ನವದೆಹಲಿ:ಅಪಾರ್ಟ್ ಮೆಂಟ್ ಬಾಲ್ಕನಿಯಲ್ಲಿ ನಿಂತು ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ವ್ಯಕ್ತಿಯೊಬ್ಬನ ವಿರುದ್ಧ ಹರ್ಯಾಣ ಪೊಲೀಸರು ಎಫ್ ಐಆರ್ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಒಂದೇ ತಿಂಗಳೊಳಗೆ 2 ಬಾರಿ ಹೆಚ್ಚಳ: ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ 25 ರೂ. ಏರಿಕೆ
ಗುರುಗ್ರಾಮ್ ನಿವಾಸಿ ಅನ್ವರ್ ಸೈಯದ್ ಫೈಜುಲ್ಲಾ ಹಶ್ಮಿ ಎಂಬಾತ ಅಪಾರ್ಟ್ ಮೆಂಟ್ ನ ಬಾಲ್ಕಿನಿಯಲ್ಲಿ ನಿಂತು ಪಾಕಿಸ್ತಾನ ಪರ ಘೋಷಣೆ ಕೂಗಿರುವುದಾಗಿ ಸ್ಥಳೀಯರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಎಫ್ ಐಆರ್ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವ ಪ್ರಕರಣ ಹೆಚ್ಚಳವಾಗುತ್ತಿದ್ದು, ಆರೋಪಿ ಸೈಯದ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(ಬಿ) ಪ್ರಕಾರ ರಾಜೇಂದ್ರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿ ತಲೆಮರೆಯಿಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಹರ್ಯಾಣ ಪೊಲೀಸರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈತ ಪಾಕ್ ಪರ ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದಾಗಿ ವರದಿ ವಿವರಿಸಿದೆ.
ಏತನ್ಮಧ್ಯೆ ಹಶ್ಮಿ ಪತ್ನಿ ಸ್ಥಳೀಯರ ವಿರುದ್ಧವೇ ದೂರು ನೀಡಿದ್ದು, ತನ್ನ ಪತಿ ಡಿಪ್ರೆಶನ್ ನಿಂದ ಬಳಲುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಇಂಪಿರಿಯಲ್ ಗಾರ್ಡನ್ಸ್ ಸೊಸೈಟಿಯ ಅಪಾರ್ಟ್ ಮೆಂಟ್ ನಿವಾಸಿಗಳು ತನ್ನ ಪತಿಗೆ ಕಿರುಕುಳ ನೀಡುತ್ತಿರುವುದಾಗಿ ದೂರು ನೀಡಿರುವುದಾಗಿ ಡಿಸಿಪಿ ಧೀರಜ್ ಸೇಠಿಯ ತಿಳಿಸಿದ್ದಾರೆ.