಡುವುದು ಎನ್ನುವುದು ಬಹಳಷ್ಟು ಹೆಚ್ಚು ವರಿಯ ಸಂಗತಿ. 

ತುಸು ತಡೆದು, ಸುಧಾರಿಸಿಕೊಂಡು, “ರಾಯರೇ, ಒಂದು ಕೋಟಿ ಎಲ್ಲ ಬೇಡ. ಒಂದು ನೂರು ರುಪಾಯಿ ಇಟ್ಟುಕೊಂಡ್ರೆ ಸಾಕಾ…’ ಅಂತ ಒಂದು ಸ್ಮಾಲ್‌ ಕಾಂಪ್ರೊಮೈಸ್‌ ಪ್ರಶ್ನೆ ಕೇಳಿದೆ.

ಸದ್ಯ! ಗುರುಗುಂಟಿರಾಯರು ಬೇರೆ ಯಾವುದೇ ಹೆಚ್ಚುವರಿ ಚೌಕಾಶಿ ಮಾಡದೆ ನೂರು ರುಪಾಯಿಗೆ ಒಪ್ಪಿಕೊಂಡರು. ಒಂದು ಕೋಟಿ ರುಪಾಯಿಯ ಭಾರೀ ಭರ್ಜರಿ ಶಾಕ್‌ನಿಂದ ನಿಧಾನವಾಗಿ ಹೊರಬಂದ ನನ್ನ ಮೆದುಳು ಈಗ ಯೋಚಿಸಲಾರಂಭಿಸಿತು. 

1ನಿಮ್ಮಲ್ಲಿ ನೂರು ರುಪಾಯಿ ಇದ್ದರೆ ಮೊತ್ತ ಮೊದಲು ಅದನ್ನು ಖರ್ಚು ಮಾಡಿ!
ಕಾಕುಗೆ ಹೆಚ್ಚು ವಯಸ್ಸಾಗಿಲ್ಲ. ಮರುಳು ಅರಳುವ ಕಾಲ ಇನ್ನೂ ಬಂದಿಲ್ಲ. ಆದಾಗ್ಯೂ ಈ ಮಾತನ್ನು ಹೇಳುತ್ತಿದ್ದೇನೆ. ಕಾರಣ ಇನ್‌ಫ್ಲೇಷನ್‌- ಬೆಲೆಯೇರಿಕೆ! ಈಗಿನ ನಡೆಯುವ, ಓಡುವ, ದೌಡಾಯಿಸುವ, ಹಾರುವ, ಡಿಸ್ಕೋ ಹೊಡೆಯುವ ಬೆಲೆ ಏರಿಕೆಯ ಕಾಲದಲ್ಲಿ ಅಗತ್ಯವಿರುವ ಕೆಲಸಕ್ಕಾಗಿ ಇಂದು ಖರ್ಚು ಮಾಡದೆ ನಾಳೆ ಮಾಡೋಣ ಎಂದು ಮುಂದೂಡುತ್ತಾ ಹೋದರೆ ನಾಳೆ ಅದಕ್ಕೆ ತಗಲುವ ವೆಚ್ಚ ಹೂಡಿಕೆಗಳಿಂದ ಬರುವ ಪ್ರತಿಫ‌ಲಕ್ಕಿಂತಲೂ ಜಾಸ್ತಿಯಾದೀತು. ಇಂದು ನೂರು ರುಪಾಯಿಯಲ್ಲಿ ಆಗುವ ಕೆಲಸಕ್ಕೆ ನಾಳೆ ನೂರಾಹತ್ತು ತಗಲೀತು. ಹೆಚ್ಚಿನ ನಿಗದಿತ ಆದಾಯದ ಭದ್ರ ಠೇವಣಿಗಳಲ್ಲಿ ಪ್ರತಿಫ‌ಲ ಕಡಿಮೆ. ಬೆಲೆಯೇರಿಕೆಯನ್ನು ಮೀರಿ ಸ್ವಲ್ಪ ಉಳಿಯುವ ಆದಾಯ ಇಂದು ಭದ್ರ ಠೇವಣಿಗಳಲ್ಲಿ ಬರುತ್ತಿಲ್ಲ. ಭಾರತದ ಜನಸಾಮಾನ್ಯರಿಗೆ ಅತ್ಯಂತ ಪ್ರಿಯವಾದ ಎಫ್ಡಿಗಳಲ್ಲಿ ಇಂದು ಆ ಬ್ಯಾಂಕಿನ ಉದ್ಯೋಗಿಗಳೇ ದುಡ್ಡು ಹೂಡುತ್ತಿಲ್ಲ. ಯಾಕೆಂದರೆ ಇನ್‌ಫ್ಲೇಶನ್‌ ಮತ್ತು ಟ್ಯಾಕ್ಸ್ ಕಳೆದು ಬರುವ ಬಡ್ಡಿಯ ದರ ಮೈನಸ್‌. ಇನ್ನು ಎಸ್‌ಬಿಯಲ್ಲಿ ದುಡ್ಡಿಟ್ಟುಕೊಂಡು ಖರ್ಚನ್ನು ಪೋಸ್ಟ್ಪೋನ್‌ ಮಾಡುವವರ ಕತೆ ಕೈ-loss-ಅವೇ ಸರಿ (ಷೇರು-ಗೀರು ಅಂತ ಹೆಚ್ಚಿನ ಆದಾಯದ ಹೂಡಿಕೆಗೆ ಹೋದರೆ ಅದಕ್ಕೆ ಅದರದ್ದೇ ಆದ ರಿಸ್ಕ್ ಇದೆ). ಹಾಗಿರುವ ಸಂದರ್ಭಗಳಲ್ಲಿ ಅಗತ್ಯದ ವಿಷಯದ ಮೇಲೆ ಮಾತ್ರ ಖರ್ಚು ಮಾಡುವುದು ಸಾಮಾನ್ಯ ಉಳಿತಾಯಕ್ಕಿಂತಲೂ ಹೆಚ್ಚಿನ ಉಳಿತಾಯವೇ! ಒಂದು ರೀತಿಯಲ್ಲಿ ವಿರೋಧಾಭಾಸವಾಗಿ ಕಂಡು ಬಂದರೂ ಇದು ಸತ್ಯ!

ಆದ್ದರಿಂದ ಜಾಸ್ತಿ ಹಣದುಬ್ಬರದ ಯುಗದಲ್ಲಿ ಅಣ್ಣಾವ್ರು ಹೇಳಿದಂತೆ “ನೀನು ನಾಳೆ ಮಾಡುವ ಕೆಲಸ ಇಂದೇ ಮಾಡು; ಆ ನಾಳೆ ಎಂಬ ಮಾತ ಮುಂದೇ ದೂಡು’. ಹಾಗಂತ ನಾಳೆ ಮಾಡುವ ಊಟ ಇಂದೇ ಮಾಡಲಾಗುವುದಿಲ್ಲವಾದರೂ ನಾಳೆ ಕಟ್ಟುವ ಮನೆಯನ್ನು ಇಂದೇ ಕಟ್ಟಬಹುದಲ್ಲವೆ? ದಯವಿಟ್ಟು ಗಮನಿಸಿ, ನಾವಿಲ್ಲಿ ದುಂದುವೆಚ್ಚದ ಮಾತನ್ನು ಆಡುತ್ತಿಲ್ಲ. ಅಗತ್ಯಕ್ಕಿರುವ ಖರ್ಚನ್ನು ಶೀಘ್ರವೇ ಮಾಡಿ ಎನ್ನುತ್ತಿದ್ದೇವೆ ಅಷ್ಟೆ.

2 ಹಣದುಬ್ಬರವನ್ನು ಮೀರಿ ನಿಲ್ಲುವ ಹೂಡಿಕೆಗೆ ರಿಸ್ಕ್-ರಿಟರ್ನ್ ನೋಡಿಕೊಂಡು ಆದ್ಯತೆ ಕೊಡಿ ಭಾರತ ಪ್ರಗತಿಯ ಪಥದಲ್ಲಿದೆ, ಸರಿ. ಆದರೆ, ನಮ್ಮ ರಾಷ್ಟ್ರೀಯ ಹೆದ್ದಾರಿಗಳಂತೆ ಆ ಪಥದಲ್ಲಿ ಕೂಡ ಸಾಕಷ್ಟು ಹೊಂಡಗಳಿವೆ. “ಪ್ರಗತಿಯೊಂದಿಗೆ ಬೆಲೆಯೇರಿಕೆ ಬರಲೇ ಬೇಕು ಎಂದೇನೂ ಇಲ್ಲ’ ಎಂದು ನಮ್ಮ ಮಾಜಿ ಪ್ರಧಾನಿಯವರು ಹೇಳಿದ್ದನ್ನು ನಾನು ಟಿವಿಯಲ್ಲಿ ಕಣ್ಣಾರೆ ಕಂಡು ಕಿವಿಯಾರೆ ಕೇಳಿದ್ದೇನೆ. ಆದರೆ ಅದನ್ನು ಯಾರೊಬ್ಬರೂ ಸಾಧಿಸಿ ತೋರಿಸಿದ್ದನ್ನು ಮಾತ್ರ ಈವರೆಗೆ ನಾವು ಕಂಡಿಲ್ಲ. ಇಲ್ಲಿ ಬರುವ ಸಮಸ್ಯೆ ಏನೆಂದರೆ ಪ್ರಗತಿಯಲ್ಲಿ ಭಾಗವಹಿಸ ಲಾರದ ನಿರುದ್ಯೋಗಿ, ನಿವೃತ್ತ, ಇತರ ಆರ್ಥಿಕವಾಗಿ ದುರ್ಬಲ ವರ್ಗದವರನ್ನು ಬೆಲೆಯೇರಿಕೆ ಹಿಂಡದೆ ಬಿಡುವುದಿಲ್ಲ. ಬೇರೆ ಹೊಸ ಆದಾಯವಿಲ್ಲದ ಅಂತಹವರಿಗೆ ಇರುವ ಹೂಡಿಕೆಯನ್ನೇ ಆ ನಿಟ್ಟಿನಲ್ಲಿ ತೊಡಗಿಸಿಕೊಂಡು ಹೋಗುವುದೊಂದೇ ದಾರಿ.  

ಷೇರು, ಭೂಮಿ, ಚಿನ್ನ ಇತ್ಯಾದಿ ಹೂಡಿಕೆಗಳು ಸುಮಾರಾಗಿ ಬೆಲೆಯೇರಿಕೆಯನ್ನು ಮೀರಿ ಪ್ರತಿಫ‌ಲ ಕೊಡಬಲ್ಲವು. ಡೆಟ್‌ ಅಥವಾ ಸಾಲಪತ್ರಗಳು, ಪಿಎಫ್, ಪೋಸ್ಟಲ್‌ ಮತ್ತು ಬ್ಯಾಂಕು ಠೇವಣಿಗಳು ಹಲವಾರು ಸಂದರ್ಭಗಳಲ್ಲಿ ಬೆಲೆಯೇರಿಕೆಯಷ್ಟೂ ರಿಟರ್ನ್ ಕೊಡಲಾರದೆ ಒದ್ದಾಡುತ್ತಿವೆ. ಆದರೆ ಎಲ್ಲ ದುಡ್ಡನ್ನು ಷೇರುಗಳಲ್ಲಿ, ಭೂಮಿ, ಚಿನ್ನದಲ್ಲಿ ಹಾಕಲಾಗುವುದಿಲ್ಲ. ಅವಕ್ಕೆ ಅವುಗಳದ್ದೇ ಆದ ರಿಸ್ಕ್ ಕೂಡ ಇದೆ. ರಿಸ್ಕ್ ನೋಡಿಕೊಂಡು ಇರುವ ದುಡ್ಡನ್ನು ಇವುಗಳಲ್ಲಿ ವಿಂಗಡಿಸಿ ಹಾಕಬೇಕು. ಷೇರು/ಮ್ಯೂಚುವಲ್‌ ಫ‌ಂಡುಗಳಲ್ಲಿ 10-20%, ಭೂಮಿಯಲ್ಲಿ 10-20% ಚಿನ್ನದಲ್ಲಿ ಇನ್ನೊಂದು 10%, ಪಿಎಫ್, ಇನ್ಶೂರೆನ್ಸ್‌, ಪೆನ್ಶನ್‌, ಎಫ್ಡಿಗಳಲ್ಲಿ ಉಳಿದ ಉಳಿತಾಯದ ಹಣವನ್ನು ಹೂಡಬಹುದು. ಇಲ್ಲಿ ಕೊಟ್ಟ ಶೇಕಡಾಗಳು ಕೇವಲ ಒಂದು ಅಭಿಪ್ರಾಯ ಮಾತ್ರವಷ್ಟೆ. ಅವರವರ ಭಾವಕ್ಕೆ ಅವರವರ ಭಕುತಿಗೆ ಸರಿಯಾಗಿ ರಿಸ್ಕ್-ರಿಟರ್ನ್ ನೋಡಿಕೊಂಡು ಇದನ್ನು ನಿಶ್ಚಯಿಸಬಹುದು. 

ತ್ಮೆ
ರಿಸೆಶನ್‌ ಗರವನ್ನು ಮೀರಿ ಭಾರತ ಬದುಕಿ ಉಳಿದದ್ದು ನಮ್ಮ ಬ್ಯಾಂಕಿಂಗ್‌ ವ್ಯವಸ್ಥೆಯ ನಿಯಂತ್ರಣಗಳಿಂದಾಗಿ ಎಂದು ಹೇಳಲಾಗುತ್ತದೆ. ಆದರೆ ಅದರಷ್ಟೇ ಸತ್ಯವಾದ ಇನ್ನೊಂದು ಕಾರಣವೇನೆಂದರೆ ನಮ್ಮ ದೇಶದ ಆರ್ಥಿಕತೆಯಲ್ಲಿ ಕಪ್ಪು ಹಣಕ್ಕಿರುವ ಮಹಾನ್‌ ಪಾತ್ರ. ಕಪ್ಪು ಹಣದ ಇಕಾನಮಿ ಬಿಳಿಹಣದ ಇಕಾನಮಿಗಿಂತಲೂ ದೃಡ ಮತ್ತು ಸಶಕ್ತವಾಗಿದೆ ಎಂಬ ಮಾತು ಖಾಸಗಿ ಬಿಸಿನೆಸ್‌ ಮಾತುಕತೆಗಳಲ್ಲಿ ಬಹಳಷ್ಟು ಕೇಳಿ ಬರುತ್ತದೆ. ನಮ್ಮಲ್ಲಿ ಕಪ್ಪು ಹಣ ಎಲ್ಲಿಂದ ಬರುತ್ತದೆ, ಯಾರ ಯಾರ ಕೈಯಲ್ಲಿ ಇದು ಇರುತ್ತದೆ ಮತ್ತು ಎಲ್ಲೆಲ್ಲಿಗೆ ಅದು ಹೋಗುತ್ತದೆ ಎಂಬುದರ ಬಗ್ಗೆ ಸ್ವಲ್ಪ ಸ್ಟಡಿ ಮಾಡುವುದು ಒಳ್ಳೆಯದು. ಇಂದು ಷೇರು, ಭೂಮಿ ಮತ್ತು ಚಿನ್ನ – ಈ ವರ್ಗಗಳಲ್ಲಿ ಬಿಳಿಯಲ್ಲದೆ ಸಾಕಷ್ಟು ಕಪ್ಪು ಹಣ ಕೂಡ ಹರಿದಾಡುತ್ತಿದೆ. ಆದ್ದರಿಂದ ಈ ಬ್ಲಾಕ್‌ ವೈಟ್‌ ಯುಗದಲ್ಲಿ ನಮ್ಮ ಹೂಡಿಕೆಯನ್ನು ಯಾವ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿಯಾಗಬಹುದು ಎನ್ನುವುದನ್ನು ಊಹಿಸಿಕೊಂಡು ಹೂಡಿಕೆ ಮಾಡುವುದು  ಒಳಿತು. ಡಿಮೊನೆಟೈಸೇಶನ್‌ ಮತ್ತು ಕಪ್ಪು ಹಣದ ವಿರುದ್ಧ ಹೋರಾಟ ಆರಂಭವಾದ ಬಳಿಕ ಕಪ್ಪು ಇಕಾನಮಿ ತುಸು ಕುಂಠಿತವಾಗಿದೆ.

4 ಇನ್ಶೂರೆನ್ಸ್‌ ಮಾಡಿಸಿಕೊಳ್ಳಿ
ಒಂದು ಹೂಡಿಕೆಯ ದೃಷ್ಟಿಯಿಂದ ವಿಮೆಯಲ್ಲಿ ಲಾಭ ಕಡಿಮೆ ಯಾದರೂ ಹೂಡಿಕೆಯಲ್ಲಿ ಲಾಭ ಕೊಡಿಸುವುದು ವಿಮೆಯ ಮುಖ್ಯ ಉದ್ಧೇಶವೂ ಅಲ್ಲ. ಕುಟುಂಬದ ಆರ್ಥಿಕ ಭದ್ರತೆಯ ದೃಷ್ಟಿಯಿಂದ ನೋಡುವಾಗ ಸಾಕಷ್ಟು ಆಸ್ತಿ-ಪಾಸ್ತಿ ಬಿಸಿನೆಸ್‌ ಇಲ್ಲದೆ ಸಂಬಳವನ್ನೇ ನೆಚ್ಚಿ ಬದುಕುವವರಿಗೆ ಇದರ ಅಗತ್ಯ ಜಾಸ್ತಿ ಇರುತ್ತದೆ. ಇನ್ಶೂರೆನ್ಸ್‌ ಮಾಡಿಸಿಕೊಳ್ಳುವುದನ್ನು ಮರೆಯದಿರಿ. 

5 ಇರುವ ಹೂಡಿಕೆಯ ಲಾಲನೆ-ಪೋಷಣೆ,  ಬದಲಾವಣೆ ಅಗತ್ಯ
ನಮ್ಮ ಹೂಡಿಕೆಯನ್ನು ಆಗಾಗ್ಗೆ ಪರಿಶೀಲಿಸಿ ದೇಶದ ಆರ್ಥಿಕತೆ ಮತ್ತು ಬಡ್ಡಿದರಗಳ ಚಲನೆಯನ್ನು ಹೊಂದಿಕೊಂಡು ಬದಲಿಸುತ್ತಾ ಹೋಗಬೇಕಾಗುತ್ತದೆ. ದೀರ್ಘಾವಧಿಗೆಂದು ಕೊಂಡದ್ದಾದರೂ ಷೇರುಗಳನ್ನೂ, ಮ್ಯೂಚುವಲ್‌ ಫ‌ಂಡುಗಳನ್ನೂ ವರ್ಷಕ್ಕೊಮ್ಮೆ ಯಾದರೂ ಪರಿಶೀಲಿಸಬೇಕು. ಈಗ ಕತ್ತೆಯಾದ ಮಾಜಿ ಕುದುರೆ ಗಳಿದ್ದರೆ ಅವನ್ನು ಒ¨ªೋಡಿಸಬೇಕಾಗುತ್ತದೆ. ಇಕ್ವಿಟಿ, ಮತ್ತು ಸಾಲ – ಈ ತರಗತಿಗಳ ಒಳಗೆ ಹಾಗೂ ಇವುಗಳ ನಡುವೆ ಸಾಕಷ್ಟು ಮೆದುಳಿನ ಕಸರತ್ತು ಮಾಡುತ್ತಾ ಇರಬೇಕಾಗುತ್ತದೆ. ಎಲ್ಲಿ ಕಡಿಮೆ ಪ್ರತಿಫ‌ಲ ಬರುತ್ತದೆ ಎಂದು ನೋಡಿಕೊಂಡು ಜಾಸ್ತಿ ಪ್ರತಿಫ‌ಲ ಸಿಗುವೆಡೆಗೆ ಹೋಗಬೇಕಾಗುತ್ತದೆ. 

6 ಅನಗತ್ಯ ಸಾಲ ಬೇಡ
ಕಡಿಮೆ ಬಡ್ಡಿದರದ ಹೂಡಿಕೆ ಇಟ್ಟುಕೊಂಡು ಜಾಸ್ತಿ ಬಡ್ಡಿಯ ಸಾಲ ಕೊಳ್ಳಬಾರದು. ಸಾಲಗಳಲ್ಲೂ ಬೇರೆ ಬೇರೆ ತರಗತಿಗಳಾನು ಸಾರ ಬಡ್ಡಿದರಗಳಲ್ಲಿ ವ್ಯತ್ಯಾಸವಿದೆ. ಇರುವ ಹೂಡಿಕೆಯಿಂದ ಕಡಿಮೆ ಬಡ್ಡಿದರಕ್ಕೆ ಸಾಲ ಸಿಗುವುದಿದ್ದರೆ ಹೂಡಿಕೆಯನ್ನು ಇಟ್ಟುಕೊಂಡೇ ಸಾಲವನ್ನು ಕೊಳ್ಳುವುದು ಒಳಿತು. 

7 ಇನ್‌ಕಂ ಟ್ಯಾಕ್ಸನ್ನು ಮರೆಯಬೇಡಿ
ಹೂಡಿಕೆಯಾಗಲಿ, ಸಾಲವಾಗಲಿ- ಪ್ರತಿಯೊಂದು ವಿಷಯ ದಲ್ಲೂ ಆದಾಯ ತೆರಿಗೆಯ ಹಸ್ತ ಇದ್ದೇ ಇದೆ. ತೆರಿಗೆಯಾರ್ಹ ಮಂದಿ ಎಲ್ಲ ಚಟುವಟಿಕೆಗಳಲ್ಲೂ ಆದಾಯ  ತೆರಿಗೆಯ ಪ್ರಭಾವ ವನ್ನು ಪರಿಗಣಿಸಿಯೇ ಮುಂದುವರಿಯಬೇಕು. ಬರೇ ಕೂಪನ್‌ ರೇಟ್‌ ನೋಡಿದರೆ ಸಾಲದು. ಜಾಹೀರಾತುಗಳಲ್ಲಿ ತೆರಿಗೆಯ ಬೆನಿಫಿಟ್‌ ಬಗ್ಗೆ ಮಾತ್ರ ಉಲ್ಲೇಖ ಬರುತ್ತದೆಯೇ ಹೊರತು ತೆರಿಗೆ ಕಟ್ಟುವ ಬಗ್ಗೆ ಜಾಣ ಮೌನ ಮಾತ್ರ ಕಂಡು ಬರುತ್ತದೆ.

ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next