“ನೀವು ಭೂಮಿನ ಹಾಳು ಮಾಡೋಕೆ ನಿಂತಿದ್ದೀರ, ನಾನು ಕಾಪಾಡೋಕೆ ನಿಂತಿದ್ದೀನಿ…’ ಪೊಲೀಸ್ ಅಧಿಕಾರಿ ಗುರುದೇವ್ ಇಂಥದ್ದೊಂದು ಖಡಕ್ ಡೈಲಾಗ್ ಎದುರಾಳಿಗಳ ಮುಂದೆ ಹೇಳುವಷ್ಟರೊಳಗೆ, ಕೆಲ ಅಮಾಯಕರು ಉಸಿರು ನಿಲ್ಲಿಸಿರುತ್ತಾರೆ. ದ್ವೇಷದ ಕಿಡಿ ಸುತ್ತಮುತ್ತಲಿರುವವರನ್ನು ಒಂದಷ್ಟು ಆಹುತಿ ತೆಗೆದುಕೊಂಡಿರುತ್ತದೆ. ಗುಂಡಿನ ಮೊರೆತಕ್ಕೆ ದುರಾಳಿಗಳ ಒಂದಷ್ಟು ತಲೆಗಳೂ ಉರುಳಿರುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಗುರುದೇವ್ ಹೊಯ್ಸಳ’ ಸಿನಿಮಾದ ಕೆಲ ದೃಶ್ಯಗಳು. ಇಷ್ಟು ಹೇಳಿದ ಮೇಲೆ ಇದೊಂದು ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಾಗಾದ್ರೆ, ಈ “ಭೂಮಿ’ ಅಂದ್ರೆ ಯಾವುದು? ಅದರ ರಕ್ಷಣೆ ಆಗುತ್ತದೆಯಾ? “ಭೂಮಿ’ ಹಾಳು ಮಾಡಲು ಬಂದವರಿಗೆ ತಕ್ಕ ಶಾಸ್ತಿ ಆಗುತ್ತದೆಯಾ? ಇಲ್ಲವಾ ಎಂಬುದು ಗೊತ್ತಾಗಬೇಕಾದರೆ “ಗುರುದೇವ್ ಹೊಯ್ಸಳ’ನನ್ನು ಕ್ಲೈಮ್ಯಾಕ್ Õವರೆಗೂ ನೋಡಬೇಕು.
ಬಿಡುಗಡೆಗೂ ಮೊದಲೇ ಚಿತ್ರತಂಡ ಹೇಳಿದಂತೆ, ಟೀಸರ್ ಮತ್ತು ಟ್ರೇಲರ್‌ಗಳಲ್ಲಿ ತೋರಿಸಿರುವಂತೆ “ಗುರುದೇವ್ ಹೊಯ್ಸಳ’ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರದ ಸಿನಿಮಾ. ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಏನೇನು ಸಮಸ್ಯೆ, ಸವಾಲು ಮತ್ತು ಸಂಕಷ್ಟಗಳನ್ನು ಎದುರಿಸುತ್ತಾನೆ. ಅಂತಿಮವಾಗಿ ಪ್ರೀತಿ, ಪ್ರೇಮ, ಕರ್ತವ್ಯ, ಜಾತೀಯತೆ ವೈಷಮ್ಯ ಅದೆಲ್ಲವನ್ನೂ ಹೇಗೆ ಎದುರಿಸಿ ನಿಲ್ಲುತ್ತಾನೆ ಎಂಬುದು ಸಿನಿಮಾದ ಕಥಾವಸ್ತು. ಮಾಮೂಲಿ ಪೊಲೀಸ್ ಸ್ಟೋರಿ ಸಿನಿಮಾಗಳಂತೆ ಇಲ್ಲೂ ಪೊಲೀಸ್ ಮತ್ತು ಪಾತಕಿಗಳ ನಡುವೆ ಗುದ್ದಾಟ, ಹೋರಾಟ, ಮಾಫಿಯಾ, ಎಲ್ಲವೂ ಇದೆ. ಇವೆಲ್ಲದರ ಜೊತೆಗೆ ಮರ್ಯಾದ ಹತ್ಯೆಯಂತಹ ವಿಷಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಆ್ಯಕ್ಷನ್ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿಜಯ್.
ಇದನ್ನೂ ಓದಿ:ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಜ್ಯೂರಿ ಮೆಚ್ಚುಗೆಯ ಪ್ರಶಸ್ತಿ ಪಡೆದ ‘ಇನ್’
ಇನ್ನು ನಾಯಕ ನಟ ಧನಂಜಯ್ “ಗುರುದೇವ್ ಹೊಯ್ಸಳ’ನಾಗಿ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಡೈಲಾಗ್ ಡೆಲಿವರಿ, ಆ್ಯಕ್ಷನ್, ಮ್ಯಾನರಿಸಂ, ಪೊಲೀಸ್ ಗೆಟಪ್ ಎಲ್ಲದರಲ್ಲೂ ಧನಂಜಯ್ ಅವರದ್ದು “ಅಬ್ಬರ’ದ ಅಭಿನಯ. “ಗುರುದೇವ್ ಹೊಯ್ಸಳ’ನಾಗಿ ಮಾಸ್ ಆಡಿಯನ್ಸ್ ಮನ-ಗಮನ ಎರಡನ್ನೂ ಸೆಳೆಯಲು ಧನಂಜಯ್‌ಯಶಸ್ವಿಯಾಗಿದ್ದಾರೆ. ನಾಯಕಿ ಅಮೃತಾ ಅಯ್ಯಂಗಾರ್ ತೆರೆಮೇಲೆ ಇರುವಷ್ಟು ಹೊತ್ತು ಇಷ್ಟವಾಗುತ್ತಾರೆ.
ಖಳನಾಯಕನಾಗಿ ನವೀನ್ ಶಂಕರ್ ತಮ್ಮ ಪಾತ್ರಕ್ಕೆ ಫುಲ್ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಉಳಿದಂತೆ ಅಚ್ಯುತ ಕುಮಾರ್, ರಾಜೇಶ್ ನಟರಂಗ, ನಾಗಭೂಷಣ್ ಸೇರಿದಂತೆ ಬಹುತೇಕ ಎಲ್ಲ ಕಲಾವಿದರದ್ದೂ ನಿರ್ದೇಶಕರ ಆಶಯಕ್ಕೆ ತಕ್ಕಂತೆ ಅಚ್ಚುಕಟ್ಟು ಅಭಿನಯ.
ತಾಂತ್ರಿಕವಾಗಿ ಛಾಯಾಗ್ರಹಣ, ಲೊಕೇಶನ್ಸ್ ಸಿನಿಮಾವನ್ನು ಅದ್ಧೂರಿಯಾಗಿ ಕಾಣುವಂತೆ ಮಾಡಿದೆ. ಒಂದೆರಡು ಹಾಡುಗಳು ಗುನುಗುಡುವಂತಿದ್ದು, ಹಿನ್ನೆಲೆ ಸಂಗೀತ ಸಿನಿಮಾದ ಮತ್ತೂಂದು ಪ್ಲಸ್ ಪಾಯಿಂಟ್ ಎನ್ನಬಹುದು. ಒಟ್ಟಾರೆ ಮಾಸ್ ಪ್ರೇಕ್ಷಕರನ್ನೇ ಗಮನದಲ್ಲಿರಿಸಿಕೊಂಡು ಮಾಡಿದಂತಿರುವ “ಗುರುದೇವ್ ಹೊಯ್ಸಳ’ ಥಿಯೇಟರ್‌ಗೆ ಹೋದವರಿಗೆ ಒಂದಷ್ಟು ಅಬ್ಬರದ ಮನರಂಜನೆಯನ್ನೇ ನೀಡುತ್ತಾನೆ.
ಜಿ.ಎಸ್.ಕೆ. ಸುಧನ್