Advertisement
ಇಂದು ಎಲ್ಲವೂ ಸೇವೆಯ ಬದಲಿಗೆ ಉದ್ಯೋಗವಾಗಿ ಬದಲಾದುದು ಹಾಗೂ ಯುವ ಸಮುದಾಯದಲ್ಲೂ ಹಿರಿಯರಿಗೆ ಗೌರವ ನೀಡುವುದರಲ್ಲಿ ಏನೋ ಲೋಪವಾಗುತ್ತಿರುವುದನ್ನು ಅಲ್ಲಗಳೆಯಲಾಗದು. ಹಿಂದೆಲ್ಲ ಒಬ್ಬ ಶಿಕ್ಷಕ ಮನೆಯಿಂದ ಹೊರಗೆ ಬಂದರೆ ದಾರಿಯಲ್ಲಿ, ಪೇಟೆಯಲ್ಲಿ ಅವನಿಗೆ ಸಿಗುವಷ್ಟು ನಮಸ್ಕಾರದ ಗೌರವ ಬೇರೆ ಯಾರಿಗೂ ಸಿಗುತ್ತಿರಲಿಲ್ಲ. ಯಾಕೆಂದರೆ ದಾರಿಯುದ್ದಕ್ಕೂ, ಊರಿನೆಲ್ಲೆಡೆಯೂ ಆತನ ಶಿಷ್ಯವೃಂದವಿರುತ್ತಿತ್ತು. ಅವರೆಲ್ಲರೂ ತಮ್ಮ ಗುರುವನ್ನು ಗೌರವರಿಂದ ಕಾಣುತ್ತಿದ್ದರು. ಆದರೆ ಇಂದು ಕಂಡರೂ ಕಾಣದಂತೆ ಹೋಗುವ ಶಿಷ್ಯವೃಂದವೇ ಹೆಚ್ಚು.
Related Articles
Advertisement
ಏನು ಮಾಡಬಹುದು?:
ಗುರು-ಶಿಷ್ಯರ ನಡುವೆ ಮಧುರ ಸಂಬಂಧ ಬೆಳೆಯಲು ಪರಸ್ಪರ ಗೌರವಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ವಿದ್ಯಾರ್ಥಿ ಯಾವುದೇ ಕುಟುಂಬದಿಂದಲೂ ಬಂದಿರಲಿ, ಎಷ್ಟೇ ಬುದ್ಧಿವಂತ ಅಥವಾ ದಡ್ಡನೂ ಆಗಿರಲಿ ಅವರನ್ನು ಸಮಾನವಾಗಿ ಕಾಣುವುದು ಶಿಕ್ಷಕರ ಕರ್ತವ್ಯ. ಮುಕ್ತ ಚರ್ಚೆ, ಗುಣಾತ್ಮಕ ವರ್ತನೆ, ಪರಸ್ಪರ ವಿಶ್ವಾಸ ಮುಂತಾದವು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಶಿಕ್ಷಕರು ತಮ್ಮ ಬದುಕಿನ ಮಾರ್ಗದರ್ಶಕರು. ಅವರು ನಮ್ಮ ಹಿತೈಷಿಗಳೇ ಹೊರತು ಶತ್ರುಗಳಲ್ಲ ಎಂಬ ಭಾವನೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಇರಬೇಕಾಗಿದೆ. ಶಿಕ್ಷಕರು ಏನು ಹೇಳಿದರೂ ಅದರ ಹಿಂದೆ ನಮ್ಮ ಒಳಿತಿನ ಉದ್ದೇಶ ಅಡಗಿದೆ ಎಂಬುದನ್ನೂ ವಿದ್ಯಾರ್ಥಿಗಳು ತಿಳಿದಿರಬೇಕು. ಶಿಕ್ಷಕ ಅಥವಾ ಶಿಕ್ಷಕಿ ನಮ್ಮ ಮನೆಯ ಹಿರಿಯ ಸದಸ್ಯರಂತೆ. ಅವರನ್ನು ಗೌರವದಿಂದ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಶಿಕ್ಷಣ ಸಂಸ್ಥೆಯಲ್ಲಿ ಅಂತಸ್ತು ಪ್ರದರ್ಶನ ಖಂಡಿತಾ ಸರಿಯಲ್ಲ. ಜತೆಗೆ ಶಿಕ್ಷಕರ ವಿರುದ್ಧ ಯಾವುದೇ ಕಾರಣಕ್ಕೂ ದ್ವೇಷ ಬೆಳೆಸಿಕೊಳ್ಳುವುದು ನಮಗೆ ನಾವೇ ಅಪಾಯವನ್ನು ಮೈಗೆಳೆದುಕೊಂಡಂತೆಯೇ.
ವಿಶಾಲ ಚಿಂತನೆ ಅಗತ್ಯ:
ಈಗೀಗ ಶಿಕ್ಷಕರ ವಿರುದ್ಧ ಸಣ್ಣಪುಟ್ಟ ಕಾರಣಗಳಿಗಾಗಿ ಅಪಾಯಕಾರಿ ದ್ವೇಷದ ಕ್ರಮಗಳನ್ನು ಕೆಲವು ವಿದ್ಯಾರ್ಥಿಗಳು ತೆಗೆದುಕೊಳ್ಳುತಿರುವುದು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇದೆ. ಇದಕ್ಕೆ ಈಗಲೇ ನಿಯಂತ್ರಣ ಹಾಕುವ ಕೆಲಸ ಸಂಘಟಿತವಾಗಿ ಆಗಬೇಕಾಗಿದೆ. ಇಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಿಸುವ ಬದಲು ಅವರಿಗೆ ವಾಸ್ತವ ಹಾಗೂ ನೈತಿಕತೆಯ ಪಾಠ ಅಗತ್ಯವಾಗಿದೆ. ಇವೆಲ್ಲವನ್ನೂ ಕಾನೂನು ವ್ಯಾಪ್ತಿಗೆ ಒಳಪಡಿಸುವ ಬದಲು ಹೆತ್ತವರು ಹಾಗೂ ಶಿಕ್ಷಕರ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಗಳ ಮಟ್ಟದಲ್ಲೇ ಮಾಡಿಕೊಳ್ಳುವುದು ಉತ್ತಮ. ವಿದ್ಯಾರ್ಥಿಗಳ ತಪ್ಪು ಕಲ್ಪನೆ, ಲೋಪವಿರುವ ಚಿಂತನೆಯನ್ನು ಸರಿಪಡಿಸುವುದೂ ಶಿಕ್ಷಣದ ಒಂದು ಭಾಗವಾಗಬೇಕಾಗಿದೆ. ನೈತಿಕ ಶಿಕ್ಷಣದ ಮೂಲಕ ಇಂಥ ಹುಳುಕುಗಳು ಹಾಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯ. ಮಕ್ಕಳು ಎಷ್ಟೇ ಉನ್ನತ ಶಿಕ್ಷಣ ಪಡೆದುಕೊಂಡರೂ ಅವರಲ್ಲಿ ನೈತಿಕತೆಯು ಗಟ್ಟಿಯಾಗಿರದಿದ್ದರೆ ಅವರು ಮುಂದೊಂದು ದಿನ ಜೀವನದಲ್ಲಿ ಸೋಲುವುದು ಖಚಿತ. ನೈತಿಕತೆಯ ವಿಷಯದಲ್ಲಿ, ಗುರುಹಿರಿಯರನ್ನು ಮಕ್ಕಳು ಗೌರವಿಸುವ ವಿಷಯದಲ್ಲಿ ಮನೆಯಿಂದಲೇ ಆರಂಭದ ನೀತಿಪಾಠ ಅಗತ್ಯವಾಗಿದೆ.
-ಪುತ್ತಿಗೆ ಪದ್ಮನಾಭ ರೈ