ಗುಂಡ್ಲುಪೇಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ “ಭಾರತ್ ಜೋಡೋ ಯಾತ್ರೆ’ ಸಂಬಂಧ ಪ್ರಮುಖ ನಾಯಕರಿಗೆ ಸ್ವಾಗತ ಕೋರಲು ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ರಾತೋರಾತ್ರಿ ಹರಿದು ಹಾಕಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಪಟ್ಟಣದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.
ಗುಂಡ್ಲುಪೇಟೆ ಪಟ್ಟಣದ ಊಟಿ ಸರ್ಕಲ್‌ನಿಂದ ರಾಷ್ಟ್ರೀಯ ಹೆದ್ದಾರಿ ಹಾಗೂ ಅದರ ಎರಡೂ ಬದಿಯಲ್ಲಿ ಅಳವಡಿಸಿದ್ದ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಹಿತ ಪ್ರಮುಖ ನಾಯಕರ ಸುಮಾರು 40ಕ್ಕೂ ಅಧಿಕ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಅವುಗಳನ್ನು ಬ್ಲೇಡ್ ಬಳಸಿ ಹರಿದು ಹಾಕಲಾಗಿದೆ.
ಗುಂಡಿಗೂ ಹೆದರೆವು: ಡಿಕೆಶಿ
ಮೈಸೂರು: ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಹರಿದು ಹಾಕಲಾಗಿದ್ದು, ಕೆಲವರು ಇದೊಂದು ಘನ ಕಾರ್ಯ ಎಂದು ಭಾವಿಸಿದ್ದಾರೆ. ನಾನು ಮನಸ್ಸು ಮಾಡಿದರೆ ಅವರು ಇಡೀ ರಾಜ್ಯದಲ್ಲಿ ಎಲ್ಲೂ ಕಾರ್ಯಕ್ರಮ ಮಾಡಲು ಹಾಗೂ ಫ್ಲೆಕ್ಸ್ ಹಾಕಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಇದಕ್ಕೆಲ್ಲ ನಾವು ಹೆದರುವುದಿಲ್ಲ. ನಾವು ಗುಂಡು ಹೊಡೆದರೂ ಹೆದರುವವರಲ್ಲ. ಮುಖ್ಯಮಂತ್ರಿ ಹಾಗೂ ಅವರ ಕಾರ್ಯಕರ್ತರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಫ್ಲೆಕ್ಸ್ ಹರಿದು ಹೇಡಿಗಳಂತೆ ಓಡಿ ಹೋದರೆ ಅದು ನಿಮಗೆ ಶೋಭೆ ತರುವುದಿಲ್ಲ ಎಂದರು.
ಭಾರತ ಜೋಡೋ ಯಾರು ಮಾಡುತ್ತಿದ್ದಾರೆ, ಯಾರು ಭಾರತ ತೋಡೋ ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಆದರೆ, ಫ್ಲೆಕ್ಸ್ ಹಾಕುವ ಮುನ್ನ ಅನುಮತಿ ತೆಗೆದುಕೊಳ್ಳಬೇಕು. ಯಾವ ಪಕ್ಷಕ್ಕೂ ಹಾಕಿರುವ ಫ್ಲೆಕ್ಸ್ ಹರಿಯುವ ಅಧಿಕಾರವಿಲ್ಲ.
-ಬಸವರಾಜ ಬೊಮ್ಮಾಯಿ, ಸಿಎಂ