ಮೈಸೂರು: ನಗರದಲ್ಲೆಡೆ ಗುರು ಪೂರ್ಣಿಮೆಯನ್ನು ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಶಿಷ್ಯಂದಿರು ಗುರುವಿಗೆ ನಮನ ಸಲ್ಲಿಸಿದರೆ, ದೇವಸ್ಥಾನಗಳು ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ಧಾರ್ಮಿಕ ಕಾರ್ಯಗಳು ನಡೆದವು. ಅಲ್ಲದೇ ಶಾಲಾ- ಕಾಲೇಜುಗಳಲ್ಲಿಯೂ ಸಂಭ್ರಮದಿಂದ ಗುರುಪೂರ್ಣಿಮೆ ಆಚರಿಸಲಾಯಿತು.
ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರೂ ತಮ್ಮ ಗುರುವಿಗೆ ಪೂಜೆ ಸಲ್ಲಿಸಿದರು. ಜತೆಗೆ ಗುರುಪೂರ್ಣಿಮೆ ಮಹತ್ವ ಸಾರುವ ಪ್ರವಚನ, ಉಪನ್ಯಾಸಗಳು ನಗರದ ಹಲವೆಡೆ ನಡೆದವು.
ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಇತರ ದಿನಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಸಂಸ್ಕೃತ ಭಾಷೆಯಲ್ಲಿ “ಗು’ ಅಂದರೆ ಅಂಧಕಾರ ಅಥವಾ ಅಜ್ಞಾನ. “ರು’ ಅಂದರೆ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಹೀಗಾಗಿ ನಗರದ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರು ಪೂರ್ಣಿಮಾ ಆಚರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ಕೆಲವೆಡೆ ವಿದ್ವಾಂಸರನ್ನು ಸ್ಮರಿಸುವ ಮೂಲಕ ಗುರು ಪೂರ್ಣಿಮೆ ಆಚರಿಸಲಾಯಿತು.
ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಗುರುಪೂರ್ಣಿಮೆಯಲ್ಲಿ ಮೈಸೂರು ಯೋಗ ಪರಂಪರೆ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಯಿತು. ಮೈಸೂರಿನ ಯೋಗ ಪರಂಪರೆ, ಯೋಗಕ್ಕೆ ರಾಜಮನತನದ ಪ್ರೋತ್ಸಾಹ ಬಿಂಬಿಸುವ ಛಾಯಾಚಿತ್ರಗಳು, ಯೋಗ ಗುರುಗಳಾದ ತಿರುಮಲೈ ಕೃಷ್ಣಮಾಚಾರ್ಯರು, ಬಿ.ಕೆ.ಎಸ್.ಅಯ್ಯಂಗಾರ್ ಸೇರಿದಂತೆ ಯೋಗ ಗುರುಗಳ ಛಾಯಾಚಿತ್ರ ಪ್ರದರ್ಶಿಸಲಾಯಿತು.
ನಿಜಗುಣ ಸತ್ಸಂಗ ಬಳಗದಿಂದ ನಗರದ ಒಕ್ಕಲಗೇರಿಯ ಶ್ರೀ ರಾಮ ಮಂದಿರದಲ್ಲಿ ಆಯೋಜಿಸಿದ್ದ 28ನೇ ಗುರುಪೂರ್ಣಿಮೆಯಲ್ಲಿ ಪ್ರಾಕೃತ ವಿದ್ವಾಂಸರಾದ ಪ್ರೊ.ಶುಭಚಂದ್ರ ಅವರು “ಬದುಕಿನಲ್ಲಿ ಗುರುವಿನ ಪಾತ್ರ’ ಕುರಿತು ಉಪನ್ಯಾಸ ನೀಡಿದರು. ಹೆಬ್ಟಾಳ್‌ನ ಸಿರಡಿ ಸಾಯಿ ಸೇವಾಶ್ರಮ ಟ್ರಸ್ಟ್‌ನಿಂದ ಗುರುಪೂರ್ಣಿಮೆ ಪ್ರಯುಕ್ತ ಶಿರಡಿ ಸಾಯಿಬಾಬಾ ಅವರಿಗೆ ಪೂಜೆ, ಹೋಮ, ಭಜನೆ, ಆರಾಧನೆ ಮತ್ತು ಪ್ರಸಾದ ವಿತರಣೆ ನಡೆಸಲಾಯಿತು.
ರಾಮಕೃಷ್ಣ ನಗರದ ಶ್ರೀ ಪ್ರಸನ್ನ ಗಣಪ ಮತ್ತು ಶಿರಡಿ ಸಾಯಿ ಶಕೊ ಸನ್ನಿಧಿ ಚಾರಿಟಬಲ್ ಟ್ರಸ್‌ನಿಂದ ಗುರುಪೂರ್ಣಿಮೆ ಆಚರಿಸಲಾಯಿತು. ಗುರುಪೂರ್ಣಿಮೆ ಪ್ರಯುಕ್ತ ಮಹರ್ಷಿ ಪತಂಜಲಿ ಧ್ಯಾನ ಕೇಂದ್ರದಲ್ಲಿ ಪ್ರೊ.ಕೇಶವಮೂರ್ತಿ ಅವರಿಂದ ಷಡರ್ಶನಗಳು ಕುರಿತು ಪ್ರವಚನ ನಡೆಯಿತು.