Advertisement

ಗುಳಿಗ ಹೇಳಿಕೆ ;ಕೂಡಲೇ ಆರಗ ಜ್ಞಾನೇಂದ್ರ ಕ್ಷಮೆ ಕೇಳದಿದ್ದರೆ ಹೋರಾಟ:ಕಿಮ್ಮನೆ ರತ್ನಾಕರ್

05:47 PM Mar 16, 2023 | Vishnudas Patil |

ಶಿವಮೊಗ್ಗ : ಕರಾವಳಿ ದೈವದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಂತೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಕಿಮ್ಮನೆ ರತ್ನಾಕರ್ ಪ್ರತಿಕ್ರಿಯೆ ನೀಡಿದ್ದು, ಈ ಕೂಡಲೇ ಜನರು, ನಾಟಕ ತಂಡದ ಸದಸ್ಯರ ಕ್ಷಮೆಯನ್ನು ಗೃಹ ಸಚಿವರು ಕೇಳಬೇಕು. ಕೇಳದಿದ್ದರೆ ಅವರು ಹೋರಾಟ ಮಾಡುತ್ತಾರೆ. ಅದಕ್ಕೆ ನಮ್ಮ ಬೆಂಬಲ ಇರುತ್ತದೆ ಎಂದಿದ್ದಾರೆ.

Advertisement

ಹಿಂದೂ ಧರ್ಮದ ವಿಚಾರ ಮುಂದಿಟ್ಟೇ ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ದಕ್ಷಿಣ ಕನ್ನಡ ಭಾಗದಲ್ಲಿ ಕೋಲ, ಭೂತಾರಾಧನೆ ಸಾವಿರಾರು ವರ್ಷದಿಂದ ನಡೆದುಕೊಂಡು ಬಂದಿದೆ. ಇತ್ತೀಚಿಗೆ ಅದೇ ಆಧಾರದಲ್ಲಿ ತೆಗೆದ ಕಾಂತಾರ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಅದರ ನಟರು ಕೂಡ ಶಿವದೂತೆ ಗುಳಿಗ ನಾಟಕದಲ್ಲಿ ಪಾತ್ರ ಮಾಡಿದ್ದಾರೆ. ಇದು ಯಾರ ವಿರುದ್ಧವಲ್ಲ,ಯಾರ ಪಕ್ಷದ್ದೂ ಅಲ್ಲ.10 ಸಾವಿರಕ್ಕೂ ಹೆಚ್ಚು ಜನ ಬಂದು ನಾಟಕ ವೀಕ್ಷಿಸಿ, ಪ್ರಶಂಸಿದ್ದಾರೆ‌. ಆದರೆ ಇದನ್ನ ಕಾಂಗ್ರೆಸ್ ನವರು ಮಾಡಿದ್ದಾರೆ ಎಂದು ಆರಗ ಜ್ಞಾನೇಂದ್ರ ಟೀಕಿಸಿದ್ದಾರೆ. ಶಿವದೂತ ಗುಳಿಗ ಅಲ್ಲ ಜಪಾಳ್ ಮಾತ್ರೆ ಎಂದು ಹೇಳಿದ್ದಾರೆ ಎಂದು ಕಿಡಿ ಕಾರಿದರು.

ಗೃಹಸಚಿವರು ಅವರಿಗೆ ಬೇಕಾಗಿದ್ದು ಮಾತ್ರ ಯೋಚನೆ ಮಾಡುತ್ತಿದ್ದಾರೆ. ಉಳಿದವರು ಏನೇ ಮಾಡಿದರೂ, ಪೂಜೆ ಮಾಡಿದರೂ ಅದೆಲ್ಲಾ ನಿಷೇಧ. ಅದಕ್ಕೆ ಸಂಬಂಧ ಇಲ್ಲ ಅಂದುಕೊಂಡಿದ್ದಾರೆ. ಅವರು ಆಡಿರುವ ಮಾತು ಭೂತರಾಧನೆ, ಕೋಲ ನಂಬಿರುವ ಜನರ ಮೇಲೆ ಮಾಡಿದ ಸಾಂಸ್ಕೃತಿಕ ಅತ್ಯಾಚಾರವಿದು. ನಾವು ಯಾವುದನ್ನು ನಂಬುತ್ತೇವೆ ಬಿಡುತ್ತೇವೆ ಎಂದು ಜ್ಞಾನೇಂದ್ರಗೆ ಹೇಳಿದ್ದೇವಾ? ನನ್ನ ನಂಬಿಕೆ ಏನು ಎಂದು ಹೇಳಕ್ಕೆ ಇವರ್ಯಾರು? ಇವರಿಗೆ ಪವರ್ ಆಫ್ ಅಟಾರ್ನಿ ಕೊಟ್ಟಿದ್ದೇವಾ? ಇವರು ಯಾರು ಕೇಳೋಕೆ? ಇವರಿಗೆ ತಲೆ ಸರಿ ಇಲ್ವಾ? ಆರಗ ಅವರಿಗೆ ಮೆಂಟಲ್ ಬ್ಯಾಲೆನ್ಸ್ ತಪ್ಪಿ ಹೋಗಿದೆ. ನಾನು ಧರ್ಮಸ್ಥಳ, ತಿರುಪತಿ, ಮಂದಾರ್ತಿಗೆ ಹೋಗಿದ್ದೇನೆ. ನಮ್ಮ‌ ಮನೆ ತೋಟದಲ್ಲೂ ಪೂಜೆ ಆಗುತ್ತದೆ. ಏನು ವ್ಯತ್ಯಾಸ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದರು.

ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

“ನನ್ನ ವಿರುದ್ಧ ಟೀಕೆ ಮಾಡುವವರು ಯಾರು? ನನಗೆ ಗುಳಿಗ, ಪಂಜುರ್ಲಿ ಕುರಿತು ಗೌರವ ಭಕ್ತಿಯಿದೆ. ನಿನ್ನೆ ಕೂಡ ಒಂದು ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದೇನೆ. ಯಾರಿಗೆ ಈ ದೈವದ ಬಗ್ಗೆ ನಂಬಿಕೆಯಿಲ್ಲ, ವಿಶ್ವಾಸ ಇಲ್ಲ, ಮೂಢನಂಬಿಕೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದವರು ನಿನ್ನೆ ತೀರ್ಥಹಳ್ಳಿಯಲ್ಲಿ ನಾಟಕವಾಡಿಸಿದ್ದಾರೆ. ಚುನಾವಣೆ ಸಮಯದಲ್ಲಿ ಜನರ ಭಾವನೆಗಳನ್ನು ರಾಜಕಾರಣಕ್ಕೆ ಕಾಂಗ್ರೆಸ್ ದುರುಪಯೋಗ ಮಾಡಿದ್ದಾರೆ ಎಂದು ಆರಗ ಜ್ಞಾನೇಂದ್ರ ವೈರಲ್ ಆದ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next