ಮುಂಬಯಿ: ಭಾರತ ದೇಶ ಬೆಳಗಿರುವುದು ಇಲ್ಲಿಯ ಆಧ್ಯಾತ್ಮಿಕ ಶಕ್ತಿಯಿಂದಾಗಿದೆ. ಈ ಶಕ್ತಿಯೇ ದೇಶವನ್ನು ವಿಶ್ವಗುರುವನ್ನಾಗಿಸಿದೆ. ರಾಮಾಯಣ, ಮಹಾಭಾರತ ಈ ದೇಶದ ಎರಡು ಕಣ್ಣುಗಳಿದ್ದಂತೆ. ಇದು ಜೀವನದ ಪಥವನ್ನು ತೋರಿಸುವುದರೊಂದಿಗೆ ನಮ್ಮೊಳಗೆ ಆಧ್ಯಾತ್ಮಿಕತೆಯನ್ನು ವೃದ್ಧಿಸುತ್ತದೆ. ದೇವರಲ್ಲಿ ಕಲ್ಮಶ ರಹಿತ ನಂಬಿಕೆಯಿಟ್ಟರೆ ದೇವರು ಮೆಚ್ಚುತ್ತಾನೆ. ದೇವರ ನಿಯಂತ್ರಣದಲ್ಲಿದ್ದು, ಧರ್ಮ ಮಾರ್ಗದಲ್ಲಿ ನಡೆದರೆ ನಮ್ಮ ಜೀವನ ಸಾರ್ಥಕತೆಯನ್ನು ಪಡೆಯಲು ಸಾಧ್ಯವಿದೆ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಜು. 30ರಂದು ಸಯಾನ್ ನಿತ್ಯಾನಂದ ಸಭಾಗೃಹದಲ್ಲಿ ಸಭಾ ಗೃಹದ ಶ್ರೀಮತಿ ಶಾಂಭವಿ ಬಾಬು ಶೆಟ್ಟಿ, ಶ್ರೀಮತಿ ಸರೋಜಿನಿ ಹಿರಿಯಣ್ಣ ಶೆಟ್ಟಿ, ನಿತ್ಯಾನಂದ ಕ್ಯಾಟರರ್ನ ಮಾಲಕ ಉದ್ಯಮಿ ವಿಶ್ವನಾಥ ವಿ. ಶೆಟ್ಟಿ ದಂಪತಿ ಹಾಗೂ ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ವತಿಯಿಂದ ಆಯೋಜಿಸಲಾಗಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಾವು ದ್ವೇಷ ಭಾವವನ್ನು ತೊರೆದು ಪ್ರೀತಿ, ಆತ್ಮೀಯತೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ಇಂದಿನ ಯುವ ಶಕ್ತಿ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಬೇಕು. ಯುವಶಕ್ತಿಗೆ ಒಳ್ಳೆಯ ಸಂಸ್ಕೃತಿ ದೊರೆತರೆ ಉತ್ತಮ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಿದೆ. ಗುರುವಿನ ಮುಖಾಂತರ ನಾವು ದೇವರನ್ನು ಕಾಣಬೇಕು. ಪರೋಪಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಮಕ್ಕಳಿಗೆ ಆಸ್ತಿಯನ್ನು ಸಂಪಾದಿಸಬಾರದು. ಅವರನ್ನೇ ಆಸ್ತಿಯನ್ನಾಗಿಸಬೇಕು ಎಂದು ನುಡಿದರು.
ಪ್ರಾರಂಭದಲ್ಲಿ ಸಾಧ್ವಿ ಮಾತಾನಂದ ಮಯಿ ಅವರ ಪ್ರಾರ್ಥನೆಯೊಂದಿಗೆ ಶ್ರೀಗಳು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ಶಾಂಭವಿ ಬಾಬು ಶೆಟ್ಟಿ, ಶ್ರೀಮತಿ ಸರೋಜಿನಿ ಹಿರಿಯಣ್ಣ ಶೆಟ್ಟಿ, ನಿತ್ಯಾನಂದ ಕ್ಯಾಟರರ್ನ ಮಾಲಕ ಉದ್ಯಮಿ ವಿಶ್ವನಾಥ ವಿ. ಶೆಟ್ಟಿ ದಂಪತಿ ಹಾಗೂ ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಎಲ್. ಶೆಟ್ಟಿ, ಉಪಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ, ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಸುಕುಮಾರ್ ಶೆಟ್ಟಿ, ಬಳಗದ ಸದಸ್ಯರು ಮತ್ತು ಒಡಿಯೂರು ಗ್ರಾಮೋತ್ಸವ ಸಮಿತಿಯ ಮುಂಬಯಿ ಅಧ್ಯಕ್ಷ ವಾಮಯ್ಯ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ರೇವತಿ ವಾಮಯ್ಯ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉದ್ಯಮಿ ವಿಶ್ವನಾಥ ವಿ. ಶೆಟ್ಟಿ ಮತ್ತು ಶೈಲಾ ವಿ. ಶೆಟ್ಟಿ ದಂಪತಿ ಶ್ರೀಗಳ ಪಾದುಕಾ ಪೂಜೆ ನೆರವೇರಿಸಿ, ಫಲಪುಷ್ಪವನ್ನಿತ್ತು ಶ್ರೀಗಳನ್ನು ಗೌರವಿಸಿ ದರು. ಮೀರಾರೋಡ್ ಸದ್ಗುರು ಭಜನ ಮಂಡಳಿಯವರಿಂದ ಭಜನ ಕಾರ್ಯಕ್ರಮ ಜರಗಿತು. ಶ್ರೀಗಳು ಭಕ್ತಾದಿ ಗಳನ್ನು ಫಲ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿ ದರು. ಕೊನೆಯಲ್ಲಿ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ಶ್ರೀ ಗುರುದೇವಾ ಸೇವಾ ಬಳಗ ಮತ್ತು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದಿಂದ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಸಾಧ್ವಿ ಮಾತಾನಂದಮಯಿ ಅವರಿಗೆ ಫಲಪುಷ್ಪವನ್ನು ಅರ್ಪಿಸಲಾಯಿತು. ಗುರುಭಕ್ತರು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಸುಭಾಷ್ ಶಿರಿಯಾ