ಚಿತ್ರರಂಗದಲ್ಲಿ ಕ್ರೈಮ್ ಥ್ರಿಲ್ಲರ್ ಚಿತ್ರಗಳಿಗೇನೂ ಲೆಕ್ಕವಿಲ್ಲ. ಆದರೆ, ಡಿಜಿಟಲ್ ಕ್ರೈಮ್ ವಿಷಯ ಇಟ್ಟುಕೊಂಡು ಬಂದ ಚಿತ್ರಗಳು ತೀರಾ ವಿರಳ. ಆ ಸಾಲಿಗೆ ಈಗ ಹೊಸಬರ “ಗುಲ್ಟಾ’ ಎಂಬ ಚಿತ್ರವೊಂದು ಸದ್ದಿಲ್ಲದೆಯೇ ಚಿತ್ರೀಕರಣಗೊಂಡು ಇದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರದ ಶೀರ್ಷಿಕೆಗೆ “ಆನ್‌ಲೈನ್’ ಎಂಬ ಟ್ಯಾಗ್‌ಲೈನ್ ಕೂಡ ಇದೆ. ಅಲ್ಲಿಗೆ ಇದೊಂದು ಪಕ್ಕಾ ಡಿಜಿಟಲ್ ಕ್ರೈಮ್ ಕುರಿತ ಸಿನಿಮಾ ಅನ್ನೋದು ಪಕ್ಕಾ.
ಈ ಚಿತ್ರದ ಮೂಲಕ ಜನಾರ್ದನ್ ನಿರ್ದೇಶಕರಾಗುತ್ತಿದ್ದಾರೆ. ನವೀನ್ ಶಂಕರ್ ಹೀರೋ ಆಗುತ್ತಿದ್ದಾರೆ. ಪ್ರಶಾಂತ್‌ರೆಡ್ಡಿ ಮತ್ತು ದೇವರಾಜ್ ರಾಮಣ್ಣ ನಿರ್ಮಾಪಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ನಿರ್ದೇಶಕ ಜನಾರ್ದನ್ ಚೆನ್ನೈನ ಎಂಜಿಆರ್ ಶಾಲೆಯಲ್ಲಿ ನಿರ್ದೇಶನ ಕೋರ್ಸ್ ಮಾಡಿ ಬಂದಿದ್ದಾರೆ. ಎಂಜಿನಿಯರಿಂಗ್ ಮುಗಿಸಿದ ಜನಾರ್ದನ್‌ಗೆ ಸಿನಿಮಾ ಆಸಕ್ತಿ ಮೂಡಿದ್ದರಿಂದ ಒಳ್ಳೆಯ ಕಥೆ ಹೆಣೆದು ಈಗಿನ ಟ್ರೆಂಡ್‌ಗೆ ತಕ್ಕ ಸಿನಿಮಾ ಮಾಡಿದ್ದಾರೆ.
ಕ್ರೈಮ್ ಥ್ರಿಲ್ಲರ್ ಜಾನರ್ ಚಿತ್ರವಾಗಿರುವ ಇದು, ಸೈಬರ್ ಕ್ರೈಮ್ ಕಥೆ ಹೊಂದಿದೆ. ಈಗಂತೂ ಡಿಜಿಟಲ್ ಕ್ರೈಮ್ ಹಾವಳಿ ಹೆಚ್ಚು. ಆ ಅಂಶ ಇಟ್ಟುಕೊಂಡು, ಅದಕ್ಕೊಂದು ಚೆಂದದ ಪ್ರೇಮಕಥೆ ಹೆಣೆದು, ಥ್ರಿಲ್ಲಿಂಗ್ ಅಂಶಗಳೊಂದಿಗೆ ಸಿನಿಮಾ ಮಾಡಿದ್ದಾರೆ ಜನಾರ್ದನ್. ಈ ಚಿತ್ರಕ್ಕೆ ಸೋನು ಗೌಡ ನಾಯಕಿಯಾಗಿದ್ದಾರೆ. ಅವರಿಗಿಲ್ಲಿ ವಿಭಿನ್ನ ಪಾತ್ರ ನೀಡಿದ್ದಾರೆ ನಿರ್ದೇಶಕರು.
ಉಳಿದಂತೆ ಅವಿನಾಶ್, ರಂಗಾಯಣ ರಘು, ನಾಗೇಂದ್ರ ಶಾ, ಅಪೂರ್ವ, ಸೋಮ, ಪಲ್ಲವಿರಾಜು, ಧನಂಜಯ್, ಶ್ರುತಿ ರಘುನಂದ ಇತರೆ ಕಲಾವಿದರು ನಟಿಸಿದ್ದಾರೆ. ನಾಯಕ ನವೀನ್ ಶಂಕರ್‌ಗೆ ಮೊದಲ ಚಿತ್ರವಾದರೂ, ರಂಗಭೂಮಿಯ ಹಿನ್ನೆಲೆ ಇದೆ. ಅಮಿತ್ ಆನಂದ್ ಚಿತ್ರಕ್ಕೆ ಸಂಗೀತ ನೀಡಿದ್ದು, ಐದು ಹಾಡುಗಳಿಗೆ ಅವರು ರಾಗ ಸಂಯೋಜಿಸಿದ್ದಾರೆ. ಇದು ಅವರ ಮೊದಲ ಚಿತ್ರ. ಇನ್ನು, ಛಾಯಾಗ್ರಾಹಕ ಶಾಂತಿ ಸಾಗರ್ ಅವರಿಗೆ ಮೊದಲ ಚಿತ್ರವಿದು.
ಸುಮಾರು 45 ದಿನಗಳ ಕಾಲ ಬೆಂಗಳೂರು ಮತ್ತು ಪಾಂಡಿಚೆರಿಯಲ್ಲಿ ಚಿತ್ರೀಕರಿಸಲಾಗಿದೆ. ಜಯಂತ್ ಕಾಯ್ಕಿಣಿ, ಕಿರಣ್ ಕಾವೇರಪ್ಪ ಮತ್ತು ಅನೂಪ್ ರಂಗಸ್ವಾಮಿ ಅವರು ಗೀತೆ ರಚಿಸಿದ್ದಾರೆ. ಈಗಾಗಲೇ “ಗುಲ್ಟಾ ಆನ್‌ಲೈನ್’ ಸಂಪೂರ್ಣಗೊಂಡಿದ್ದು, ಫೆಬ್ರವರಿ 3 ರಂದು ಆಡಿಯೋ ಬಿಡುಗಡೆ ಮಾಡಲು ತಯಾರಾಗಿದೆ ಚಿತ್ರತಂಡ. ಎಲ್ಲವು ಅಂದುಕೊಂಡಂತೆ ನಡೆದರೆ, ಮಾರ್ಚ್‌ನಲ್ಲಿ “ಗುಲ್ಟಾ’ ಬಿಡುಗಡೆಯಾಗಲಿದೆ.