ಗೀತರಚನೆಕಾರನಾಗಿ, ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಶಿವುಜಮಖಂಡಿ “ನನ್ನ ನಿನ್ನ ಪ್ರೇಮಕಥೆ’ ಮೂಲಕ ನಿರ್ದೇಶಕರಾಗಿಯೂ ಸುದ್ದಿಯಾದರು. ಈಗ ಅವರ ನಿರ್ದೇಶನದ ಎರಡನೇ ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಹೌದು, “ಗುಲಾಲ್.ಕಾಂ’ ಮೂಲಕ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಿರುವ ಶಿವುಜಮಖಂಡಿ, ತಮ್ಮ ಚಿತ್ರದ ಕುರಿತು ಒಂದಷ್ಟು ಮಾಹಿತಿ ಹಂಚಿಕೊಳ್ಳಲೆಂದೇ ಅವರು ಪತ್ರಕರ್ತರ ಮುಂದೆ ಬಂದಿದ್ದರು.
ಚಿತ್ರದ ಕುರಿತು ಮೊದಲು ಮಾತಿಗಿಳಿದ ನಿರ್ಮಾಪಕ ಗೋಪಾಲಕೃಷ್ಣ ಚಂದ್ರಕಾಂತ ಹವಾಲ್ದಾರ, “ಚಿತ್ರ ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಬಂದಿದೆ. ಇಲ್ಲಿ ಲವ್, ಸೆಂಟಿಮೆಂಟ್, ಫ್ರೆಂಡ್‌ಶಿಪ್ ಜೊತೆಗೆ ಹಾಸ್ಯವೂ ಮೇಳೈಸಿದೆ. ಹೊಸತನದ ಕಥೆ ಈಗಿನ ಟ್ರೆಂಡ್‌ಗೆ ತಕ್ಕಂತಿದೆ. ಚಿತ್ರದಲ್ಲಿ ನಾನೂ ಕೂಡ ಹಾಡೊಂದನ್ನು ಹಾಡಿದ್ದೇನೆ. “ಹುಡುಗಿ ಹುಡುಗಿ’ ಎಂಬ ಹಾಡು ಈಗಾಗಲೇ ಎಲ್ಲೆಡೆ ಮೆಚ್ಚುಗೆ ಪಡೆದಿದೆ. ಉಳಿದ ಹಾಡುಗಳು ಸಹ ಜನರಿಗೆ ಇಷ್ಟವಾಗಲಿವೆ’ ಎಂದರು ಹವಾಲ್ದಾರ.
ಮತ್ತೂಬ್ಬ ನಿರ್ಮಾಪಕ ಧನಂಜಯ್ ಅವರಿಗೆ ನಿರ್ದೇಶಕ ಶಿವುಜಮಖಂಡಿ ಬಹಳ ವರ್ಷಗಳ ಗೆಳೆಯರಂತೆ. ಇಬ್ಬರೂ ಸೇರಿ ಒಂದು ಸಿನಿಮಾ ಮಾಡುವ ಬಗ್ಗೆ ಚರ್ಚಿಸಿದ್ದೇ ತಡ, ಆಗ ತಯಾರಾಗಿದ್ದೇ ಈ ಚಿತ್ರ. ಐವರು ಗೆಳೆಯರ ನಡುವಿನ ಕಥೆ ಇಲ್ಲಿದೆ. ಕಷ್ಟ, ಸುಖದಲ್ಲಿ ಅವರೆಲ್ಲಾ ಹೇಗೆಲ್ಲಾ ಇರುತ್ತಾರೆ ಎಂಬುದನ್ನು ಇಲ್ಲಿ ಹೇಳಲಾಗಿದೆ’ ಎಂದರು ಧನಂಜಯ್.
ನಾಯಕ ದಿವಾಕರ್ ಅವರಿಗೆ ಇದು ಎರಡನೇ ಚಿತ್ರವಂತೆ. ಮೊದಲ ಚಿತ್ರದಲ್ಲಿ ಅವರು ರಗಡ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಅವರು, ಹಾಸ್ಯದ ಮೂಲಕ ಕಚಗುಳಿ ಇಡಲಿದ್ದಾರಂತೆ. ನಿರ್ದೇಶಕರು ಒಳ್ಳೆಯ ಕಥೆ ಹೆಣೆದು, ಪ್ರತಿ ಪಾತ್ರಕ್ಕೂ ಜಾಗ ಕಲ್ಪಿಸಿದ್ದಾರೆ. ಇನ್ನು, ನಿರ್ಮಾಪಕರ ಸಹಕಾರ, ಬೆಂಬಲದಿಂದ “ಗುಲಾಲ್’ ಒಳ್ಳೆಯ ಚಿತ್ರವಾಗಿ ಮೂಡಿಬಂದಿದೆ. ನಮಗೂ ಚಿತ್ರದ ಮೇಲೆ ನಿರೀಕ್ಷೆ ಇದೆ’ ಎಂದರು ದಿವಾಕರ್.
ನಾಯಕಿ ನೇತ್ರಾ ಅವರಿಗೆ ಇದು ಆರನೇ ಚಿತ್ರವಂತೆ. ಹಿಂದಿನ ಯಾವ ಚಿತ್ರದಲ್ಲೂ ಅವರಿಗೆ ಗುರುತಿಸಿಕೊಳ್ಳುವಂತಹ ಪಾತ್ರ ಸಿಕ್ಕಿರಲಿಲ್ಲವಂತೆ. ಈ ಚಿತ್ರದಲ್ಲಿ ತೂಕವಿರುವ ಪಾತ್ರವಿದೆ. ಸಿನಿಮಾ ಬಿಡುಗಡೆ ಬಳಿಕ ಖಂಡಿತ ಜನ ನನ್ನ ನಟನೆ ಬಗ್ಗೆ ಮಾತಾಡುತ್ತಾರೆ. ಇಡೀ ಚಿತ್ರದಲ್ಲಿ ನನಗೆ ಒಳ್ಳೆಯ ಅನುಭವ ಆಗಿದೆ. ಕಥೆ, ಪಾತ್ರ ಚಿತ್ರದ ಹೈಲೈಟ್’ ಅಂದರು ನೇತ್ರಾ.
ಹಾಸ್ಯ ನಟ ಸದಾನಂದ ಅವರಿಲ್ಲಿ ಮುಸ್ಲಿಂ ಪಾತ್ರ ಮಾಡಿದ್ದು, ಮಂಗಳೂರು ಭಾಷೆಯ ಸಂಭಾಷಣೆ ಹೇಳಿದ್ದಾರಂತೆ. ರಂಗಭೂಮಿ ಕಲಾವಿದ ಪ್ರಶಾಂತ್ ನಟನ ಅವರೂ ಸಹ ಇಲ್ಲಿ ವಿಭಿನ್ನಪಾತ್ರ ಮಾಡಿದ್ದಾರಂತೆ. ಇದುವರೆಗೆ ಗಂಭೀರ ಪಾತ್ರ ಮಾಡುತ್ತಿದ್ದ ಅವರು, ಇಲ್ಲಿ ಹಾಸ್ಯ ಪಾತ್ರದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರಂತೆ.
ಎಲ್ಲರೂ ಮಾತನಾಡಿದ ಬಳಿಕ ನಿರ್ದೇಶಕ ಶಿವುಜಮಖಂಡಿ ಮೈಕ್ ಹಿಡಿದರು. “ಇದು ನನ್ನ ಎರಡನೇ ಸಿನಿಮಾ. ಇಲ್ಲಿ ಹಾಸ್ಯದ ಜೊತೆಯಲ್ಲೇ ಒಂದು ಸಣ್ಣ ಸಂದೇಶವಿದೆ. ಹೊಸಬರೇ ಹೆಚ್ಚು ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಪ್ರತಿಭೆಗಳು ಇಲ್ಲಿವೆ. ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ. ಎಲ್ಲ ಅಂದುಕೊಂಡಂತೆ ನಡೆದರೆ ಜನವರಿಯಲ್ಲಿ ಚಿತ್ರ ರಿಲೀಸ್ ಮಾಡುವುದಾಗಿ ಹೇಳಿದರು ಶಿವು ಜಮಖಂಡಿ. ಪೃಥ್ವಿರಾಜ್, ಪೂಜಾ, ಗಾಯಕಿ ಶಶಿಕಲಾ, ಸೂರ್ಯ ಮಲ್ಲೇಶ್ವರ, ಶಂಕರ್ ತಮ್ಮ ಅನುಭವ ಹಂಚಿಕೊಳ್ಳುವ ಹೊತ್ತಿಗೆ ಮಾತುಕತೆಗೆ ಬ್ರೇಕ್ ಬಿತ್ತು.