Advertisement

Kapu Election; 2024ರೊಳಗೆ ದೇಶದಲ್ಲಿ ಏಕರೂಪ ಕಾನೂನು ಜಾರಿ ಖಚಿತ: ಎಂ.ಕೆ. ವಿಜಯಕುಮಾರ್‌

12:32 PM Apr 28, 2023 | Team Udayavani |

ಪಡುಬಿದ್ರಿ: ಈ ರಾಷ್ಟ್ರದಲ್ಲಿ ಒಂದೇ ಕಾನೂನು ಇರಬೇಕೆಂಬುದು ಜನತೆಯ ಮಹದಾಸೆ. 2024ರೊಳಗೆ ದೇಶದಲ್ಲಿ ಏಕರೂಪ ಕಾನೂನು ಜಾರಿಯಾಗುವ ಖಚಿತ ಭರವಸೆಯಿದೆ. ದೇಶದಲ್ಲಿ ಏಕರೂಪ ಕಾನೂನು ಜಾರಿಗೆ ಬರುವ ವೇಳೆಗೆ ರಾಜ್ಯದಲ್ಲೂ ಬಿಜೆಪಿ ಸರಕಾರ ಇರಬೇಕು. ಕಾಪುವಿನಲ್ಲೂ ಬಿಜೆಪಿ ಶಾಸಕರ ಆಡಳಿತವಿರಬೇಕು. ಅದಕ್ಕಾಗಿ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರಳ ಸಜ್ಜನ ವ್ಯಕ್ತಿತ್ವದ ಗುರ್ಮೆ ಸುರೇಶ್‌ ಶೆಟ್ಟಿ ಅವರನ್ನು ಅತ್ಯಧಿಕ ಮತಗಳಿಂದ ಆರಿಸಿ, ಶಾಸಕರನ್ನಾಗಿ ಆರಿಸಿ ವಿಧಾನಸಭೆಗೆ ಕಳುಹಿಸೋಣ ಎಂದು ನನಗಿದೆ ಎಂದು ಕಾರ್ಕಳ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌ ಹೇಳಿದರು.

Advertisement

ಬಿಜೆಪಿ ವಿಶೇಷ ಮಹಾಪ್ರಚಾರದ ಸಮಾರೋಪದ ಅಂಗವಾಗಿ ಪಡುಬಿದ್ರಿ ಮಹಾಶಕ್ತಿ ಕೇಂದ್ರದ ವತಿಯಿಂದ ಪಡುಬಿದ್ರಿ ಪೇಟೆಯಲ್ಲಿ ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಪರ ನಡೆದ ಚುನಾವಣಾ ಪ್ರಚಾರ ಸಭೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಗುರ್ಮೆ ವಿಧಾನಸಭೆಯಲ್ಲಿ ಇದ್ದರೆ ಹೆಚ್ಚಿನ ಗೌರವ : ಕೋಟ
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನರೇಂದ್ರ ಮೋದಿಯಂತಹ ಪ್ರಧಾನ ಮಂತ್ರಿ ನಮಗೆ ದೊರಕಿಸುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ನಿಸ್ವಾರ್ಥದಿಂದ ದುಡಿಯುತ್ತಿರುವ ನರೇಂದ್ರ ಮೋದಿಯವರಿಂದಾಗಿ ಭಾರತ ವಿಶ್ವಗುರುವಾಗುವ ಹಾದಿಯಲ್ಲಿದೆ. ಅವರ ಕೈ ಬಲಪಡಿಸುವುದಕ್ಕಾಗಿ ಕಾಪು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಅವರನ್ನು ಭಾರೀ ಅಂತರದಿಂದ ಗೆಲ್ಲಿಸಬೇಕಿದೆ. ಎಲ್ಲರಿಗೂ ಒಪ್ಪುವಂತಹ ರೀತಿಯಲ್ಲಿ ಸಮಾಜ ಸೇವೆ ನಡೆಸುತ್ತಿರುವ ಗುರ್ಮೆ ಸುರೇಶ್‌ ಶೆಟ್ಟಿಯಂತಹ ಮಹಾನುಭಾವರು ವಿಧಾನಸಭೆಯಲ್ಲಿ ಇದ್ದರೆ ಗೌರವಯುತವಾಗುತ್ತದೆ ಎಂದರು.

ಆತ್ಮ ನಿರ್ಭರ ಭಾರತ ನಿರ್ಮಾಣದ ಸಂಕಲ್ಪಕ್ಕೆ ಗುರ್ಮೆ ಗೆಲ್ಲಿಸೋಣ : ಜ್ಯೋತಿ ಪಾಂಡೆ
ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷೆ ಡಾ| ಜ್ಯೋತಿ ಪಾಂಡೆ ಶೇಠ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಪ್ರಗತಿಯ ಪಥದಲ್ಲಿ ನಡೆಯುತ್ತಿದೆ. ಕೋವಿಡ್‌ ಕಾಲದಲ್ಲಿ ಲಸಿಕೆಯ ಸಮರ್ಪಕ ವಿತರಣೆ, ಹಸಿವೆ ನಿವಾರಣೆಗೆ ಉಚಿತ ಪಡಿತರದಂತಹ ಕಾರ್ಯಕ್ರಮಗಳಿಂದಾಗಿ ಜನರು ಇಂದು ಭಯಮುಕ್ತವಾಗಿ ಬದುಕುವಂತಾಗಿದೆ. ಆತ್ಮನಿರ್ಭರ ಭಾರತ ನಿರ್ಮಾಣ ಮಾಡಲು ಎಲ್ಲರೂ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಅವರಿಗೆ ಮತ ನೀಡಿ, ಗೆಲ್ಲಿಸವಂತೆ ಅವರು ಮನವಿ ಮಾಡಿದರು.

ನಿಮ್ಮ ಸೇವಕನಾಗುವ ಅವಕಾಶ ಮಾಡಿಕೊಡಿ : ಗುರ್ಮೆ
ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಭಾರತವನ್ನು ವಿಶ್ವಗುರುವನ್ನಾಗಿಸಬೇಕೆಂಬ ಪರಿಕಲ್ಪನೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು ಈ ಹಂತದಲ್ಲೇ ಕಾಪುವಿನಲ್ಲಿ ನನಗೆ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿರುವುದು ನನ್ನ ಸೌಭಾಗ್ಯವಾಗಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿದೆ. ಮತದಾರರು ಕೂಡಾ ನಮ್ಮನ್ನು ಬೆಂಬಲಿಸಿದರೆ ಮುಂದಿನ ಐದು ವರ್ಷದ ಅವಧಿಯಲ್ಲಿ ಜನರ ಚಾಕರಿ ಮಾಡುವ ಮೂಲಕ ನೀವು ನನಗೆ ವಹಿಸಿಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವುದಾಗಿ ಭರವಸೆ ನೀಡಿದರು.

Advertisement

ಕಾಪು ಶಾಸಕ ಲಾಲಾಜಿ ಅರ್‌. ಮೆಂಡನ್‌, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಮಂಗಳೂರು ವಿಭಾಗದ ಪ್ರಭಾರಿ ಉದಯಕುಮಾರ್‌ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ್‌ ನಾಯಕ್‌, ಬಿಜೆಪಿ ಚುನಾವಣಾ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ದೆಹಲಿ ಶಾಸಕ ವಿಜೇಂದ್ರ ಗುಪ್ತಾ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷ ರವಿ ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷೆ ನೀತಾ ಗುರುರಾಜ್‌, ಜಿ. ಪಂ. ಮಾಜಿ ಸದಸ್ಯ ಶಶಿಕಾಂತ್‌ ಪಡುಬಿದ್ರಿ ಉಪಸ್ಥಿತರಿದ್ದರು.

ಪಡುಬಿದ್ರಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಪ್ರಸಾದ್‌ ಶೆಟ್ಟಿ ಎಲ್ಲದಡಿ ಸ್ವಾಗತಿಸಿದರು. ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next