Advertisement

ಕಲ್ಲು-ಮಣ್ಣಿನ ಹಾದಿ: ಸಂಕಷ್ಟದ ಸಂಚಾರ

09:30 PM Aug 06, 2021 | Team Udayavani |

ಗುಜ್ಜಾಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಐದನೇ ವಾರ್ಡಿನ ಬೆಣ್ಗೆರೆ ಪ್ರದೇಶಕ್ಕೆ ಹೋಗುವ ಕೆಸರುಮಯ ರಸ್ತೆಗೆ ಬೃಹತ್‌ ಗಾತ್ರದ ಕಲ್ಲುಗಳನ್ನು ಹಾಕಿದ್ದರಿಂದ ಈಗ ಬೈಕ್‌ ಸಹಿತ ಎಲ್ಲ ವಾಹನ ಸಂಚರಿಸುವುದೇ ಕಷ್ಟವಾಗಿದೆ.

Advertisement

ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯ ಐದನೇ ವಾರ್ಡ್‌ನ ಬೆಣ್ಗೆರೆಗೆ ತೆರಳುವ ರಸ್ತೆ ಇದಾಗಿದ್ದು, ಸುಮಾರು 500ರಿಂದ 700 ಮೀ. ದೂರವಿದೆ. ಮಣ್ಣಿನ ರಸ್ತೆಯಾಗಿ ಅನೇಕ ವರ್ಷಗಳೇ ಕಳೆದರೂ, ಡಾಮರು ಭಾಗ್ಯ ಮಾತ್ರ ಕೂಡಿ ಬಂದಿಲ್ಲ. ಈ ರಸ್ತೆಗೆ ಶಾಸಕರ ಮುತುವರ್ಜಿಯಲ್ಲಿ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಅದು ಟೆಂಡರ್‌ ಹಂತದಲ್ಲಿದೆ.

ಕಲ್ಲು ಹಾಕಿದ್ದು ಯಾಕೆ?
ತೌಕ್ತೆ ಚಂಡಮಾರುತದ ವೇಳೆ ಗಂಗೊಳ್ಳಿ, ಬೆಣ್ಗೆರೆ, ಕಂಚುಗೋಡ ಮೊದ ಲಾದ ಕಡಲ ತೀರಕ್ಕೆ ಹಾನಿಯಾಗಿತ್ತು. ಪ್ರಾಕೃತಿಕ ವಿಕೋಪದಡಿ ಮೀನುಗಾರಿಕಾ ಮತ್ತು ಬಂದರು ಇಲಾಖೆಯ ಮುತುವರ್ಜಿಯಲ್ಲಿ ಕಡಲ್ಕೊರೆತ ತಡೆಗಾಗಿ ತುರ್ತಾಗಿ ಟೆಂಡರ್‌ ಕರೆದು ಗುತ್ತಿಗೆದಾರರಿಗೆ ಕಲ್ಲು ಹಾಕಲು ಸೂಚನೆ ನೀಡಲಾಗಿದೆ. ಇದರಂತೆ ಬೆಣ್ಗೆರೆ ವ್ಯಾಪ್ತಿಯ ಕಡಲ ತೀರಕ್ಕೆ ಇದೇ ಮಣ್ಣಿನ ರಸ್ತೆಯ ಮೂಲಕವೇ ಟಿಪ್ಪರ್‌ಗಳ ಮೂಲಕ ಕಲ್ಲು ಹಾಕಲಾಗಿತ್ತು. ಘನ ಗಾತ್ರದ ವಾಹನಗಳ ಸಂಚಾರದಿಂದಾಗಿ ಮಣ್ಣಿನ ರಸ್ತೆ ಜರ್ಜರಿತಗೊಂಡು, ಸಂಪೂರ್ಣ ಕೆಸರುಮಯಗೊಂಡು, ವಾಹನ ಸಂಚರಿಸುವುದೇ ಕಷ್ಟಕರವಾಗಿತ್ತು. ಆಗ ಗುತ್ತಿಗೆದಾರರು ರಾಡಿಯೆದ್ದ ಕಡೆಗಳಲ್ಲಿ ಬೃಹತ್‌ ಗಾತ್ರದ ಕಲ್ಲುಗಳನ್ನು ಹಾಕಿ, ಅವರ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಂಡಿದ್ದರು. ಆದರೆ ಇದರಿಂದ ದ್ವಿಚಕ್ರ, ರಿಕ್ಷಾ ಸಹಿತ ಇನ್ನಿತರ ವಾಹನಗಳು ಮಾತ್ರ ಸಂಚರಿಸುವುದು ಕಷ್ಟವಾಗಿದೆ.

ಹತ್ತಾರು ಸಮಸ್ಯೆ
ಬೆಣ್ಗೆರೆ ಪ್ರದೇಶದಲ್ಲಿ 30 ಮನೆಗಳಿದ್ದು, ಹಲವು ವಾಹನಗಳು ನಿತ್ಯ ಈ ಮಾರ್ಗವಾಗಿ ಸಂಚರಿ ಸುತ್ತವೆ. ನೂರಾರು ಮಂದಿ ನೆಲೆಸಿದ್ದಾರೆ. ಈ ಹದಗೆಟ್ಟ ರಸ್ತೆಯಿಂದಾಗಿ ಇಲ್ಲಿನ ಗ್ರಾಮಸ್ಥರಿಗೆ ಎಲ್ಲದಕ್ಕೂ ಸಮಸ್ಯೆಯಾಗುತ್ತಿದೆ. ಪ್ರಮುಖವಾಗಿ ಪಡಿತರ ತರಲು ಗುಜ್ಜಾಡಿ, ನಾಯಕವಾಡಿಗೆ ಬರಬೇಕು. ಅಲ್ಲಿಂದ ಆಟೋ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ಬಂದರೂ, ಮನೆಯವರೆಗೆ ಮಾತ್ರ ಬರುವುದಿಲ್ಲ ಅನ್ನುತ್ತಾರೆ. ಇನ್ನು ಯಾರಿಗಾದರೂ ಅನಾರೋಗ್ಯ ಉಂಟಾದರೆ ಅವರನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾದರೆ ದೊಡ್ಡ ಸಾಹಸವೇ ಮಾಡಬೇಕಿದೆ. ಇನ್ನು ಈ ಮಾರ್ಗದಲ್ಲಿ ನಿತ್ಯ ಸಂಚರಿಸುವವರಿಗೆ ಮೈ- ಕೈ ನೋವು, ಸೊಂಟ ನೋವು ಖಾಯಂ ಆಗಿದೆ. ಗ್ಯಾಸ್‌ ಸಿಲಿಂಡರ್‌ ಖಾಲಿಯಾದರೆ, 500-600 ಮೀ. ದೂರದಿಂದ ತಲೆ ಮೇಲೆ ಹೊತ್ತುಕೊಂಡು ಬರಬೇಕಾದ ಸ್ಥಿತಿ ಇಲ್ಲಿನವರದ್ದು. ಇನ್ನು ಘನ ವಾಹನಗಳ ಸಂಚಾರದ ವೇಳೆ ರಸ್ತೆಯ ಮಣ್ಣೆಲ್ಲ ಚರಂಡಿಗೆ ಹೋಗಿ, ಆ ನೀರೆಲ್ಲ ಇಲ್ಲಿನ 4-5 ಮನೆಗಳ ಅಂಗಳಕ್ಕೆ ನುಗ್ಗುತ್ತಿದೆ.

ಸಾರ್ವಜನಿಕರ ಆಕ್ರೋಶ
ಕಡಲ್ಕೊರೆತ ತಡೆಗೆ ಕಲ್ಲು ಹಾಕುವ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು ಆರಂಭದಲ್ಲಿ ಈ ರಸ್ತೆಗೆ ಹಾನಿಯಾದರೆ ಸರಿ ಮಾಡಿಕೊಡುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದರು. ಆದರೆ ರಸ್ತೆಗೆ ಜಲ್ಲಿ ಕಲ್ಲು ಮಿಶ್ರಿತ ಮರಳನ್ನು ಹಾಕುವ ಬದಲು ಬೃಹತ್‌ ಗಾತ್ರದ ಕಲ್ಲುಗಳನ್ನು ರಸ್ತೆಗೆ ಹಾಕಿ, ಇಡೀ ರಸ್ತೆಯನ್ನೇ ಅಪಾಯಕಾರಿಯಾಗಿ ಮಾಡಿಕೊಟ್ಟಿರುವ ಗುತ್ತಿಗೆದಾರರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಲ್ಲಿನ ರಸ್ತೆ ಬೇಡ
ಪೇಟೆಗೆ ಹೋಗಬೇಕಾದರೆ, ಪಡಿತರ ತರಲು, ಆಸ್ಪತ್ರೆಗೆ ತುರ್ತಾಗಿ ಹೋಗಬೇಕಾದರೆ ನಮಗೆ ಇದೇ ರಸ್ತೆಯಿರುವುದು. ದೊಡ್ಡ- ದೊಡ್ಡ ಕಲ್ಲುಗಳನ್ನು ಹಾಕಿರುವುದರಿಂದ ಬಾಡಿಗೆಗೆ ಕರೆದರೆ ಯಾವ ವಾಹನಗಳು ಬರುತ್ತಿಲ್ಲ. ನಮಗೆ ಈ ಕಲ್ಲಿನ ರಸ್ತೆ ಬೇಡ. ಮೊದಲಿದ್ದ ಮಣ್ಣಿನ ರಸ್ತೆಯಾದರೂ ಮಾಡಿಕೊಡಲಿ. ಅನೇಕ ಮಂದಿ ಬೈಕ್‌ ಸವಾರರು ಬಿದ್ದಿದ್ದಾರೆ.
-ವಿನೋದ್‌ ಮೇಸ್ತ, ಸ್ಥಳೀಯರು

ಗುತ್ತಿಗೆದಾರರಿಗೆ ಸೂಚನೆ
ಕಡಲ್ಕೊರೆತ ತಡೆಗಾಗಿ ಕಲ್ಲು ಹಾಕುವ ವೇಳೆ ರಸ್ತೆಗೆ ಹಾನಿಯಾದರೆ ಗುತ್ತಿಗೆದಾರರೇ ದುರಸ್ತಿ ಮಾಡಿಕೊಡುವ ಬಗ್ಗೆ ಆರಂಭದಲ್ಲೇ ಮಾತುಕತೆಯಾಗಿದೆ. ಈ ಬಗ್ಗೆ ಗುತ್ತಿಗೆದಾರರಿಗೂ ಸೂಚನೆ ನೀಡಲಾಗಿತ್ತು. ರಸ್ತೆಗೆ ಕಲ್ಲು ಹಾಕಿರುವುದರಿಂದ ಅಲ್ಲಿನ ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕೂಡಲೇ ಗುತ್ತಿಗೆದಾರರ ಬಳಿ ಮಾತನಾಡುತ್ತೇನೆ.
-ಉದಯ ಕುಮಾರ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಬಂದರು ಮತ್ತು ಮೀನುಗಾರಿಕಾ ಇಲಾಖೆ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next