ಬೆಂಗಳೂರು: ರಾಜಧಾನಿಯ ಮಂದಿರ ಮಠಗಳನ್ನು ಸೇರಿದಂತೆ ವಿವಿಧೆಡೆ ಶ್ರದ್ಧಾ – ಭಕ್ತಿಯಿಂದ ಮಂಗಳವಾರ ಗುರುಪೂರ್ಣಿಮೆ ಆಚರಿಸಲಾಯಿತು. ನಗರದ ಎಲ್ಲಾ ಸಾಯಿ ಬಾಬಾ ದೇವಸ್ಥಾನಗಳಲ್ಲಿ, ಮಠಗಳಲ್ಲಿ, ವೇದ ಪಾಠಶಾಲೆಗಳು, ಯೋಗ ಕೇಂದ್ರಗಳು ಹಾಗೂ ಕೇಂದ್ರಗಳಲ್ಲಿ ಗುರುವಂದನೆ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಅರ್ಥ ಪೂರ್ಣವಾಗಿ ಗುರುಪೂರ್ಣಿಮೆ ನಡೆಯಿತು.
ಸಾಯಿ ಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆಗಳ ಹಿನ್ನೆಲೆ ಭಕ್ತರು ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತು ದರ್ಶನ ಪಡೆದರು. ದಿನವಿಡೀ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು. ನಾಡಪ್ರಭು ಕೆಂಪೇಗೌಡ ಸ್ಟೇಡಿಯಂನಲ್ಲಿ ಮಲ್ಲೇಶ್ವರದ ಶಿರಡಿ ಸಾಯಿ ಭಿಕ್ಷಾ ಕೇಂದ್ರದ ವತಿಯಿಂದ ಗುರು ಪೂರ್ಣಿಮೆ ಪ್ರಯುಕ್ತ ದತ್ತಾತ್ರೇಯ ಹೋಮ ನಡೆಯಿತು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನಮಠ ಹಾಗೂ ಗುರು ಜ್ಞಾನ ಕೇಂದ್ರ ಟ್ರಸ್ಟ್ ಸಹಯೋಗದಲ್ಲಿ ನಡೆದ 32ನೇ ಗುರು ಪೌರ್ಣಿಮಾ ಮಹೋತ್ಸವದಲ್ಲಿ ಬೆಳಗ್ಗೆಯಿಂದ ಅಭಿಷೇಕ, ಅಲಂಕಾರ ಮತ್ತು ಸತ್ಯನಾರಾಯಣ ಪೂಜೆ, ವ್ಯಾಸ ಪೂಜೆ ಮಾಡಲಾಯಿತು. ಬಳಿಕ ಹೋಮ – ಹವನ ಹಾಗೂ ಭಜನೆ ನಡೆದವು.
ಜೆ.ಪಿ.ನಗರದ ಶ್ರೀ ಸದ್ಗುರು ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಪುಷ್ಪಾಭಿಷೇಕ ನಡೆಯಿತು ಬಳಿಕ ಸಂಜೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಲಗ್ಗೆರೆ ಹೊರ ವರ್ತುಲ ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಆರತಿಯೊಂದಿಗೆ ಪೂಜೆ ಕೈಂಕರ್ಯಗಳು ನಡೆದವು. ಈ ವೇಳೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ದಿನವಿಡೀ ಉಷಾ ಕೀರ್ತನ, ವೇದಘೋಷ, ಭಜನೆ ನಡೆಯಿತು.
ಚಕ್ರವರ್ತಿ ಲೇಔಟ್‌ನಲ್ಲಿ ಶ್ರೀ ದತ್ತಗುರು ಸದಾನಂದ ಮಹಾರಾಜರ ಆಶ್ರಮದಲ್ಲಿ ಗಣಪತಿ ಮತ್ತು ದತ್ತಾತ್ರೇಯ ಮೂರ್ತಿಗಳಿಗೆ ಬೆಳಗ್ಗೆ ಅಭಿಷೇಕ ನಡೆಯಿತು. ನಂತರ ಸಾಯಿಬಾಬಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಡೊಳ್ಳುಕುಣಿತ, ವೀರಗಾಸೆ, ಕೋಲಾಟ ಜೊತೆಯಾದವು. ಸಂಜೆ ಭಜನೆ, ಪ್ರಸಾದ ವಿನಿಯೋಗ ಮಾಡಲಾಯಿತು.