ಹೊಸದಿಲ್ಲಿ : ದಿಲ್ಲಿ ವಿಶ್ವವಿದ್ಯಾಲಯದ ರಾಮ್‌ಜಾಸ್ ಕಾಲೇಜಿನಲ್ಲಿ ಕಳೆದ ಫೆ.22ರಂದು ಸಂಭವಿಸಿದ್ದ ಹಿಂಸಾತ್ಮಕ ಘಟನೆಯನ್ನು ವಿರೋಧಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ಆನ್‌ಲೈನ್ ಅಭಿಯಾನವನ್ನು ಆರಂಭಿಸಿ ತೀವ್ರ ವಿವಾದವನ್ನು ಸೃಷ್ಟಿಸಿದ್ದ ದಿಲ್ಲಿ ವಿವಿ ವಿದ್ಯಾರ್ಥಿನಿ ಗುರ್‌ವೆುಹರ್ ಕೌರ್ ಇಂದು ತಾನು ಈ ಅಭಿಯಾನದಿಂದ ಹಿಂದೆ ಸರಿದಿರುವುದಾಗಿಯೂ ಇಂದು ನಡೆಯಲಿರುವ ಎಐಎಸ್‌ಎ ಜಾಥಾದಲ್ಲಿ ತಾನು ಪಾಲ್ಗೊಳ್ಳೆನೆಂದೂ ಟ್ವೀಟ್ ಮಾಡಿದ್ದಾಳೆ.
“ನಾನು ಅಭಿಯಾನದಿಂದ ಹಿಂದೆ ಸರಿಯುತ್ತಿದ್ದೇನೆ; ಎಲ್ಲರಿಗೂ ನನ್ನ ಅಭಿನಂದನೆಗಳು; ನನ್ನನ್ನು ಒಂಟಿಯಾಗಿರಲು ಬಿಡಿ ಎಂದು ಕೇಳಿಕೊಳ್ಳುತ್ತೇನೆ; ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೇನೆ; ತೋರಬೇಕಾಗಿದ್ದ ಧೈರ್ಯ, ದಿಟ್ಟತನವನ್ನು ತೋರಿಸಿದ್ದೇನೆ’ ಎಂದಾಕೆ ಹೇಳಿದ್ದಾಳೆ.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದ ಕ್ಯಾಪ್ಟನ್ ಮನ್‌ದೀಪ್ ಸಿಂಗ್ ಅವರ ಪುತ್ರಿಯಾಗಿರುವ ಗುರ್‌ವೆುಹರ್ ಕೌರ್, ದಿಲ್ಲಿಯ ರಾಮ್‌ಜಾಸ್ ಕಾಲೇಜಿನಲ್ಲಿ ಎಬಿವಿಪಿ ನಡೆಸಿದ್ದ ಹಿಂಸೆಯನ್ನು ಪ್ರತಿಭಟಿಸಿ ಆನ್‌ಲೈನ್ ಅಭಿಯಾನವನ್ನು ಆರಂಭಿಸಿದ್ದಳು. ಈ ನಡುವೆ ಆಕೆಗೆ ಜೀವ ಬೆದರಿಕೆ, ರೇಪ್ ಬೆದರಿಕೆ ಇತ್ಯಾದಿಗಳು ಬಂದಿದ್ದವು. ಆ ಬಗ್ಗೆ ಆಕೆ ದಿಲ್ಲಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ರಕ್ಷಣೆಯನ್ನೂ ಬೇಡಿದ್ದಳು.
ಇಂದು ತನ್ನ ಈ ಅಭಿಯಾನದಿಂದ ತಾನು ಹಿಂದೆ ಸರಿಯುತ್ತಿರುವುದಾಗಿ ಆಕೆ ಮಾಡಿರುವ ಸರಣಿ ಟ್ವೀಟ್‌ನಲ್ಲಿ ಹೀಗೆ ಹೇಳಿದ್ದಾಳೆ :
“ನನ್ನ ದೈರ್ಯ, ಶೌರ್ಯವನ್ನು ಪ್ರಶ್ನಿಸುವವರಿಗೆ ನಾನು ಅದನ್ನು ಈಗಾಗಲೇ ಸಾಕಷ್ಟು ತೋರಿಸಿದ್ದೇನೆ. ಹಿಂಸೆಯ ವಿರುದ್ಧದ ಅಭಿಯಾನವನ್ನು ನಾನು ಕೈಗೊಂಡದ್ದು ನನಗಾಗಿ ಅಲ್ಲ; ವಿದ್ಯಾರ್ಥಿ ಸಮುದಾಯಕ್ಕಾಗಿ. ಮುಂದಿನ ಬಾರಿ ಹಿಂಸೆ, ಬೆದರಿಕೆಗಳು ಎದುರಾದಾಗ ನಾವು ಆ ಬಗ್ಗೆ ಎಚ್ಚರಿಕೆಯಿಂದ ಎರಡೆರಡು ಬಾರಿ ಯೋಚಿಸುವೆವು’.
ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಂದು ಕ್ಯಾಂಪಸ್ ಒಳಗೆ ಶಾಂತಿ ಮತ್ತು ಸುರಕ್ಷೆಗಾಗಿ, ಎಐಎಸ್‌ಎ ಕಾರ್ಯಕರ್ತರೊಂದಿಗೆ ಖಾಲ್ಸಾ ಕಾಲೇಜಿನಿಂದ ಜಾಥಾ ನಡೆಸಲಿದ್ದಾರೆ.