Advertisement

ಗುಜರಾತ್‌ ಮತ ಪಾಕ್‌ “ಹಸ್ತ”ಕ್ಷೇಪ: ನರೇಂದ್ರ ಮೋದಿ

06:40 AM Dec 11, 2017 | Team Udayavani |

ಅಹ್ಮದಾಬಾದ್‌: ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಪಾಕಿಸ್ಥಾನ ಹಸ್ತಕ್ಷೇಪ ಮಾಡುತ್ತಿದೆ’. ಇಂಥದ್ದೊಂದು ಗಂಭೀರ ಆರೋಪ ಮಾಡಿರುವುದು ಬೇರ್ಯಾರೂ ಅಲ್ಲ- ಪ್ರಧಾನಿ ನರೇಂದ್ರ ಮೋದಿ.

Advertisement

ರವಿವಾರ ಇಲ್ಲಿನ ಪಲಾನ್‌ಪುರದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಗುಜರಾತ್‌ ಮತದಾನಕ್ಕೆ ನೇರ ಪಾಕಿಸ್ಥಾನದ ಸಂಬಂಧವನ್ನು ಕಲ್ಪಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಪ್ರಮುಖರು ಇತ್ತೀಚೆಗಷ್ಟೇ ಪಾಕ್‌ನ ನಾಯಕರನ್ನು ರಹಸ್ಯವಾಗಿ ಭೇಟಿಯಾಗಿರುವ ವಿಚಾರವನ್ನು ಅವರು ಬಹಿರಂಗ ಪಡಿಸಿದ್ದಾರೆ. “ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರು ತನ್ನ ವಿರುದ್ಧ “ನೀಚ’ ಎಂಬ ಪದ ಬಳಕೆ ಮಾಡುವ ಮುನ್ನಾ ದಿನ ಅವರ ಮನೆಯಲ್ಲೇ ಒಂದು ರಹಸ್ಯ ಸಭೆ ನಡೆದಿತ್ತು.

ಅದರಲ್ಲಿ ಭಾರತದಲ್ಲಿರುವ ಪಾಕ್‌ ಹೈಕಮಿಷನರ್‌ ಮತ್ತು ಪಾಕಿಸ್ಥಾನದ ಮಾಜಿ ವಿದೇಶಾಂಗ ಸಚಿವರು ಭಾಗಿಯಾಗಿದ್ದರು. ಅಷ್ಟೇ ಅಲ್ಲ, ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌ ಹಾಗೂ ಮಾಜಿ ಉಪರಾಷ್ಟ್ರಪತಿಯೊಬ್ಬರು ಅಲ್ಲಿದ್ದು, 3 ಗಂಟೆಗಳ ಕಾಲ ನೆರೆರಾಷ್ಟ್ರದ ರಾಯಭಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಇದನ್ನೆಲ್ಲ ನೋಡುವಾಗ ಯಾರಿಗಾದರೂ ಅನುಮಾನ ಬರುವುದಿಲ್ಲವೇ’ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

ಅಲ್ಲದೆ, ಈ ಸಭೆ ನಡೆದ ಮಾರನೇ ದಿನವೇ ಅಯ್ಯರ್‌ ನನ್ನನ್ನು ನೀಚ ಎಂದು ಕರೆದರು. ಗುಜರಾತ್‌ನ ಜನತೆಯನ್ನು, ಇಲ್ಲಿನ ಹಿಂದುಳಿದ ವರ್ಗಗಳನ್ನು, ಬಡವರನ್ನು ಮತ್ತು ಮೋದಿಯನ್ನು ಅವಮಾನಿಸಿದರು. ಈ ಕುರಿತು  ಕಾಂಗ್ರೆಸ್‌ ದೇಶದ ಜನರಿಗೆ ವಿವರಣೆ ನೀಡಬೇಕು ಎಂದೂ ಮೋದಿ ಆಗ್ರಹಿಸಿದ್ದಾರೆ.

ಪಟೇಲ್‌ಗ‌ೂ ಜೈ ಎಂದ ಪಾಕ್‌: ಒಂದೆಡೆ ಅಯ್ಯರ್‌ ಮನೆಯಲ್ಲಿ ಇಂಥ ಗುಪ್ತ ಸಭೆ ನಡೆದರೆ, ಮತ್ತೂಂದೆಡೆ ಪಾಕ್‌ ಸೇನೆಯ ಮಾಜಿ ಪ್ರಧಾನ ನಿರ್ದೇಶಕ ಸರ್ದಾರ್‌ ಅರ್ಷದ್‌ ರಫೀಕ್‌ ಅವರು ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್‌ ಪಟೇಲ್‌ ಅವರೇ ಗುಜರಾತ್‌ ಮುಖ್ಯಮಂತ್ರಿ ಆಗಬೇಕು ಎಂದು ಹೇಳುತ್ತಾರೆ. ಇದೊಂದು ಗಂಭೀರ ವಿಚಾರ. ಪಾಕ್‌ ಸೇನೆಯ ಮಾಜಿ ಡಿಜಿಯೊಬ್ಬರು ಗುಜರಾತ್‌ ಚುನಾವಣೆಯಲ್ಲಿ ಮೂಗು ತೂರಿಸು ತ್ತಾರೆಂದರೆ ಅದರ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ ಮೋದಿ.

Advertisement

ಪಾಕಿಸ್ಥಾನದ ರಾಯಭಾರಿ ಜತೆ ಮಾತುಕತೆ ನಡೆಸಿರುವುದನ್ನು ಉಲ್ಲೇಖೀಸಿದ ಸಂದರ್ಭದಲ್ಲಿ ಮಾಜಿ ಉಪರಾಷ್ಟ್ರಪತಿಯ ಹೆಸರನ್ನು ಮೋದಿ ಪ್ರಸ್ತಾವಿಸದೆ ಇದ್ದರೂ ಅನಂತರ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು, ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಹೆಸರನ್ನು ಹೇಳಿಯೇ ಟೀಕಿಸಿದರು.

ಮೋದಿ ಭಾಷಣದಲ್ಲಿ  ಶೇ. 90ರಷ್ಟು ಮಾತನಾಡುವುದು ಅವರ ಬಗ್ಗೆಯೇ. ಜಿಎಸ್‌ಟಿ, ನೋಟು ಅಪಮೌಲ್ಯ, ಅಭಿವೃದ್ಧಿಯ ಬಗ್ಗೆ ಮಾತೇ ಆಡುತ್ತಿಲ್ಲ. ಏಕೆಂದೇ ಗೊತ್ತಾಗುತ್ತಿಲ್ಲ?
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ಉಪಾಧ್ಯಕ್ಷ

ಮಾಜಿ ಪಿಎಂ ಸಿಂಗ್‌, ಮಾಜಿ ಉಪರಾಷ್ಟ್ರಪತಿ ಅನ್ಸಾರಿ, ಅಯ್ಯರ್‌ ಅವರನ್ನು ಪಾಕ್‌ ರಾಯಭಾರಿಗಳು ಭೇಟಿಯಾಗಿ 3 ಗಂಟೆಗಳ ಕಾಲ ಮಾತನಾಡಿದ್ದಾರೆ. ವಿದೇಶಾಂಗ ಇಲಾಖೆಗೆ ಮಾಹಿತಿ ನೀಡದೆಯೇ ಈ ಸಭೆ ನಡೆದಿದೆ ಎಂದರೆ, ಇದು ನೀಡುತ್ತಿರುವ ಸಂದೇಶವೇನು ಎಂಬುದು ನನಗಂತೂ ಗೊತ್ತಾಗುತ್ತಿಲ್ಲ.
– ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಪ್ರತಿಯೊಬ್ಬ ಬಿಜೆಪಿಗನಿಗೂ ಅಂಥ ಸಭೆಯ ಬಗ್ಗೆ ಗೊತ್ತಿದೆಯೆಂದರೆ, ಅದು “ರಹಸ್ಯ’ ಸಭೆ ಹೇಗಾಗುತ್ತದೆ? ಪ್ರಧಾನಿಯವರಿಗೆ ಅಷ್ಟೊಂದು ಕುತೂಹಲವಿದ್ದರೆ, ನೇರ ಮಾಜಿ ಪಿಎಂ ಸಿಂಗ್‌ ಅಥವಾ ಅನ್ಸಾರಿ ಅವರಲ್ಲೇ ಕೇಳಬಹುದಿತ್ತ ಲ್ಲವೇ? ಅವರು ಖುಷಿಯಲ್ಲೇ ವಿವರಿಸುತ್ತಿದ್ದರು.
– ಮನೀಷ್‌ ತಿವಾರಿ, ಕಾಂಗ್ರೆಸ್‌ ನಾಯಕ

ಪ್ರಧಾನಿ ಮೋದಿ ಅವರು ಗುಜರಾತ್‌ನಲ್ಲಿ ವೈಯಕ್ತಿಕ ಟೀಕೆಯಲ್ಲಿ ತೊಡಗಿದ್ದಾರೆ. ರಾಜಕೀಯವನ್ನು ಅತ್ಯಂತ ಅಪಾಯ ಕಾರಿ ಹಾಗೂ ಕೆಳಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಇದುವೇ ಅವರ ಅಭಿವೃದ್ಧಿ ಮಾದರಿಯನ್ನು ಬಯಲು ಮಾಡುತ್ತಿದೆ.
– ಡಿ. ರಾಜಾ, ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next