ನಂಜನಗೂಡು: ಪಟ್ಟಣದ ಕಮಲಮ್ಮ ಗುರುಮಲ್ಲಪ್ಪ ಕಲ್ಯಾಣ ಮಂಟಪದಲ್ಲಿ ತಾಲೂಕು ಕಾಯಕ ಯೋಗಿ ಬಸವೇಶ್ವರ ಸೇವಾ ಸಂಘದ ವತಿಯಿಂದ ಪದ್ಮಭೂಷಣ, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ 111ನೇ ಜನ್ಮ ದಿನೋತ್ಸವ ಅಂಗವಾಗಿ ಭಾನುವಾರ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದೇವನೂರು ಗುರುಮಲ್ಲೇಶ್ವರ ದಾಸೋಹ ಮಠದ ಮಹಾಂತ ಸ್ವಾಮೀಜಿ ಸೇರಿದಂತೆ ನೆರೆದಿದ್ದ ಹರಗುರು ಚರಮೂರ್ತಿಗಳು ಡಾ.ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಗುರುವಂದನೆ ಸಲ್ಲಿಸಿದರು.
ಉಪನ್ಯಾಸಕ ಸಿದ್ದರಾಜಪ್ಪ ಮಾತನಾಡಿ, ಅತ್ಯಂತ ಕಿರಿಯ ವಯಸ್ಸಿನಲ್ಲೇ ಮಠದ ಜವಬ್ದಾರಿ ಹೊತ್ತು ತಮ್ಮ ನಿಸ್ವಾರ್ಥ ಸೇವೆಯಿಂದ ಕಾಯಕ ಮಾಡುವ ಮೂಲಕ ನೂರಾರು ವಿದ್ಯಾಮಂದಿರ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹ ನೀಡಿ ಶತಾಯುಷಿ ಸಂತರಾಗಿ ನಡೆದಾಡುವ ದೇವರಾಗಿ ನಮ್ಮ ಕಣ್ಮುಂದೆ ಇರುವುದು ಅದ್ವಿತೀಯ ಸಾಧನೆಯ ಪ್ರತೀಯ ಎಂದು ಬಣ್ಣಿಸಿದರು.
ದೇವನೂರು ಮಠದ ಮಹಾಂತ ಸ್ವಾಮೀಜಿ ಮಾತನಾಡಿ, ಕಾಯಕ ಯೋಗಿ ಸಿದ್ಧಗಂಗಾ ಶ್ರೀಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ನೆಮ್ಮದಿಯ ಜೀವನ ರೂಪಿಸಿಕೊಳ್ಳುವಂತೆ ತಿಳಿಸಿದರು. ದೇವೀರಮ್ಮನಹಳ್ಳಿ ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿ, ಕುರಹಟ್ಟಿ ದಾಸೋಹ ಮಠದ ಮಾದಪ್ಪ ಸ್ವಾಮೀಜಿ, ಅಖೀಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಚ್.ಕೆ.ಚನ್ನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಂ.ಕೆಂಪಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.