ಅಹಮದಾಬಾದ್: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸುಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿರುವ ಘಟನೆ ಗುಜರಾತ್ ನ ವಡೋದರಾದಲ್ಲಿ ಮಂಗಳವಾರ (ಅಕ್ಟೋಬರ್ 25) ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 19 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕೊಹ್ಲಿ ಔಟಾದರೂ ಮೂರು ರನ್ .. : ಅಂಪೈರ್ ನಿರ್ಧಾರಕ್ಕೆ ಸೈಮನ್ ಟಫೆಲ್ ಹೇಳುವುದೇನು?
ಕೋಮು ಸೂಕ್ಷ್ಮತೆಯ ಪಾನಿಗೇಟ್ ಪ್ರದೇಶದಲ್ಲಿ ಮಂಗಳವಾರ ನಸುಕಿನ ವೇಳೆ ಘರ್ಷಣೆ ನಡೆದಿರುವುದಾಗಿ ವರದಿ ತಿಳಿಸಿದೆ. ಘರ್ಷಣೆ ನಡೆದ ನಂತರ ಮನೆಯ ಮೂರನೇ ಮಹಡಿ ಮೇಲಿನಿಂದ ಪೊಲೀಸರ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್ ಬಾಂಬ್ ಎಸೆದಿರುವುದಾಗಿ ವಡೋದರಾ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಯಶ್ ಪಾಲ್ ಜಗಾನಿಯಾ ಪಿಟಿಐಗೆ ತಿಳಿಸಿದ್ದಾರೆ.
ಕೋಮು ಘರ್ಷಣೆಯಲ್ಲಿ ಯಾರೂ ಕೂಡಾ ಗಾಯಗೊಂಡಿಲ್ಲ, ಆದರೆ ಪಟಾಕಿ ಸಿಡಿಸಿದ ಪರಿಣಾಮ ಬೈಕ್ ವೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಪಟಾಕಿ ಸಿಡಿಸುವ ವಿಚಾರದಲ್ಲಿ ಘರ್ಷಣೆ ನಡೆದ ಪರಿಣಾಮ ಎರಡು ಕೋಮುಗಳ ನಡುವೆ ಕಲ್ಲು ತೂರಾಟ ನಡೆಸಿರುವುದಾಗಿ ಯಶ್ ಪಾಲ್ ತಿಳಿಸಿರುವುದಾಗಿ ವರದಿಯಾಗಿದೆ.
ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಪಾನಿಗೇಟ್ ಪ್ರದೇಶದಲ್ಲಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.