Advertisement

Guru Poornime: ವಿವಿಧೆಡೆ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ

12:19 AM Jul 22, 2024 | Team Udayavani |

ಗೋಕರ್ಣದಲ್ಲಿ ಶ್ರೀರಾಘವೇಶ್ವರ ಸ್ವಾಮೀಜಿ ವ್ರತಾರಂಭ 
ಗೋಕರ್ಣ: ಅಜ್ಞಾನವೇ ಆವರಣ. ಸುಜ್ಞಾನವೇ ಅನಾವರಣ. ಅರಿವಿನ ಪ್ರಾಪ್ತಿಯೇ ನಿಜವಾದ ಅನಾವರಣ ಎಂದು ಶ್ರೀರಾಮಚಂದ್ರಾಪುರ ಮಠದ  ಶ್ರೀ ರಾಘವೇಶ್ವಭಾರತೀ ಸ್ವಾಮೀಜಿ ನುಡಿದರು. ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಆವರಣದಲ್ಲಿ ರವಿವಾರ ಅನಾವರಣ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಪ್ರತಿಯೊಬ್ಬರ ಹೃದಯವೂ ಒಂದು ಅಮೂಲ್ಯ ರತ್ನ. ಆದರೆ ಅದರ ಕಲ್ಪನೆ ನಮಗಿಲ್ಲ. ರತ್ನಕ್ಕೆ ಮುಚ್ಚಿರುವ ಆವರಣವನ್ನು ಸುಜ್ಞಾನದ ಮೂಲಕ ಸರಿಸುವುದೇ ಅನಾವರಣ ಎಂದರು. ಇದಕ್ಕೂ ಮುನ್ನ ಶ್ರೀಸಂಸ್ಥಾನದವರು ಸಾಂಪ್ರದಾಯಿಕ ವ್ಯಾಸಪೂಜೆ ನೆರವೇರಿಸುವ ಮೂಲಕ ಶ್ರೀಗಳು ಚಾತುರ್ಮಾಸ್ಯ ವ್ರತಾರಂಭ ಮಾಡಿದರು.

Advertisement

ಶೃಂಗೇರಿ: ಉಭಯ ಶ್ರೀಗಳಿಂದ ವ್ಯಾಸಪೂಜೆ
ಶೃಂಗೇರಿ: ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ರವಿವಾರ ಚಾತುರ್ಮಾಸ್ಯ ವ್ರತ ಆರಂಭಿಸಿದರು. ಶ್ರೀ ಭಾರತೀತೀರ್ಥ ಸ್ವಾಮೀಜಿ 50ನೇ ಹಾಗೂ ಅವರ ಉತ್ತರಾಧಿ ಕಾರಿ ಕಿರಿಯ ಸ್ವಾಮೀಜಿಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ತಮ್ಮ 10 ನೇ ಚಾತುರ್ಮಾಸ್ಯ ವೃತದ ಸಂಕಲ್ಪ ಕೈಗೊಂಡರು. ಶ್ರೀಮಠದ ಎಲ್ಲ ದೇವಾಲಯಗಳಿಗೂ ಭೇಟಿ ನೀಡಿ ದೇವರ ದರ್ಶನ ಪಡೆದು, ಶ್ರೀ ಶಾರದಾಂಬೆಗೆ ಪೂಜೆ ಸಲ್ಲಿಸಿ ಗುರುಭವನದಲ್ಲಿ ವ್ಯಾಸಪೂಜೆ ನೆರವೇರಿಸಿದರು.

ಸ್ವರ್ಣವಲ್ಲೀ ಶ್ರೀಗಳ ಸಂಕಲ್ಪ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಉಭಯ ಶ್ರೀಗಳು ಚಾತುರ್ಮಾಸ್ಯ ವ್ರತಾಚರಣೆಗೆ ಸಂಕಲ್ಪಿಸಿದರು. ಮಠದ ಹಿರಿಯ ಯತಿಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿ ಶ್ರೀ ಆನಂದಭೋದೇಂದ್ರ ಸರಸ್ವತೀ ಸ್ವಾಮೀಜಿ ವ್ಯಾಸ ಪೂಜೆ ನಡೆಸಿ ವ್ರತ ಸಂಕಲ್ಪಿಸಿದರು. ಹಿರಿಯ ಶ್ರೀಗಳ 34ನೇ ಚಾತುರ್ಮಾಸ್ಯ ವ್ರತ ಮತ್ತು ಕಿರಿಯ ಶ್ರೀಗಳ ಮೊದಲನೆಯ ಚಾತುರ್ಮಾಸ್ಯ ವ್ರತ ಇದಾಗಿದೆ.

ಸೋದೆಯಲ್ಲಿ ವಿಶ್ವವಲ್ಲಭ ಶ್ರೀ
ಶಿರಸಿ: ಇಲ್ಲಿನ ಸೋದೆ ವಾದಿರಾಜ ಮಠದಲ್ಲಿ ಶ್ರೀವಿಶ್ವವಲ್ಲಭ ತೀರ್ಥರು ರವಿವಾರ ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಿದರು. ಅವರು ತಮ್ಮ 19ನೇ ಚಾತುರ್ಮಾಸ್ಯ ವ್ರತವನ್ನು ಭಾವಿಸಮೀರ ಶ್ರೀವಾದಿರಾಜ ಗುರು ಸಾರ್ವಭೌಮರ ಪಂಚ ವೃಂದಾವನದ ಸನ್ನಿ ಧಿಯಲ್ಲಿ ಸಂಕಲ್ಪ ನಡೆಸಿದರು. ಸಂಸ್ಥಾನದ ಪ್ರತಿಮೆಗಳಿಗೆ, ಪಟ್ಟದ ದೇವರುಗಳಿಗೆ ಮಹಾಭಿಷೇಕ ನಡೆಸಿದರು. ಭೂತರಾಜರು, ವಾದಿರಾಜರಿಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ಭಟ್ಕಳದಲ್ಲಿ ಕನ್ಯಾಡಿ ಬ್ರಹ್ಮಾನಂದ ಸ್ವಾಮೀಜಿ ಚಾತುರ್ಮಾಸ್ಯ
ಭಟ್ಕಳ : ತಾಲೂಕಿನ ಕರಿಕಲ್‌ ಶ್ರೀರಾಮ ಧ್ಯಾನ ಮಂದಿರದ ಆವರಣದಲ್ಲಿ ಕನ್ಯಾಡಿಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಐದನೇ ವರ್ಷದ ಚಾತುರ್ಮಾಸ್ಯ ಕಾರ್ಯಕ್ರಮ ರವಿವಾರ ಆರಂಭವಾಯಿತು. ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ನಾವು ಧರ್ಮ ಮಾರ್ಗದಿಂದ ನಡೆದಾಗ ಮಾತ್ರ ಸುಖ ಪ್ರಾಪ್ತಿಯಾಗುವುದು. ಮೊದಲು ನಾವು ಬದಲಾಗಬೇಕು, ನಮ್ಮ ಬದುಕು ಮೌಲ್ಯಗಳೊಂದಿಗೆ ಬದುಕುವಂತಾಗಬೇಕು ಎಂದರು. ಶಾಸಕ ಹರೀಶ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next