ಅಹಮದಾಬಾದ್: ಗುಜರಾತ್‌ನಲ್ಲಿರುವ ಪ್ರಾಚೀನ ಹರಪ್ಪಾ ಕಾಲದ ಬೃಹತ್ ಸಮಾಧಿಗಳಲ್ಲಿ ನಡೆಸಿರುವ ಉತ್ಖನನವು ಹಲವು ಹೊಸ ಸಂಗತಿಗಳನ್ನು ಬಹಿರಂಗಪಡಿಸಿವೆ.
ಕ್ರಿ.ಪೂ. 5 ಸಾವಿರನೇ ವರ್ಷದ ಸಮಾಧಿಗಳು ಮಣ್ಣಿನ ದಿಬ್ಬದಿಂದ ಹಿಡಿದು ಕಲ್ಲಿನ ಸಮಾಧಿವರೆಗೆ ಹೇಗೆ ಪರಿವರ್ತನೆಯಾಗುತ್ತಾ ಸಾಗಿದವು ಎಂಬದರ ಮೇಲೂ ಈ ಉತ್ಖನನ ಬೆಳಕು ಚೆಲ್ಲಿದೆ. ಜತೆಗೆ, ಹಿಂದೆಲ್ಲ ಜನರನ್ನು ಸಮಾಧಿ ಮಾಡುವ ವೇಳೆ ಮರಣೋತ್ತರ ಬದುಕಿಗೆ ಅಗತ್ಯವಿರುವ ಸಾಮಗ್ರಿಗಳನ್ನೂ ಮೃತದೇಹದೊಂದಿಗೆ ಇಡುತ್ತಿದ್ದರು ಎಂಬುದನ್ನೂ ತೋರಿಸಿಕೊಟ್ಟಿದೆ.
ಗುಜರಾತ್‌ನ ಕಛ… ಜಿಲ್ಲೆಯ ಜುನಾ ಖಟಿಯಾ ಗ್ರಾಮದಲ್ಲಿ 2019ರಿಂದೀಚೆಗೆ ಉತ್ಖನನ ನಡೆಯುತ್ತಿದೆ. ಈ ಸ್ಥಳದಲ್ಲಿ ಸಿಕ್ಕಿರುವ ಮಣ್ಣಿನ ಮಡಿಕೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅವು ಸಿಂಧ್ ಮತ್ತು ಬಲೂಚಿಸ್ತಾನ ಪ್ರಾಂತ್ಯಗಳಲ್ಲಿ ಪ್ರಾಚೀನ ಹರಪ್ಪಾ ತಾಣಗಳಲ್ಲಿ ಸಿಕ್ಕಿರುವ ಮಡಿಕೆಗಳ ಮಾದರಿಯನ್ನೇ ಹೊಂದಿವೆ.
ಈ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕಲ್ಲುಗಳಾದ ಜೇಡಿಪದರಗಲ್ಲು ಮತ್ತು ಮರಳುಗಲ್ಲುಗಳಿಂದಲೇ ಆಯತಾಕಾರದ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ಜೊತೆಗೆ, ಮಣ್ಣಿನ ಪಾತ್ರೆಗಳು, ಭಕ್ಷ್ಯಗಳು ಮಾತ್ರವಲ್ಲದೇ ಬೆಲೆಬಾಳುವ ಮಣಿಗಳು, ಟೆರಕೋಟಾದಿಂದ ಮಾಡಲಾದ ಬಳೆಗಳು, ಸಮುದ್ರಚಿಪ್ಪುಗಳು, ವೈಢೂರ್ಯಗಳನ್ನು ಇಡಲಾಗಿದೆ.
ಬಹುತೇಕ ಸಮಾಧಿ ಸ್ಥಳಗಳಲ್ಲಿ 5ರಿಂದ 6 ಮಡಿಕೆಗಳು ಸಿಕ್ಕಿವೆ. ಒಂದು ಸಮಾಧಿಯಲ್ಲಂತೂ 62 ಮಡಿಕೆಗಳನ್ನು ಇಡಲಾಗಿತ್ತು ಎಂದು ಕೇರಳ ವಿವಿದ ಪುರಾತತ್ವ ವಿಭಾಗದ ಸಹಾಯಕ ಪ್ರೊಫೆಸರ್ ರಾಜೇಶ್ ಎಸ್.ವಿ. ಹೇಳಿದ್ದಾರೆ.