Advertisement
ತಾಲೂಕಿನ ಬಸವಾಪುರ ಗ್ರಾಮದಲ್ಲಿ ಸುಮಾರು 42 ಮಂದಿ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಇದರಲ್ಲಿ 20ಕ್ಕೂ ಅಧಿಕ ಜನರು ಹಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಉಳಿದ ಮಂಜುನಾಥ್(30), ಶಿವಯ್ಯ(38), ಮುದ್ದಯ್ಯ(60), ಹೊನ್ನಯ್ಯ(42), ಮೂರ್ತಿ(55), ಪುಟ್ಟಮಾದಶೆಟ್ಟಿ(83), ಶಿವಯ್ಯ(45), ಚಿನ್ನಸ್ವಾಮಿ(55), ಉಮೇಶ್(32), ರಾಜೇಶ್(53), ಚಿಕ್ಕಯಾತಮ್ಮ(48), ಸರೋಜಮ್ಮ(40), ಪುಟ್ಟಹನುಮಮ್ಮ(40), ಚಂದ್ರಮ್ಮ(45), ಅಂಬಿಕ(34), ಲಲಿತಮ್ಮ(45), ರಾಜಮ್ಮ(45), ಜಯ(45), ಬೆಳ್ಳಮ್ಮ(65) ಎಂಬ 19 ಮಂದಿ ಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಸವಾಪುರ ಗ್ರಾಮದ ವೃದ್ಧರೊಬ್ಬರು ನಿಧನ ಹೊಂದಿದ ಹಿನ್ನೆಲೆ ಅಂತ್ಯಕ್ರಿಯೆ ನಡೆಸಲು ಶ್ಮಶಾನಕ್ಕೆ ಮೃತ ದೇಹವನ್ನು ಗ್ರಾಮಸ್ಥರು ಕೊಂಡೊಯ್ದಿದ್ದಾರೆ. ಚಿತೆಗೆ ಬೆಂಕಿ ಹಚ್ಚುವ ವೇಳೆ ಹೊಗೆ ಎದ್ದ ಪರಿಣಾಮ ಮರದಲ್ಲಿದ್ದ ಹೆಜ್ಜೇನುಗಳು ಮೇಲೆದ್ದು, ಶವ ಸಂಸ್ಕಾರಕ್ಕೆ ತೆರಳಿದ ಸುಮಾರು 42 ಮಂದಿಗೆ ಕಚ್ಚಿದೆ. ಈ ವೇಳೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಆದರೂ ಸಹ ಹೆಜ್ಜೇನು ಬೆಂಬಿಡದೆ ಕಚ್ಚಿದೆ. ಇದರಿಂದ ಕಡಿತಕ್ಕೋಳಗಾದವರ ಮುಖ, ಕೈ ಊದಿಕೊಂಡಿದೆ. ಕೆಲವರಿಗೆ ಪ್ರಾಥಮಿಕ ಚಿಕಿತ್ಸೆಯಲ್ಲಿಯೇ ಗುಣಮುಖವಾಗಿದ್ದು, ಹೆಚ್ಚು ನೋವು ಕಾಣಿಸಿಕೊಂಡವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥ್ ನೇತೃತ್ವದ ತಂಡ ಹೆಜ್ಜೇನು ದಾಳಿಗೊಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದೆ. ತಾಲೂಕು ಆರೋಗ್ಯಾಧಿಕಾರಿ ಭೇಟಿ
ಹೆಜ್ಜೇನು ದಾಳಿಗೆ ಒಳಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಭೇಟಿ ಮಾಡಿ ಪರಿಶೀಲನೆ ನಡೆಸಿ, 19 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಹೆಜ್ಜೇನಿನ ಮುಳ್ಳುಗಳನ್ನು ಕಡಿತಕ್ಕೋಳಗಾದವರ ಮುಖ ಹಾಗೂ ಕೈ-ಕಾಲುಗಳಿಂದ ಸಂಪೂರ್ಣವಾಗಿ ತೆಗೆಯಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಚೇತರಿಕೆ ಕಾಣುತ್ತಿದ್ದಾರೆ ಎಂದು ಮಾಹಿತಿ ನೀಡಿದರು.