ಗುಳೇದಗುಡ್ಡ: ದೇಶ-ವಿದೇಶಗಳಲ್ಲಿ ಪ್ರಸಿದ್ಧಿಯಾಗಿ ರುವ ಗುಳೇದಗುಡ್ಡ ಖಣ ಜ. 26ರಂದು ನಡೆಯುವ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನಗಳಲ್ಲಿ ರಾಜ್ಯದ ಕರಕುಶಲ ವಸ್ತುಗಳಲ್ಲಿ ಒಂದಾಗಿ ಆಯ್ಕೆಯಾಗಿರುವುದು ಸಂತಸದ ವಿಚಾರ. ಆದರೆ, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಬೇಸರದ ಸಂಗತಿ. ಕೋವಿಡ್‌ನಿಂದ ಒಂದು ತಿಂಗಳಲ್ಲಿ 5-6 ಕೋಟಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.
ಗುಳೇದಗುಡ್ಡ ಖಣಕ್ಕೆ ತನ್ನದೆಯಾದ ಇತಿಹಾಸವಿದ್ದು, ಕಳೆದ 3-4 ವರ್ಷಗಳಲ್ಲಿ ಮತ್ತೇ ತನ್ನ ವೈಭವ ಪಡೆದುಕೊಂಡು ನೇಕಾರಿಕೆ ಹೆಚ್ಚಾಗಿತ್ತು. ಮಹಾರಾಷ್ಟ್ರದಿಂದ ಸದ್ಯ ಬೇಡಿಕೆಯಿದೆ. ಆದರೆ, ಕೋವಿಡ್‌ನಿಂದ ನೇಕಾರಿಕೆಗೆ ಮತ್ತೆ ಹೊಡೆತ ಬಿದ್ದಿದೆ. ಗುಳೇದಗುಡ್ಡ ಖಣವು ಈಗ ನಾನಾ ತರಹದ ವಿನ್ಯಾಸದಲ್ಲಿ ಮೂಡಿಬರುತ್ತಿದ್ದು, ಆಕಾಶ ಬುಟ್ಟಿ, ಚೂಡಿದಾರ, ಸೀರೆ, ತಲೆದಿಂಬು ಕವರ್, ಬಾಗಿಲು ತೋರಣ ಹೀಗೆ ನಾನಾ ತರಹದ ವಿನ್ಯಾಸಗಳಲ್ಲಿ ಬರುತ್ತಿದೆ. ಆದರೆ, ಇದಕ್ಕೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ.
ಕೋವಿಡ್‌ನಿಂದ 5-6ಕೋಟಿ ರೂ. ವಹಿವಾಟು ಸ್ಥಗಿತ: ಗುಳೇದಗುಡ್ಡ ಖಣಕ್ಕೆ ಮಹಾರಾಷ್ಟ್ರವೇ ಶೇ.75ರಷ್ಟು ಮಾರುಕಟ್ಟೆ ಪ್ರದೇಶವಾಗಿದೆ. ಇನ್ನೂ 25ರಷ್ಟು ರಾಜ್ಯ ಸೇರಿ ಇನ್ನಿತರ ಕಡೆ ಮಾರುಕಟ್ಟೆಯಿದೆ. ಎರಡು ಅಲೆಯಲ್ಲಿ ಕೋಟ್ಯಂತರ ರೂ. ವ್ಯಾಪಾರ ವಹಿವಾಟು ನಿಂತಿತ್ತು. ಈಗ ಮತ್ತೇ ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಡಿಸೆಂಬರ್ 15ರಿಂದ ಇಲ್ಲಿಯವರೆಗೆ ಅಂದರೆ ಒಂದು ತಿಂಗಳಲ್ಲಿ ಅಂದಾಜು 5-6 ಕೋಟಿಯಷ್ಟು ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ವ್ಯಾಪಾರ ವಹಿವಾಟು ಕಡಿಮೆಯಾಗುತ್ತಿರುವುದರಿಂದ ಮಾಲೀಕರು ನೇಕಾರರಿಗೆ ಕಡಿಮೆ ಪ್ರಮಾದಲ್ಲಿ ಮಗ್ಗ ನೇಯುವಂತೆ ಸೂಚಿಸಿದ್ದಾರೆ.
ಖುಷಿಯ ವಿಚಾರ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ರಾಜ್ಯದಿಂದ ಸ್ತಬ್ದಚಿತ್ರ ಪ್ರದರ್ಶನ ಸಮಯದಲ್ಲಿ ಕರಕುಶಲ ಕಲೆಗಳಲ್ಲಿ ಗುಳೇದಗುಡ್ಡ ಖಣಕ್ಕೂ ಪ್ರಾಶಸ್ತ್ಯ ನೀಡಲಾಗಿದೆ. ನಮಗೆ ಕೋವಿಡ್ ಬಂದಿರಲಿಲ್ಲ ಎಂದಿದ್ದರೇ ಈಗ 5-7 ಕೋಟಿಯಷ್ಟು ವ್ಯಾಪಾರ ವಹಿವಾಟುವಾಗುತ್ತಿತ್ತು. ನಮಗೆ ಮಹಾರಾ ಷ್ಟ್ರವೇ ಮುಖ್ಯ ಕೇಂದ್ರವಾಗಿದೆ. ಅಲ್ಲಿಯೇ ಕೋವಿಡ್‌ನಿಂದಾಗಿ ಲಾಕ್‌ಡೌನ್ ಇದ್ದು, ಹೀಗಾಗಿ ನಮ್ಮ ವ್ಯಾಪಾರ ಸ್ಥಗಿತಗೊಂಡಿದೆ ಎಂಬುದು ವ್ಯಾಪಾರಸ್ಥರ ಮಾತು.
ಬೇಕಿದೆ ಮಾರುಕಟ್ಟೆ ಸೌಲಭ್ಯ: ರೈತರಿಗೆ ಹೇಗೆ ಅವರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಎಪಿಎಂಸಿ ವ್ಯವಸ್ಥೆ ಇದೆಯೋ ಅದೇ ರೀತಿ ನೇಕಾರರು ತಯಾರಿಸಿದ ಬಟ್ಟೆಗಳನ್ನು ಮಾರಾಟ ಮಾಡಲು ಸರಿಯಾದ ಮಾರುಕಟ್ಟೆ ವ್ಯವಸ್ಥೆ ಬೇಕಿದೆ. ಕೇಂದ್ರ ಸರಕಾರ ಚನ್ನಪಟ್ಟಣ ಹಾಗೂ ಕಿನ್ನಾಳ ಗೊಂಬೆಗಳಿಗೆ ನೀಡಿದ ಪ್ರೋತ್ಸಾಹದಂತೆ ಗುಳೇದಗುಡ್ಡ ಖಣಕ್ಕೂ ನೀಡಿದರೆ, 2-3 ವರ್ಷಗಳಲ್ಲಿ ಮತ್ತೇ ನೇಕಾರಿಕೆ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಸದ್ಯ ಗುಳೇದಗುಡ್ಡ ಖಣಕ್ಕೆ ಮಹಾರಾಷ್ಟ್ರ ಹೊರತುಪಡಿಸಿದರೆ ಇನ್ನಿತರ ಕಡೆಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಸರಕಾರ ಆ ನಿಟ್ಟಿನಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಅವಶ್ಯವಿದೆ.
ಹೊರೆಯಾದ ಕಚ್ಚಾಮಾಲು: ನೇಕಾರಿಕೆಗೆ ಬೇಕಾದ ಕಚ್ಚಾಮಾಲಿನ ಬೆಲೆ ಹೆಚ್ಚಾಗಿರುವುದು ನೇಕಾರರಿಗೆ ಹಾಗೂ ಮಾಲೀಕರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ. 5 ಕೆಜಿ ಮಸರಾಯಿ 700 ರೂ. ಗಳಿಂದ 1200ರೂ. ಏರಿಕೆಯಾಗಿದೆ. ಇನ್ನೂ ರೇಷ್ಮೆ 4000 ರಿಂದ 6000 ರೂ.ಗೆ ಏರಿಕೆಯಾಗಿದೆ. ಪಾಲಿಸ್ಟರ್ ಯಾರ್ನ್ ಶೇ. 30 ರಷ್ಟು ಹೆಚ್ಚಳವಾಗಿದೆ.
ಕಳೆದ 3-4 ವರ್ಷಗಳಿಂದ ನೇಕಾರಿಕೆ ಚೆನ್ನಾಗಿ ನಡೆಯುತ್ತಿದೆ. ಆದರೆ, ಕೊರೊನಾದಿಂದ ಹೊಡೆತ ಬಿದ್ದಿದೆ. ಕಚ್ಚಾಮಾಲು ಬೆಲೆ ಏರಿಕೆಯಾಗಿದೆ. ಸರಕಾರ ನೇಕಾರಿಕೆ ಪ್ರೋತ್ಸಾಹ ನೀಡಬೇಕು. ಕೊರೊನಾದಿಂದ ಕಳೆದ ಒಂದು ತಿಂಗಳಿಂದ ವ್ಯಾಪಾರ ವಹಿವಾಟು ಇಳಿಮುಖವಾಗಿದೆ.
ಸಂಪತ್‌ಕುಮಾರ ರಾಠಿ, ಖಣಗಳ
ವ್ಯಾಪಾರಸ್ಥರು, ಗುಳೇದಗುಡ್ಡ
ನೇಕಾರಿಕೆಗೆ ಮಹಾರಾಷ್ಟ್ರವೇ ಮಾರುಕಟ್ಟೆ. ಅಲ್ಲಿಯೇ ಕೋವಿಡ್‌ನಿಂದ ಬಂದಾಗಿದ್ದು, ಹೀಗಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಸುಮಾರು 5-6ಕೋಟಿಯಷ್ಟು ವಹಿವಾಟು ಬಂದ್ ಆಗಿದೆ. ಸರಕಾರ ನೇಕಾರಿಕೆಗೆ ಸಬ್ಸಿಡಿ ನೀಡಬೇಕು. ಆರ್ಥಿಕವಾಗಿ ಬೆಂಬಲ ನೀಡಬೇಕು. ಕಚ್ಚಾಮಾಲಿನ ಬೆಲೆ ಕಡಿಮೆ ಮಾಡಬೇಕು.
ರಾಜೇಂದ್ರ ತೋತಲಾ, ಖಣಗಳ
ವ್ಯಾಪಾರಸ್ಥರು, ಗುಳೇದಗುಡ್ಡ
*ಮಲ್ಲಿಕಾರ್ಜುನ ಕಲಕೇರಿ