ಗುರುಗ್ರಾಮ್: ನಕಲಿ ವೈದ್ಯರು, ನಕಲಿ ಔಷಧ, ನಕಲಿ ಚಿನ್ನದ ಬಗ್ಗೆ ಓದಿದ್ದೀರಿ. ಆದರೆ ಗುರುಗ್ರಾಮ್ ನಗರದ ವಝಿರಾಬಾದ್ ಗ್ರಾಮದ ಸೆಕ್ಟರ್ 52ರಲ್ಲಿ 16 ಬೆಡ್ ಗಳನ್ನು ಒಳಗೊಂಡಿರುವ ನಕಲಿ ಆಸ್ಪತ್ರೆಯನ್ನು ಪೊಲೀಸರು ಪತ್ತೆಹಚ್ಚಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:UP ಪೊಲೀಸರ ಎನ್ ಕೌಂಟರ್: ಅತೀಕ್ ಅಹ್ಮದ್ ಪುತ್ರ ಅಸದ್ – ಶೂಟರ್ ಗುಲಾಮ್ ಹತ್ಯೆ
ಅಚ್ಚರಿ ವಿಷಯ ಏನೆಂದರೆ ಈ ಆಸ್ಪತ್ರೆಯಲ್ಲಿ ಪ್ರಯೋಗಾಲಯ, ಆಪರೇಶನ್ ಥಿಯೇಟರ್ ಹಾಗೂ ಐಸಿಯು ಹೊಂದಿದ್ದು, ಈ ಆಸ್ಪತ್ರೆಯಯನ್ನು ಕೇವಲ 10ನೇ ತರಗತಿ ಉತ್ತೀರ್ಣನಾದ ನುಹ್ ನಿವಾಸಿ ನಡೆಸುತ್ತಿದ್ದು, ತನ್ನನ್ನು ತಾನೇ ವೈದ್ಯ ಎಂದು ಹೇಳಿ ಜನರನ್ನು ವಂಚಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಈ ನಕಲಿ ಆಸ್ಪತ್ರೆಯ ಬಂಡವಾಳ ಬಯಲಿಗೆಳೆದಿದೆ. ನಕಲಿ ಆಸ್ಪತ್ರೆಯಲ್ಲಿ 16 ಬೆಡ್ ಗಳಿವೆ. ಜನರಲ್ ವಾರ್ಡ್, ಪ್ರೈವೇಟ್ ರೂಮ್ ಗಳು, ಲ್ಯಾಬ್, ಐಸಿಯು, ಮೆಡಿಸಿನ್ಸ್, ತುರ್ತು ಚಿಕಿತ್ಸಾ ನಿಗಾ ಘಟಕ ಹಾಗೂ ಆಪರೇಶನ್ ಥಿಯೇಟರ್ ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.
ಡಿಎಸ್ಪಿ ಇಂದ್ರಜಿತ್ ಯಾದವ್ ಅವರ ಪ್ರಕಾರ, ವಝೀರಾಬಾದ್ ನಲ್ಲಿ ಮೆಡಿವರ್ಸಲ್ ಹಾಸ್ಪಿಟಲ್ ಎಂಬ ಹೆಸರಿನಲ್ಲಿ ನಕಲಿ ಸರ್ಟಿಫಿಕೇಟ್ ಹೊಂದಿರುವ ವ್ಯಕ್ತಿಗಳು ಆಸ್ಪತ್ರೆ ನಡೆಸುತ್ತಿದ್ದಾರೆಂಬ ಬಗ್ಗೆ ಪೊಲೀಸರಿಗೆ ಸುಳಿವು ನೀಡಿರುವುದಾಗಿ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ನುಹ್ ನಿವಾಸಿ ಜುನೈದ್, ಕಾನ್ಪುರದ ನಿವಾಸಿ ಪ್ರಿಯಾ ಅಲಿಯಾಸ್ ಡೋಲಿ ಎಂಬಿಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ.
ಆಸ್ಪತ್ರೆಗೆ ಸಂಬಂಧಪಟ್ಟಂತೆ ಆಪರೇಶನ್ ಥಿಯೇಟರ್, ಲ್ಯಾಬ್ ಸೇರಿದಂತೆ ಯಾವುದಕ್ಕೂ ಅನುಮತಿ ಇರುವ ದಾಖಲೆಗಳನ್ನು ಆರೋಪಿಗಳು ಸಲ್ಲಿಸಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ದಾಳಿಯಲ್ಲಿ ಒಪಿಡಿ ರಿಜಿಸ್ಟರ್, ರಕ್ತ ಪರೀಕ್ಷೆ ಯಂತ್ರ, ವೈದ್ಯರ ಪ್ರಿಸ್ ಕ್ರಿಪ್ಶನ್ ಸ್ಲಿಪ್, ಮೆಡಿಸಿನ್ಸ್ ಹಾಗೂ ಕಂಪ್ಯೂಟರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಡಿಎಸ್ಪಿ ಯಾದವ್ ಮಾಹಿತಿ ನೀಡಿದ್ದಾರೆ.