ಗುರುಗ್ರಾಮ: ಕೇಂದ್ರ ಸರ್ಕಾರದ “ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯ ಬ್ರ್ಯಾಂಡ್ ರಾಯಭಾರಿಯಾಗಿ ಗುರುಗ್ರಾಮದ ಸಹೋದರಿಯರು ಆಯ್ಕೆಯಾಗಿದ್ದಾರೆ.
ಅಂತಾರಾಷ್ಟ್ರೀಯ ಚೆಸ್ ಆಟಗಾರ್ತಿ ತನಿಷ್ಕಾ ಕೋಟಿಯಾ ಮತ್ತು ಅವರ ಸಹೋದರಿ ರಿಧಿಕಾ ಕೋಟಿಯಾ ಅವರನ್ನು ರಾಯಭಾರಿಯನ್ನಾಗಿ ಘೋಷಿಸಲಾಗಿದೆ. ತನಿಷ್ಕಾ ಅವರು ಗುರುಗ್ರಾಮದ ಎಸ್‌ಆರ್‌ಸಿಸಿ ವಿದ್ಯಾರ್ಥಿನಿಯಾಗಿದ್ದರೆ, ತಂಗಿ ರಿಧಿಕಾ ಸನ್‌ಸಿಟಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ವರ್ಲ್ಡ್ ಜ್ಯೂನಿಯರ್ ಚೆಸ್ ಚಾಂಪಿಯನ್‌ಶಿಪ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 19 ವರ್ಷದ ತನಿಷ್ಕಾ ಭಾರತವನ್ನು ಪ್ರತಿನಿಧಿಸಿದ್ದಾರೆ. ಪ್ರತಿಷ್ಠಿತ ವಿಶ್ವ ಯುವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಗುರುಗ್ರಾಮದ ಏಕೈಕ ಬಾಲಕಿ ಎಂಬ ಹಿರಿಮೆಯನ್ನು 14 ವರ್ಷದ ರಿಧಿಕಾ ಪಡೆದಿದ್ದಾರೆ.
ಈಗ ಇವರಿಬ್ಬರೂ ಕೇಂದ್ರ ಸರ್ಕಾರದ ಯೋಜನೆಯ ರಾಯಭಾರಿಯಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ತಂದೆ ಅಜಿತ್ ಕೋಟಿಯಾ, “ಇದು ನಮ್ಮ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ ಸಂಗತಿ. ಮಕ್ಕಳಿಬ್ಬರೂ ನಮ್ಮ ಕನಸುಗಳನ್ನು ಈಡೇರಿಸಿದ್ದಾರೆ’ ಎಂದಿದ್ದಾರೆ.
“ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳೇನೂ ಕಡಿಮೆಯಿಲ್ಲ. ಅವರಿಗೂ ಸಮಾನ ಅವಕಾಶಗಳನ್ನು ನೀಡಬೇಕು ಎನ್ನುವುದಕ್ಕೆ ನನ್ನಿಬ್ಬರು ಮಕ್ಕಳೇ ಸಾಕ್ಷಿ’ ಎಂದು ತಾಯಿ ನಿಧಿ ಕೋಟಿಯಾ ಹೇಳಿದ್ದಾರೆ.
ತಮ್ಮನ್ನು ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನದ ರಾಯಭಾರಿಗಳಾಗಿ ಆಯ್ಕೆ ಮಾಡಿದ ಕೇಂದ್ರ ಸರ್ಕಾರಕ್ಕೆ ಸೋದರಿಯರಿಬ್ಬರೂ ಧನ್ಯವಾದ ಸಲ್ಲಿಸಿದ್ದಾರೆ. ನಾವು ಯಾವತ್ತೂ ಶಿಕ್ಷಣ, ಚೆಸ್ ಮತ್ತು ಸಮಾಜದ ಏಳಿಗೆಗಾಗಿ ದುಡಿಯುವಲ್ಲಿ ಮುಂಚೂಣಿಯಲ್ಲಿರುತ್ತೇವೆ ಎಂದೂ ಹೇಳಿದ್ದಾರೆ.