ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರು ನಮನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಪ್ರೊ| ಭಾಸ್ಕರ ಹೆಗಡೆ, ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಎಂ.ಸಿ.ಜೆ. ವಿಭಾಗದ ಮುಖ್ಯಸ್ಥೆ ಡಾ| ಮೌಲ್ಯಾ ಜೀವನ್ ಹಾಗೂ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ ಎಚ್.ಜಿ. ಅವರನ್ನು ಸಮ್ಮಾನಿಸಲಾಯಿತು.
ಪ್ರೊ| ಭಾಸ್ಕರ ಹೆಗಡೆ ಮಾತನಾಡಿ, ಗುರು ಶಿಷ್ಯನಿಗೋ, ಶಿಷ್ಯ ಗುರುವಿಗೋ ಸಮ್ಮಾನ ಮಾಡುವುದೆಂದರೆ ಅದು ಬರಿಯ ಗೌರವವಲ್ಲ. ಅದೊಂದು ಪ್ರೀತಿ. ವಿದ್ಯಾರ್ಥಿಗಳು ಓದುವ ಕಾಲದಲ್ಲಿ ಹೇಗೆ ನಡೆದುಕೊಂಡಿದ್ದರು ಎನ್ನುವುದರ ಆಧಾರದ ಮೇಲೆ ವರ್ಷಗಳಾಚೆಗೂ ಅಂತಹ ವಿದ್ಯಾರ್ಥಿಗಳ ಹೆಸರು ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಎಂದರು.
ವಿವೇಕಾನಂದ ಕಾಲೇಜಿನ ಡಾ| ಶ್ರೀಧರ ಎಚ್.ಜಿ. ಮಾತನಾಡಿ, ಗುರುವಿನಿಂದ ಪಡೆದ ಅತ್ಯುತ್ತಮ ಸಂಗತಿಗಳು ಶಿಷ್ಯ ಗುರುವಾದಾಗ ಮುಂದಿನ ತಲೆಮಾರಿಗೆ ಹಾದುಹೋಗುತ್ತವೆ. ಹಾಗಾಗಿ ಗುರು ಕೇವಲ ಒಂದು ಕಾಲಘಟ್ಟಕ್ಕೆ ಮಾತ್ರ ಸೀಮಿತನಾಗಿ ಉಳಿದುಕೊಳ್ಳುವುದಿಲ್ಲ. ಬದಲಾಗಿ ತನ್ನ ಉತ್ಕೃಷ್ಟ ಚಿಂತನೆ, ಆಲೋಚನೆಗಳ ಮೂಲಕ ಸದಾ ಶಾಶ್ವತನಾಗಿಬಿಡುತ್ತಾನೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ಇವಲ್ಸನ್ ಪ್ರಭಾಕರ್ ಮಾತನಾಡಿ, ಶಿಕ್ಷಣ ಉದ್ಯಮವಾಗಬಾರದು. ಕೇವಲ ವೇತನಕ್ಕಾಗಿ ದುಡಿಯುವವರು ಗುರು ಸ್ಥಾನಕ್ಕೇರಲು ಸಾಧ್ಯವಿಲ್ಲ. ಗುರು ಶಿಷ್ಯ ಸಂಬಂಧ ವೃತ್ತಿಯ ಕಲ್ಪನೆಗಿಂತ ಭಿನ್ನವಾದದ್ದು ಹಾಗೂ ವಿಶಿಷ್ಟವಾದದ್ದು. ಉಕ್ತ ಪಾಠವನ್ನು ಹೇಳುವುದಷ್ಟನ್ನೇ ರೂಢಿಸಿಕೊಂಡವ ಗುರುವಾಗಲು ಸಾಧ್ಯವಿಲ್ಲ. ವಿದ್ಯಾರ್ಥಿಯ ಬದುಕಲ್ಲಿ ಬದಲಾವಣೆ ತರುವವನು ಹಾಗೂ ವ್ಯಕ್ತಿತ್ವವನ್ನು ರೂಪಿಸುವವನು ಮಾತ್ರ ಶ್ರೇಷ್ಟ ಗುರುವಾಗಿ ಸದಾ ಶಾಶ್ವತನಾಗಿಬಿಡುತ್ತಾನೆ ಎಂದು ಅಭಿಪ್ರಾಯಪಟ್ಟರು.
ವಿಭಾಗದ ಸಂಯೋಜಕ ರಾಕೇಶ್ ಕುಮಾರ್ ಕಮ್ಮಜೆ, ಉಪನ್ಯಾಸಕಿಯರಾದ ಭವ್ಯಾಪಿ.ಆರ್. ನಿಡ್ಪಳ್ಳಿ, ಸುಶ್ಮಿತಾ, ಪೂಜಾ ಪಕ್ಕಳ, ರಾಧಿಕಾ, ಪ್ರಜ್ಞಾ ತಮ್ಮ ಗುರುಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಗಣಿತ ಶಾಸ್ತ್ರ ಎಂ.ಎಸ್ಸಿ. ವಿಭಾಗದ ಉಪನ್ಯಾಸಕರಾದ ವಿದ್ಯಾ ಸರಸ್ವತಿ, ನಿತೀಶ್ ಕುಮಾರ್, ಎಂ.ಸಿ.ಜೆ. ಲ್ಯಾಬ್ ನಿರ್ವಾಹಕ ಸಂತೋಷ್, ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕಿ ದೇವಿಶ್ರೀ ಉಪಸ್ಥಿತರಿದ್ದರು. ಅಕ್ಷಯ್ ಕುಮಾರ್ ಪಲ್ಲಮಜಲು ಸ್ವಾಗತಿಸಿ, ರಾಕೇಶ್ ನಾಯಕ್ ವಂದಿಸಿದರು. ವಿದ್ಯಾರ್ಥಿನಿ ಲಿಖಿತ ಕಾರ್ಯಕ್ರಮ ನಿರ್ವಹಿಸಿದರು.
ಪತ್ರಿಕೋದ್ಯಮ ಶಿಕ್ಷಣ ವಿಸ್ತೃತಗೊಳ್ಳುತ್ತಿದೆ
ಆಳ್ವಾಸ್ ಕಾಲೇಜಿನ ಡಾ| ಮೌಲ್ಯ ಜೀವನ್ ಮಾತನಾಡಿ, ಪತ್ರಿಕೋದ್ಯಮ ಶಿಕ್ಷಣ ಇಂದು ವಿಸ್ತೃತಗೊಳ್ಳುತ್ತಿದೆ. ದಕ್ಷಿಣ ಕನ್ನಡದಲ್ಲೇ ನಾಲ್ಕಾರು ಕಡೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣವೂ ದೊರಕುತ್ತಿದೆ. ಹಾಗಾಗಿ ಆರೋಗ್ಯಕರ ಸ್ಪರ್ಧೆ ಅದಾಗಲೇ ಜಾರಿಗೆ ಬಂದಿದೆ. ಇಂದು ಅತ್ಯುತ್ತಮ ವಿದ್ಯಾರ್ಥಿಗಳನ್ನು ಸೃಷ್ಟಿಸುವುದು ಕೇವಲ ಜವಾಬ್ಧಾರಿಯಾಗಿ ಮಾತ್ರ ಉಳಿದಿಲ್ಲ. ಬದಲಾಗಿ ಅದು ಇಂದಿನ ಅನಿವಾರ್ಯತೆಯಾಗಿ ಮಾರ್ಪಾಡಾಗಿದೆ. ಇನ್ನಷ್ಟು ಮಂದಿ ಯೋಗ್ಯ ಉಪನ್ಯಾಸಕರು ಬಂದಾಗ ಪತ್ರಿಕೋದ್ಯಮ ಬೆಳವಣಿಗೆಯ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತದೆ ಎಂದರು.