Advertisement

“ದಿವ್ಯ ಪ್ರೇಮ”ದ ದುರಂತ ನಾಯಕ, ಗುರುದತ್ ಪಡುಕೋಣೆಯ “ದೇವದಾಸ್” ಬದುಕು!

10:17 AM Feb 23, 2020 | Nagendra Trasi |

ಕನ್ನಡ ಚಿತ್ರರಂಗದಲ್ಲಿ ಹೊಸತನದ ಮೂಲಕ ಸದಾ ಲವಲವಿಕೆ ಮೂಲಕ ಹಾಸು ಹೊಕ್ಕಾಗಿರುವ ನಟ, ನಿರ್ದೇಶಕ ಶಂಕರ್ ನಾಗ್ ಅವರನ್ನು ಹೇಗೆ ಮರೆಯಲು ಸಾಧ್ಯವಿಲ್ಲವೋ ಕನ್ನಡಿಗ, ಬಾಲಿವುಡ್ ನಲ್ಲಿ ಕೀರ್ತಿ ಪತಾಕೆ ಹಾರಿಸಿದ್ದ ಗುರುದತ್ ಪಡುಕೋಣೆಯನ್ನು ಕೂಡಾ ಎಂದೆಂದಿಗೂ ಸ್ಮರಣೀಯ. ಗುರುದತ್ ಉಡುಪಿ ಜಿಲ್ಲೆಯ, ಕುಂದಾಪುರ(ಈಗ ಬೈಂದೂರು)ತಾಲೂಕಿನ ಪುಟ್ಟ ಊರಾದ ಪಡುಕೋಣೆ ಮೂಲದವರು.

Advertisement

ಭಾರತೀಯ ಸಿನಿಮಾರಂಗದ ಸುವರ್ಣ ಕಾಲದಲ್ಲಿ ಗುರುದತ್ ಎಂಬ ನಿಗೂಢ ಮನುಷ್ಯ ತನ್ನ ಅಸಾಧಾರಣ ಪ್ರತಿಭೆ ಮೂಲಕ ಎಲ್ಲರ ಕಣ್ತೆರಿಸಿದ್ದರು. ಆ ಕಾಲಘಟ್ಟದಲ್ಲಿಯೇ ಅಪಾರ ಕೀರ್ತಿ, ಅಭಿಮಾನಿಗಳು, ಸ್ಟಾರ್ ಪಟ್ಟ, ಪ್ರೇಮಿಯಾಗಿ ಹೀಗೆ ಎಲ್ಲವನ್ನೂ ಅನುಭವಿಸಿದ್ದರು ಗುರುದತ್. ಬೆಳ್ಳಿಪರದೆ ಮೇಲೆ ಕಟ್ಟಿಕೊಟ್ಟ ಅದ್ಭುತ ಪ್ರೇಮಕಾವ್ಯ ಸಿನಿಮಾಗಳ ಮೂಲಕ ಇಡೀ ಜಗತ್ತಿನ ಪ್ರೀತಿಗೆ ಪಾತ್ರರಾದ ಹೆಗ್ಗಳಿಕೆ ಪಡುಕೋಣೆಯವರದ್ದಾಗಿತ್ತು!

Waqt ne kiya, kya haseen sitam, Tum rahe na tum, hum rahe na hum (ನೀನು ನೀನಾಗಿಲ್ಲ, ನಾನು ನಾನಾಗಿ ಉಳಿದಿಲ್ಲ, ಕಾಲ ಎಷ್ಟೊಂದು ಸುಂದರ!) ಉತ್ಕಟ ಪ್ರೇಮದ ಭಾವನೆಗಳನ್ನು ಹೊರಹೊಮ್ಮಿಸುವ ಈ ಸಿನಿಮಾ ಹಾಡಿನ ಲಿರಿಕ್ಸ್ ನಂತೆಯೇ ನಿಜ ಜೀನವದಲ್ಲಿ ತಾನೂ ಕೂಡಾ ಪ್ರೇಮ ವೈಫಲ್ಯದಿಂದ ಭಗ್ನಹೃದಯಿಯಾಗುವೆ ಎಂಬುದನ್ನು ಗುರುದತ್ ಯಾವತ್ತೂ ಊಹಿಸಿರಲಿಕ್ಕಿಲ್ಲ. ತಾನೇ ಇಷ್ಟಪಟ್ಟು ಪ್ರೀತಿಸಿದ, ತನ್ನ ಕೆಲಸ ನಟನೆ, ಹಾಡು, ನಿರ್ದೇಶನ…ಹೀಗೆ ಎಲ್ಲವನ್ನೂ ಮನಸಾರೆ ಪ್ರೀತಿಸುತ್ತಿದ್ದ ದತ್ ತಾನು ಪ್ರೀತಿಸಿದಾಕೆಯನ್ನು, ತನ್ನ ಮೂವರು ಮುದ್ದು ಮಕ್ಕಳಿಗೆ ಪ್ರೀತಿಯ ಧಾರೆ ಎರೆಯಲು ವಿಫಲರಾಗಿದ್ದೇಕೆ? ದತ್ ಪ್ರೀತಿಯ ಅಮಲಿನಲ್ಲಿ ಪ್ರೀತಿಸಿದಾಕೆ ದೂರವಾಗಿದ್ದಳು…ಏತನ್ಮಧ್ಯೆ ಮತ್ತೊಂದು ಪ್ರೇಮ ಚಿಗುರೊಡೆದಿತ್ತು…

ಅದ್ಭುತ ನಿರ್ದೇಶಕ, ಅಪ್ಪಟ ಕಲಾವಿದ:

ಕೋಲ್ಕತಾದಲ್ಲಿ ದೂರವಾಣಿ ನಿರ್ವಾಹಕರಾಗಿ, ಪುಣೆಯ ಪ್ರಭಾತ್ ಫಿಲ್ಮ್ ಕಂಪನಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡಿದ ನಂತರ ಹೊಟ್ಟೆಪಾಡಿಗಾಗಿ ಮುಂಬೈಗೆ ತೆರಳಿದ್ದರು. ನಂತರ ತಮ್ಮ ಕೊನೆಗಾಲದವರೆಗೆ ಮುಂಬೈ ಶಹರದಲ್ಲಿಯೇ ಇದ್ದಿದ್ದರು. 1944ರಲ್ಲಿ ತೆರೆಕಂಡಿದ್ದ ಚಾಂದ್ ಸಿನಿಮಾದಲ್ಲಿ ದತ್ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ್ದರು. 1945ರಲ್ಲಿ ವಿಶ್ರಮ್ ಬೇಡೇಕರ್ ನಿರ್ದೇಶನದ ಲಖ್ರಾನಿ ಚಿತ್ರದಲ್ಲಿ ನಟನಾಗಿ, ಸಹನಟನಾಗಿ ಕೆಲಸ ನಿರ್ವಹಿಸಿದ್ದರು.  1946ರಲ್ಲಿ ಹಮ್ ಏಕ್ ಹೈ ಚಿತ್ರದ ಸಹಾಯಕ ನಿರ್ದೇಶಕನಾಗಿ ಮತ್ತು ನೃತ್ಯ ನಿರ್ದೇಶಕರಾಗಿ ದುಡಿದಿದ್ದರು. ಇದಾದ ಬಳಿಕ ಸುಮಾರು ಹತ್ತು ವರ್ಷಗಳ ಕಾಲ ಕೆಲಸವಿಲ್ಲದೆ ಕಾಲ ಕಳೆದಿದ್ದರು ದತ್. ಈ ಸಂದರ್ಭದಲ್ಲಿಯೇ ಗುರುದತ್ ತಮ್ಮ ಆತ್ಮಚರಿತ್ರೆಯಂತೆ ಕಾಣುವ ಪ್ಯಾಸಾ ಹಿಂದಿ ಚಿತ್ರದ ಕಥೆ ಬರೆದಿರಬೇಕು ಎಂದು ಹೇಳಲಾಗುತ್ತಿದೆ.

Advertisement

ಕಾಗಝ್ ಕೆ ಫೂಲ್, ಪ್ಯಾಸಾ, ಸೈಲಾಬ್, ಮಿಸ್ಟರ್ ಅಂಡ್ ಮಿಸೆಸ್ 55, ಬಾಝ್, ಜಾಲ್, ಬಾಝಿ ಚಿತ್ರಗಳನ್ನು ನಿರ್ದೇಶಿಸಿದ್ದರು. ನಿರಾಸಕ್ತ ಪ್ರಪಂಚದಿಂದ ತಿರಸ್ಕೃತಗೊಂಡು ಮರಣಾ ನಂತರ ಯಶಸ್ಸು ಕಾಣುವ ಕವಿಯೊಬ್ಬನ ಕಥಾ ಹಂದರದ ಪ್ಯಾಸಾ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತು. ಕನ್ನಡಿಗರೇ ಆದ ವಿಕೆ ಮೂರ್ತಿ “ಪ್ಯಾಸಾ” ಸಿನಿಮಾದ ವಖ್ತ ನೆ ಕಿಯಾ ಕ್ಯಾ ಸಿತಮ್ ಹಾಡಿನಲ್ಲಿ ಮೂಡಿಸಿದ ನೆರಳು ಬೆಳಕಿನ ಆಟದ ಛಾಯಾಗ್ರಹಣ ಬೆಳ್ಳಿ ತೆರೆಯ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿತ್ತು. ಮೂರ್ತಿಯವರು ಕೂಡಾ ದಾದಾಸಾಹೇಬ್ ಪ್ರಶಸ್ತಿ ಪಡೆದ ಮೊದಲ ಛಾಯಾಗ್ರಾಹಕ ಎಂಬ ಕೀರ್ತಿಗೆ ಭಾಜನರಾಗಿದ್ದರು.

ಹಲವಾರು ಪ್ರಥಮಗಳಿಗೆ ಕಾರಣವಾದ “ಬಾಝಿ ಚಿತ್ರ ಗುರುದತ್ ಗೆ ತಮ್ಮ ಪತ್ನಿಯಾಗಲಿರುವ ಗೀತಾ ಅವರನ್ನು ಪರಿಚಯಿಸಿತ್ತು. ನಿರ್ದೇಶನದ ಜತೆಗೆ ಗುರುದತ್ ನಟಿಸಿದ ಸಾಹೀಬ್ ಬಿವಿ ಔರ್ ಗುಲಾಮ್, ಚೌದವೀ ಕಾ ಚಾಂದ್, ಆರ್ ಪಾರ್, ಸುಹಾಗನ್ ಸ್ಮರಣೀಯ ಚಿತ್ರಗಳಾಗಿವೆ. ಕಾಗಜ್ ಕೇ ಫೂಲ್ ಮತ್ತು ಪ್ಯಾಸಾ ಹಿಂದಿ ಸಿನಿಮಾರಂಗದ ಮೈಲಿಗಲ್ಲುಗಳು!

ಗುರುದತ್ ಅದೆಷ್ಟು ಕಟ್ಟುನಿಟ್ಟಿನ ಶಿಸ್ತಿನ ವ್ಯಕ್ತಿಯಾಗಿದ್ದರೆಂದರೆ ಸಿನಿಮಾ ಚಿತ್ರೀಕರಣಕ್ಕೆ ಬಂದಾಗ ಅವರು ಬಂದು ಮೊದಲು ನೋಡುತ್ತಿದ್ದದ್ದು ಕ್ಯಾಮರಾವನ್ನು. ಮೊದಲ ಶಾಟ್ ಹೇಗೆ ಬಂದಿದೆ ಎಂಬುದನ್ನು ಪರೀಕ್ಷಿಸುತ್ತಿದ್ದರಂತೆ. ಒಂದು ವೇಳೆ ಮೊದಲ ಶಾಟ್ ಚೆನ್ನಾಗಿ ಬಂದಿಲ್ಲ ಎಂದಾದರೆ ಇಡೀ ಯೂನಿಟ್ ಗೆ ಪ್ಯಾಕಪ್(ಮನೆಗೆ ಹೋಗಿ) ಅಂತ ಹೇಳಿ ಹೊರಟೇಬಿಡುತ್ತಿದ್ದರಂತೆ!

ಗೀತಾಳ ಪ್ರತಿಭೆ, ಧ್ವನಿಗೆ ಮಾರುಹೋಗಿದ್ದ ಗುರುದತ್!

1950ರ ದಶಕದಲ್ಲಿ ಗೀತಾ ರಾಯ್ ಅತ್ಯಂತ ಜನಪ್ರಿಯ ಹಾಗೂ ಬಹುಮುಖ ಪ್ರತಿಭೆಯ ಗಾಯಕಿಯಾಗಿದ್ದವರು. ತಮ್ಮ ಬಾಝಿ ಸಿನಿಮಾದ ಚಿತ್ರೀಕರಣದ ವೇಳೆ ರಾಯ್ ಯನ್ನು ಗುರುದತ್ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ದತ್  ಗೀತಾ ಅವರ ಪ್ರತಿಭೆ, ಇಂಪಾದ ಧ್ವನಿಗೆ ಮಾರುಹೋಗಿದ್ದರು. ಗೀತಾ ಕೂಡಾ ಅದ್ಭುತ ಪ್ರತಿಭೆಯ ನಿರ್ದೇಶಕ ದತ್ ಅವರನ್ನು ಇಷ್ಟಪಟ್ಟಿದ್ದರು. ಸಿನಿಮಾ ಕಥೆಯಂತೆ ಇಬ್ಬರು ನಂತರ ಪ್ರೇಮಿಗಳಾಗಿಬಿಟ್ಟಿದ್ದರು!

ಒಂದು ಸಂದರ್ಭದಲ್ಲಿ ದತ್ ಸಹೋದರಿ ಲಲಿತಾ ಲಾಜ್ಮಿ ಬಳಿ ಗೀತಾ ನಾನು ನಿನ್ನ ಅಣ್ಣನನ್ನು ಮದುವೆಯಾಗುತ್ತಿದ್ದೇನೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದರು. ಆದರೆ ಗುರುದತ್ ಮತ್ತು ಗೀತಾ ವಿವಾಹಕ್ಕೆ ಗೀತಾ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರ ಪರಿಣಾಮ ಇಬ್ಬರು ಮೂರು ವರ್ಷಗಳ ಕಾಲ ಪತ್ರ ಮುಖೇನ ತಮ್ಮ ಪ್ರೇಮ ಸಲ್ಲಾಪ ಮುಂದುವರಿಸಿದ್ದರು. ಕೊನೆಗೂ ವಿರೋಧವನ್ನು ಲೆಕ್ಕಿಸದೇ 1953ರ ಮೇ 26ರಂದು ದತ್ ಮತ್ತು ಗೀತಾ ಸರಳವಾಗಿ ವಿವಾಹವಾಗಿದ್ದರು.

ದಂಪತಿಗೆ ತರುಣ್ ದತ್, ಅರುಣ್ ದತ್ ಮತ್ತು ನೀನಾ ದತ್ ಸೇರಿ ಮೂವರು ಮಕ್ಕಳು. ಗೀತಾ ಪೂರ್ಣವಾಗಿ ಮಕ್ಕಳ ಲಾಲನೆ, ಪೋಷಣೆಯಲ್ಲಿ ತೊಡಗಿಕೊಂಡಿದ್ದರು. ಆದರೆ ಗುರುದತ್ ಮಾತ್ರ ಕಾಯಕವೇ ಕೈಲಾಸ ಎಂಬಂತೆ ಅದರಲ್ಲಿಯೇ ಮುಳುಗಿ ಹೋಗಿದ್ದರು. ವೈಯಕ್ತಿಕ ಬದುಕಿನತ್ತ ಗಮನ ಕೊಡುವುದು ಕಡಿಮೆಯಾಗುತ್ತಿದ್ದಂತೆಯೇ ದತ್ ಬದುಕಿನ ದೋಣಿ ನಿಧಾನಕ್ಕೆ ಮುಳುಗತೊಡಗಿತ್ತು.

ಗೀತಾ ಕುಟುಂಬ ಕೂಡಾ ಇದನ್ನೇ ನಿರೀಕ್ಷಿಸಿತ್ತು ಎಂಬಂತೆ ಗುರುದತ್ ಅವರನ್ನು ಎಂದಿಗೂ ಪ್ರೀತಿಯಿಂದ ಮಾತನಾಡಿಸಲೇ ಇಲ್ಲ. ಕುಟುಂಬದ ಆರ್ಥಿಕ ಸ್ತಂಭವಾಗಿದ್ದದ್ದು ಕೂಡಾ ಗೀತಾ ಒಬ್ಬಳೆ. ಗೀತಾಳ ಸಹೋದರ ಮುಕುಲ್ ರಾಯ್ (ಕಂಪೋಸರ್) ಸಹ ಗುರುದತ್ ಅವರ ಬಳಿ ಮಾತನಾಡಿದ್ದೇ ಇಲ್ಲವಂತೆ! ಮದುವೆ ನಂತರ ಇಬ್ಬರು ಬಾಡಿಗೆ ಫ್ಲ್ಯಾಟ್ ಗೆ ಬಂದು ನೆಲೆಸಿದ್ದರು. ಇತರೆ ಸಿನಿಮಾಗಳಿಗೆ ಹಾಡುವುದನ್ನು ನಿಲ್ಲಿಸಿದ ಗೀತಾ ಕೇವಲ ಗುರುದತ್ ಸಿನಿಮಾಗಳಿಗೆ ಮಾತ್ರ ಹಾಡಿದ್ದರು ಎಂಬುದಾಗಿ ಲೇಖನವೊಂದರಲ್ಲಿ ಲಲಿತಾ ಲಾಜ್ಮಿ ನೆನಪಿಸಿಕೊಂಡಿದ್ದಾರೆ.

ಒಬ್ಬರನ್ನೊಬ್ಬರು  ಬಿಟ್ಟಿರಲಾರದ ಅನುಪಮ ನಂಟು!

ಮದುವೆಯಾದ ಆರಂಭದ ವರ್ಷಗಳಲ್ಲಿ ಗುರುದತ್ ಮತ್ತು ಗೀತಾ ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸುತ್ತಿದ್ದರು. ಸಂಗೀತವನ್ನು ಕೂಡಾ ಇಬ್ಬರು ಮೆಚ್ಚಿಕೊಂಡಿದ್ದರು. ತಮ್ಮ ಮುದ್ದಿನ ಮಕ್ಕಳನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು. ಮಗಳು (ನೀನಾ) ಜನಿಸಿದ ಮೇಲೆ ಇಬ್ಬರ ಸಂತೋಷಕ್ಕೆ ಪಾರವೇ ಇರಲಿಲ್ಲವಾಗಿತ್ತಂತೆ. ಏತನ್ಮಧ್ಯೆ ತುಂಬಾ ಶ್ರದ್ಧೆ, ನಿರೀಕ್ಷೆಯಿಂದ ನಿರ್ದೇಶಿಸಿದ್ದ ಕಾಗಜ್ ಕೆ ಫೂಲ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹೆಚ್ಚು ಸದ್ದು ಮಾಡಲೇ ಇಲ್ಲ. ಬರೋಬ್ಬರಿ 17 ಲಕ್ಷ ರೂಪಾಯಿ ನಷ್ಟವಾಗಿತ್ತು. ಆ ಕಾಲಕ್ಕೆ ಅದು ದೊಡ್ಡ ಮೊತ್ತವಾಗಿತ್ತು. ಇನ್ಮುಂದೆ ಯಾವ ಸಿನಿಮಾವನ್ನು ನಿರ್ದೇಶಿಸುವುದೇ ಇಲ್ಲ ಎಂಬುದಾಗಿ ಶಪಥ ಮಾಡಿಬಿಟ್ಟಿದ್ದರು ಗುರುದತ್.

ಏತನ್ಮಧ್ಯೆ ಗುರುದತ್ ಮತ್ತು ವಹೀದಾ ರೆಹಮಾನ್ ನಡುವಿನ ಪ್ರೇಮ ಸಂಬಂಧ ಗಾಢವಾಗತೊಡಗಿತ್ತು ಎಂಬ ಸುದ್ದಿ ಗೀತಾಳಿಗೆ ಅದಾಗಲೇ ತಲುಪಿಬಿಟ್ಟಿತ್ತು. ಇದರಿಂದ ರೋಸಿ ಹೋದ ಗೀತಾ ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೊರಟು ಬಿಟ್ಟಿದ್ದರು. ಇದರೊಂದಿಗೆ 11 ವರ್ಷದ ದಾಂಪತ್ಯ ದೂರ, ದೂರ ಸರಿಯುವಂತೆ ಮಾಡಿತ್ತು. ಮನೆಗೆ ವಾಪಸ್ ಬಾ ಎಂದು ಗುರುದತ್ ಪದೇ, ಪದೇ ಬೇಡಿಕೊಂಡರು. ಹಠಮಾರಿಯಾದ ಗೀತಾ ಅದಕ್ಕೆ ಒಪ್ಪಲೇ ಇಲ್ಲ. ಒಂದೆಡೆ ಪ್ರೀತಿಯ ಮಡದಿ, ಮತ್ತೊಂದೆಡೆ ಮುದ್ದಿನ ಮಕ್ಕಳು ತನ್ನಿಂದ ದೂರವಾಗಿದ್ದ ನೋವನ್ನು ಮರೆಯಲು ಮೊರೆ ಹೊಕ್ಕಿದ್ದು ಮದ್ಯಕ್ಕೆ!

ಪ್ರೀತಿ ತುಂಬಿದ ಹೃದಯ ಒಡೆದು ಚೂರಾಗಿತ್ತು..ಮಾನಸಿಕ ಒತ್ತಡಕ್ಕೆ ಒಳಗಾದ ಗುರುದತ್  ಮಿತಿಮೀರಿ ಕುಡಿಯತೊಡಗಿದ್ದರು. ಮನಸ್ಸು ಬಿಚ್ಚಿ ಮಾತನಾಡದೇ ಮೌನಿಯಾಗಿಬಿಟ್ಟಿದ್ದರು. ವಿಪರೀತ ಒತ್ತಡದಿಂದ ನಿದ್ದೆ ಬಾರದೆ ನಿದ್ದೆ ಮಾತ್ರೆ ತೆಗೆದುಕೊಳ್ಳಲು ಆರಂಭಿಸಿದ್ದರು. ನಂತರ ಶರಾಬಿನ ಜತೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಕೂಡಲೇ ನಾನಾವತಿ ಆಸ್ಪತ್ರೆಗೆ ದಾಖಲಿಸಿದ್ದರು. ಮೂರು ದಿನ ಕೋಮಾದಲ್ಲಿದ್ದ ಗುರುದತ್ ಒಂದು ಮಧ್ಯಾಹ್ನ ಪ್ರಜ್ಞೆ ಬಂದಾಗ ಹೊರಬಿದ್ದ ಮೊದಲ ಶಬ್ದವೇ ಗೀತಾ ಎಂದು!

ಕುಡಿತ, ಸಿಗರೇಟು, ನಿದ್ದೆ ಇಲ್ಲದ ರಾತ್ರಿಯ ನಡುವೆ ಸಿನಿಮಾ ನಟನೆಯಲ್ಲಿ ತೊಡಗಿದ್ದ ಗುರುದತ್ ಗೆ ಆರ್ಥಿಕ ಮುಗ್ಗಟ್ಟು ಹೆಚ್ಚಾಗಿತ್ತು. 1964ರ ಅಕ್ಟೋಬರ್ 10ರಂದು ಅರೆತೆರೆದ ಕಣ್ಣುಗಳು, ಕೈಸನ್ನೆ ಮೂಲಕ ಏನೋ ಹೇಳಲು ಹೊರಟ ಸ್ಥಿತಿಯಲ್ಲಿಯೇ ಪ್ರಾಣಪಕ್ಷಿ ಹಾರಿಹೋಗಿತ್ತು. ಇಂದಿಗೂ ಗುರುದತ್ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಜಿಜ್ಞಾಸೆ ಮುಂದುವರಿದಿದೆ. ಹಿಂದಿ ಚಿತ್ರರಂಗದ ದಂತಕಥೆ ಗುರುದತ್ ಇಹಲೋಕ ತ್ಯಜಿಸಿದಾಗ ವಯಸ್ಸು 39ವರ್ಷ!

ಮದ್ರಾಸ್ ನಲ್ಲಿ ದಿಲೀಪ್ ಕುಮಾರ್ ಜತೆ ಸಿನಿಮಾ ಚಿತ್ರೀಕರಣದಲ್ಲಿದ್ದ ವಹಿದಾ ರೆಹಮಾನ್ ವಿಷಯ ತಿಳಿದ ಕೂಡಲೇ ಮೇಕಪ್ ತೆಗೆಯದೇ ವಿಮಾನದ ಮೂಲಕ ಬಾಂಬೆಗೆ ಬಂದಿದ್ದರು. ಇನ್ನೇನು ಗುರುದತ್ ಪಾರ್ಥಿವ ಶರೀರ ಎತ್ತಬೇಕು ಎಂಬ ಹೊತ್ತಿಗೆ ಪತ್ನಿ ಗೀತಾ ಮಕ್ಕಳ ಜತೆ ಆಗಮಿಸಿದ್ದರು. 2 ವರ್ಷದ ಪುಟ್ಟ ಮಗಳು ಪಪ್ಪಾ ಎದ್ದೇಳು ಎಂದು ಕರೆಯುತ್ತಿದ್ದ ದೃಶ್ಯ ಕರುಳು ಕಿತ್ತುಬರುವಂತೆ ಮಾಡಿತ್ತು ಎಂದು ಸಹೋದರಿ ಲಾಜ್ಮಿ ನೆನಪಿಸಿಕೊಂಡಿದ್ದರು.

ಪ್ರೀತಿಯನ್ನ ಅರ್ಥ ಮಾಡಿಕೊಳ್ಳಲಿಲ್ಲ ಎಂಬ ಚಿಂತೆಗೆ ಬಿದ್ದ ಗೀತಾ ಕೊನೆಗೆ ಕುಡಿತಕ್ಕೆ ದಾಸಳಾಗಿಬಿಟ್ಟಿದ್ದಳು. ಆರ್ಥಿಕವಾಗಿಯೂ ಕಂಗೆಟ್ಟು ಹೋಗಿದ್ದು, 1972ರ ಜುಲೈ 20ರಂದು ತೀರಿಹೋಗಿದ್ದರು. ಇವೆಲ್ಲದರ ನಡುವೆ ವಹಿದಾ ರೆಮಾನ್ ಮಾತ್ರ ತಮ್ಮಿಬ್ಬರ ಸಂಬಂಧದ ಬಗ್ಗೆ ಏನೂ ಹೇಳಿಕೆ ಕೊಟ್ಟಿಲ್ಲವಾಗಿತ್ತು. ಸಂದರ್ಶನವೊಂದರಲ್ಲಿ ಪ್ರಶ್ನಿಸಿದಾಗ ನನ್ನ ಖಾಸಗಿ ವಿಷಯದ ಬಗ್ಗೆ ಮಾತನಾಡಲಾರೆ ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದರು!

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next