Advertisement
ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಸಮರ್ಪಕವಾದ ವ್ಯವಸ್ಥೆಯಿಲ್ಲದ ಕಾರಣ ಗ್ರಾಮಸ್ಥರು ಹಾಗೂ ಹೊರಗಿನಿಂದ ಬರುವ ಜನರು ಮುಳ್ಳಿಕಟ್ಟೆ- ನಾಯಕವಾಡಿ ರಸ್ತೆ, ತ್ರಾಸಿ – ನಾಯಕವಾಡಿ ರಸ್ತೆಗಳ ಎರಡೂ ಬದಿ, ಚರಂಡಿಗಳಿಗೆ ಕಸ ಎಸೆಯುತ್ತಿದ್ದಾರೆ. ಕೇವಲ ಗುಜ್ಜಾಡಿ ಗ್ರಾಮದ ಜನರು ಮಾತ್ರವಲ್ಲದೆ ಗಂಗೊಳ್ಳಿ ಹಾಗೂ ಇನ್ನಿತರ ಕಡೆಗಳಿಂದ ವಾಹನಗಳಲ್ಲಿ ರಾತ್ರಿ ವೇಳೆ ಬಂದು ಕಸ ಎಸೆದು ಹೋಗುತ್ತಿದ್ದಾರೆ ಎನ್ನುವುದು ಗುಜ್ಜಾಡಿ ಪಂಚಾಯತ್ ಅಧಿಕಾರಿಗಳ ಆರೋಪ.
ರಸ್ತೆ ಬದಿ ಕಸ ತಂದು ಎಸೆಯಬೇಡಿ ಎಂದು ಗುಜ್ಜಾಡಿ ಗ್ರಾಮ ಪಂಚಾಯತ್ ಅನೇಕ ಬಾರಿ ಸೂಚನಾ ಫಲಕ ಅಳವಡಿಸಿ, ಮನವಿ ಮಾಡಿಕೊಂಡಿದೆ. ಆದರೆ ಈ ಮನವಿಗೆ ಮನ್ನಣೆಯೇ ನೀಡದೇ ರಾತ್ರಿ ಹೊತ್ತಲ್ಲಿ ಬಂದು ಕಸ ಎಸೆದು ಹೋಗುತ್ತಿರುವುದು ಕಂಡು ಬರುತ್ತಿದೆ. ಒಂದು ಕಡೆ ಸಿಸಿಟಿವಿ ಕೂಡ ಅಳವಡಿಸಲಾಗಿದೆ. ಆದರೂ ಅದನ್ನು ಕ್ಯಾರೇ ಅನ್ನುತ್ತಿಲ್ಲ. ಕಸ ಎಸೆಯುವುದನ್ನು ನಿಯಂತ್ರಿಸುವುದೇ ಪಂಚಾಯತ್‌ಗೆ ಸವಾಲಿನ ಸಂಗತಿಯಾಗಿದೆ. ವಿಲೇವಾರಿ ಘಟಕಕ್ಕೆ ಆಗ್ರಹ
ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಅನೇಕ ಗ್ರಾ.ಪಂ.ಗಳು, ಜಿ.ಪಂ. ಅನುದಾನದ ನೆರವಿನಿಂದ ಕಸ ವಿಲೇವಾರಿ ಸಮಸ್ಯೆ ನಿವಾರಿಸುವ ಸಲುವಾಗಿ ಘನ ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಿದೆ. ಕಸ ವಿಲೇವಾರಿ ಜತೆಗೆ, ಅದನ್ನು ಗೊಬ್ಬರವಾಗಿ ಪರಿವರ್ತಿಸಿದರೆ ಪಂಚಾಯತ್‌ಗೂ ಆದಾಯ ಬರುತ್ತದೆ. ಗುಜ್ಜಾಡಿಯಲ್ಲೂ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿದರೆ, ಕಸದ ವಿಲೇವಾರಿ ಸಮಸ್ಯೆ ನಿವಾರಣೆಯಾಗಲಿದೆ ಎಂಬುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.
Related Articles
ಗುಜ್ಜಾಡಿ ಗ್ರಾಮಕ್ಕೆ ಅನುದಾನ ಇದ್ದರೂ, ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಜಾಗದ ಸಮಸ್ಯೆ ಕುರಿತು ಪತ್ರಿಕೆ ಡಿ. 2 ರಂದು ವಿಶೇಷ ವರದಿ ಮೂಲಕ ಗಮನಸೆಳೆದಿತ್ತು. ಗುಜ್ಜಾಡಿ ಗ್ರಾಮದಲ್ಲಿ ಮಂಕಿ, ಕಳಿಹಿತ್ಲು, ಜನತಾ ಕಾಲನಿ, ಸಂಗಮೇಶ್ವರ ದೇವಸ್ಥಾನ ವಾರ್ಡ್ , ಬೆಣೆYರೆ ಸೇರಿ ಒಟ್ಟು 5 ವಾರ್ಡ್, ಒಟ್ಟು 6,042 ಜನರಿದ್ದು, ಒಟ್ಟು 1,300ಕ್ಕೂ ಹೆಚ್ಚು ಕಟ್ಟಡಗಳಿವೆ.
Advertisement