ಭಾಲ್ಕಿ: ಶ್ರೀ ಸಂತ ಶಿರೋಮಣಿ ಗುರು ರವಿದಾಸ ಮಹಾರಾಜರು ಸರ್ವ ಸಮುದಾಯದ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರ ಸಾಮಾಜಿಕ, ಧಾರ್ಮಿಕ ಸೇವೆ ಅನನ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಹರಳಯ್ಯ ಸಮಾಜ ವತಿಯಿಂದ ಆಯೋಜಿಸಿದ್ದ ಸಂತ ಶಿರೋಮಣಿ ರವಿದಾಸ ಮಹಾರಾಜರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ರವಿದಾಸ ಮಹಾರಾಜರು ಹಿಂದುಳಿದ ಸಮಾಜದಲ್ಲಿ ಜನಿಸಿದರೂ ಅವರ ಆಚಾರ- ವಿಚಾರಗಳು ಎಲ್ಲರಿಗೂ ಮಾದರಿ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರಿಗೆ ಸ್ವಉದ್ಯೋಗದ ಪರಿಕಲ್ಪನೆ ನೀಡಿ ಸ್ವಾವಲಂಬಿ ಜೀವನ ಸಾಗಿಸಬೇಕೆಂಬ ಅವರ ಸಲಹೆಗೆ ಎಲ್ಲರೂ ತಲೆ ಬಾಗುತ್ತಿದ್ದರು. ಅಸ್ಪೃಶ್ಯತೆ, ಜಾತೀಯತೆ, ಬಡವ-ಶ್ರೀಮಂತ ಎಂಬ ಭೇದಗಳು ನಮ್ಮಿಂದ ದೂರವಾದಾಗಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದ ಅವರು, ಬರುವ ದಿನಗಳಲ್ಲಿ ಹರಳಯ್ಯ ಸಮುದಾಯದವರಿಗೆ ಸಮುದಾಯಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಮಹಾಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಆಶೀವರ್ಚನ ನೀಡಿದರು. ಹರಳಯ್ಯ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಉಮೇಶ ಬೋರಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಗವಾನ ರವಿದಾಸ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಆರ್.ಬಿ. ರೋಜೋದಕರ್, ಶಿಕ್ಷಕದತ್ತು ಕಾಟಕರ್, ಭರತ ವಾಘಮಾರೆ ವಿಶೇಷ ಉಪನ್ಯಾಸ ನೀಡಿದರು.
ಈ ವೇಳೆ ಬೆಂಗಳೂರಿನ ಹರಳಯ್ಯ ಸಮಾಜದ ರಾಜ್ಯಾಧ್ಯಕ್ಷ ಶಿವಾನಂದ ಮಬ್ರಮಕರ್, ಗುಜರಾತನ ಅಶೋಕ ಜೈಸವಾರ, ಸಂಭಾಜಿ ಬ್ರಿಗೇಡ್ ರಾಜ್ಯ ಸಂಯೋಜಕ ಸತೀಶಕುಮಾರ ಸೂರ್ಯವಂಶಿ, ಸಹಾಯಕ ಅಭಿಯಂತರ ಪವನಕುಮಾರ ಗಣೇಶ, ಶಿವಾಜಿರಾವ ಲಕವಾಲೆ ಇದ್ದರು. ಅನೀಲಕುಮಾರ ಶಿಂದೆ ಸ್ವಾಗತಿಸಿದರು. ಸಂಜೀವ ಸೋನಕಾಂಬಳೆ, ಗಣಪತರಾವ್ ಕಲ್ಲೂರೆ ನಿರೂಪಿಸಿದರು.