Advertisement
ಸಾಂಪ್ರದಾಯಿಕ ಕೊಳ್ಕೆ ಭತ್ತದ ಕೃಷಿ ಉತ್ತಮ ನೀರಾವರಿಯನ್ನು ಒಳ ಗೊಂಡಿರುವ ಈ ಪ್ರದೇಶದಲ್ಲಿ ಮುಂಗಾರು ಆಗಮಿಸುತ್ತಿದ್ದಂತೆ ಕೃಷಿ ಭೂಮಿಯನ್ನು ಆವರಿಸುವ ನೆರೆಯ ಪರಿಣಾಮ ಮುಂಗಾರಿನಲ್ಲಿ ಭತ್ತದ ನಾಟಿಕಾರ್ಯಕ್ಕೆ ಅಡ್ಡಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರೈತರು ಸ್ವಾಭಾವಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಬೇಕು ಎನ್ನುವ ಛಲದೊಂದಿಗೆ ಶ್ರಮವಹಿಸಿ ಕೃಷಿಭೂಮಿ ನಡುವಿನ ಅವೈಜ್ಞಾನಿಕ ಗಣಿಗಾರಿಕೆಯಿಂದ ಸೃಷ್ಟಿಯಾದ ಹೊಂಡದಲ್ಲಿ ಶೇಖರಣೆಯಾದ ನೀರಿನ ಸಂರಕ್ಷಣೆಯೊಂದಿಗೆ ಸಾಂಪ್ರದಾಯಿಕವಾಗಿ ಕೊಳ್ಕೆ ಭತ್ತದ ಕೃಷಿ ಪದ್ದತಿಯಲ್ಲಿ ಇಲ್ಲಿನ ರೈತರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಮಲ್ಯಾಡಿ, ಉಳೂ¤ರು, ಕೊçಕೂರು, ಬೇಳೂರು ಹಾಗೂ ಗುಳ್ಳಾಡಿ ಗ್ರಾಮೀಣ ಭಾಗದಲ್ಲಿ ಹಾದು ಹೋಗಿರುವ ಹೊಳೆ ಸಾಲಿನ ಎರಡು ಬದಿಗಳಲ್ಲಿರುವ ನೂರಾರು ಎಕರೆ ಫಲವತ್ತಾದ ಕೃಷಿಭೂಮಿ ಹೊಂದಿದೆ. ಇಂತಹ ಫಲವತ್ತಾದ ಕೃಷಿಭೂಮಿಗಳಿದ್ದರೂ ಕೂಡಾ ಪರಿಸರದಲ್ಲಿ ಕೃಷಿ ಭೂಮಿಗಳ ನಡುವೆ ಅವ್ಯಾಹತವಾಗಿ ನಡೆಯುವ ಆಳ ಆವೆಮಣ್ಣಿನ ಗಣಿಗಾರಿಕೆಯ ಪರಿಣಾಮ ಮುಂಗಾರು ಕೃಷಿ ಚಟುವಟಕೆಗಳಿಗೆ ನೆರೆಯ ಭೀತಿ ಎದುರಾಗುವ ಪರಿಣಾಮ ಮುಂಗಾರಿನಲ್ಲಿ ಖಾತೆ ಭತ್ತದ ಕೃಷಿ ಮಾಡಲಾಗದೆ ಕೈಚೆಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಳೆಸಾಲಿನಲ್ಲಿ ತುಂಬಿದೆ
ಅಪಾರ ಪ್ರಮಾಣದ ಹೂಳು ಕುಂದಾಪುರ ತಾಲೂಕಿನಿಂದ ಉಡುಪಿ ತಾಲೂಕಿನ ಉಪ್ಲಾಡಿ ಸೇರಿದಂತೆ ನೂರಾರು ಎಕರೆ ಕೃಷಿಭೂಮಿಗಳ ನಡುವೆ ಹಾದುಹೋಗುವ ಹೊಳೆಸಾಲಿನಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ಶೇಖರಣೆಯಾಗಿರುವ ಪರಿಣಾಮ ಮುಂಗಾರು ಮಳೆ ಆಗಮಿಸುತ್ತಿದ್ದಂತೆ ಹೊಳೆಯಲ್ಲಿ ಮಳೆನೀರು ಸರಾಗವಾಗಿ ಹರಿಯದೆ ಕೃಷಿಭೂಮಿಯನ್ನು ವ್ಯಾಪಿಸುತ್ತಿದೆ, ಈ ಹಿನ್ನೆಲೆಯಲ್ಲಿ ಅದೆಷ್ಟೋ ಗ್ರಾಮೀಣ ರೈತರು ಮುಂಗಾರು ಬೆಳೆ ಹಾನಿಯಾಗುವುದರಿಂದ ಹಿಂಗಾರಿನಲ್ಲಿ ಕೊಳ್ಕೆ ಭತ್ತದ ನಾಟಿ ಪದ್ದತಿಯನ್ನು ಅನುಸರಿಸುವ ಪರಿಸ್ಥಿತಿ ಎದುರಾಗಿದೆ.
Related Articles
ಕೃಷಿಭೂಮಿ ಸಮೀಪದಲ್ಲಿಯೇ ಹಾದುಹೋದ ಹೊಳೆ ಇದ್ದರೂ ಕೂಡಾ ಅದರಲ್ಲಿ ಶೇಖರಣೆಯಾಗಿರುವ ಅಪಾರ ಹೂಳು ಹಾಗೂ ಕೊಜೆ ಹೊಂಡದಿಂದಾಗಿ ಮುಂಗಾರಿನಲ್ಲಿ ನೆರೆ ಕೃಷಿಭೂಮಿಯನ್ನು ಆವರಿಸುತ್ತಿದೆ. ಹೊಂಡದಲ್ಲಿರುವ ಅಪಾರ ಪ್ರಮಾಣದ ನೀರನ್ನು ಸಂಬಳಿಗೆಯ ( ನೀರನ್ನು ಹೊಂಡದಿಂದ ಎತ್ತುವ ಕೃಷಿ ಸಲಕರಣೆ) ಸಹಾಯದಿಂದ ಕೃಷಿಭೂಮಿಗೆ ಹಾಯಿಸಿಕೊಂಡು ಹಿಂಗಾರಿನಲ್ಲಿ ಕೊಳ್ಕೆ ಭತ್ತದ ನಾಟಿ ಪದ್ದತಿಯನ್ನು ಅನುಸರಿಸುತ್ತಿದ್ದೇವೆ. ಕಳೆದ ಹಲವು ವರ್ಷಗಳಿಂದಲೂ ಹೊಳೆಸಾಲಿನಲ್ಲಿ ಶೇಖರಣೆಯಾದ ಹೂಳೆತ್ತುವ ಮಹತ್ವದ ಕಾರ್ಯಕ್ಕೆ ಸಂಬಂಧಪಟ್ಟವರು ವೈಜ್ಞಾನಿಕವಾಗಿ ಚಿಂತನೆ ನಡೆಸಿದಾಗ ಮಾತ್ರ ಈ ಭಾಗದ ಕೃಷಿ ಚಟುವಟಿಕೆಯನ್ನು ವರ್ಷದಲ್ಲಿ ಖಾತೆ ಹಾಗೂ ಎರಡನೆಯ ಭತ್ತದ ಬೆಳೆ ಕೊಳ್ಕೆ ಕೃಷಿ ಪದ್ದತಿಯನ್ನು ಅನುಸರಿಸಲು ಸಾಧ್ಯವಿದೆ.
-ಪ್ರಫುಲ್ಲಾ ಕೃಷ್ಣಯ್ಯ ಶೆಟ್ಟಿ,
ಗುಳ್ಳಾಡಿ ಹೊಸಿಮನೆ,
ಸಾಂಪ್ರದಾಯಿಕ ಕೃಷಿಕರು.
Advertisement
- ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ