Advertisement

ಕೋಲ್ಕತ ನೈಟ್‌ರೈಡರ್ಸ್‌ ವಿರುದ್ದ ರೋಚಕ ಗೆಲುವು ದಾಖಲಿಸಿದ ಗುಜರಾತ್ ಟೈಟಾನ್ಸ್‌

11:18 PM Apr 23, 2022 | Team Udayavani |

ನವೀ ಮುಂಬೈ: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಗುಜರಾತ್‌ ಟೈಟಾನ್ಸ್‌ ತಂಡವು ಶನಿವಾರದ ಅಲ್ಪಮೊತ್ತದ ಸೆಣೆಸಾಟದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು 8 ರನ್ನುಗಳಿಂದ ರೋಮಾಂಚಕವಾಗಿ ಸೋಲಿಸಿದೆ.

Advertisement

ಗೆಲ್ಲಲು 157 ರನ್‌ ಗಳಿಸುವ ಗುರಿ ಪಡೆದ ಕೆಕೆಆರ್‌ ತಂಡವು ನೀರಸವಾಗಿ ಆಟ ಆರಂಭಿಸಿತು. ಆದರೆ ಕೊನೆ ಹಂತದಲ್ಲಿ ಆ್ಯಂಡ್ರೆ ರಸೆಲ್‌ ಸಿಡಿದ ಕಾರಣ ಗೆಲ್ಲುವ ಆಸೆ ಚಿಗುರೊಡೆದಿತ್ತು. ಆದರೆ ರಸೆಲ್‌ ಅಂತಿಮ ಓವರಿನಲ್ಲಿ ಔಟಾಗುತ್ತಲೇ ತಂಡದ ಸೋಲು ಖಚಿತವಾಯಿತು. ಅಂತಿಮವಾಗಿ ತಂಡ 8 ವಿಕೆಟಿಗೆ 148 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಈ ಮೊದಲು ನಾಯಕ ಹಾರ್ದಿಕ್‌ ಪಾಂಡ್ಯ ಅವರ ಅರ್ಧಶತಕದಿಂದಾಗಿ ಗುಜರಾತ್‌ ಟೈಟಾನ್ಸ್‌ 9 ವಿಕೆಟಿಗೆ 156 ರನ್‌ ಗಳಿಸಿತ್ತು.

ಕೋಲ್ಕತ ಪರ ಅದ್ಭುತ ಬೌಲಿಂಗ್‌ ಮಾಡಿದ್ದ ಆಂಡ್ರೆ ರಸೆಲ್‌ ಒಂದೇ ಓವರ್‌ನಲ್ಲಿ 4 ವಿಕೆಟ್‌ ಕಿತ್ತಿದ್ದರು. ಬ್ಯಾಟಿಂಗ್‌ ವೇಳೆ ಕೇವಲ 25 ಎಸೆತಗಳಲ್ಲಿ 48 ರನ್‌ ಚಚ್ಚಿದ್ದರು.

ರಸೆಲ್‌ ಬಿರುಸಿನ ಆಟ
ಮೊಹಮ್ಮದ್‌ ಶಮಿ, ರಶೀದ್‌ ಖಾನ್‌ ಅವರ ನಿಖರ ದಾಳಿಯಿಂದಾಗಿ ಕೆಕೆಆರ್‌ ನಿಧಾನವಾಗಿ ರನ್‌ ಪೇರಿಸತೊಡಗಿತು. ಆಗಾಗ್ಗೆ ವಿಕೆಟ್‌ ಕಳೆದುಕೊಂಡ ಕೆಕೆಆರ್‌ ಸೋಲಿನ ಅಂಚಿಗೆ ಬಿದ್ದಿತ್ತು. ಆದರೆ ಕೊನೆ ಹಂತದಲ್ಲಿ ರಸೆಲ್‌ ಬಿರುಸಿನ ಆಟ ಆಡಿದ್ದರಿಂದ ಗೆಲುವಿನ ಆಸೆ ಚಿಗುರಿತು. ಇದರಿಂದಾಗಿ ಅಂತಿಮ ಓವರಿನಲ್ಲಿ ತಂಡ ಗೆಲ್ಲಲು 18 ರನ್‌ ತೆಗೆಯುವ ಅವಕಾಶ ಪಡೆಯಿತು. ರಸೆಲ್‌ ಮತ್ತು ಉಮೇಶ್‌ ಯಾದವ್‌ ಕ್ರೀಸ್‌ನಲ್ಲಿದ್ದರು.

ಅಲ್ಜಾರಿ ಜೋಸೆಫ್ ಎಸೆದ ಅಂತಿಮ ಓವರಿನ ಮೊದಲ ಎಸೆತವನ್ನು ರಸೆಲ್‌ ಸಿಕ್ಸರ್‌ಗೆ ಅಟ್ಟಿದರು. ಆದರೆ ದ್ವಿತೀಯ ಎಸೆತದಲ್ಲಿ ರಸೆಲ್‌ ಚೆಂಡನ್ನು ಬಲವಾಗಿ ಹೊಡೆದರೂ ಬೌಂಡರಿ ಗೆರೆ ಸಮೀಪ ಫ‌ರ್ಗ್ಯುಸನ್‌ ಕ್ಯಾಚ್‌ ಪಡೆದರು. ಇದರಿಂದಾಗಿ ಕೆಕೆಆರ್‌ ಗೆಲುವಿನ ಆಸೆ ಭಗ್ನಗೊಂಡಿತು. ಅಂತಿಮವಾಗಿ ತಂಡ 9 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಕಂಡಿತು. ರಸೆಲ್‌ ಕೇವಲ 25 ಎಸೆತ ಎದುರಿಸಿ 1 ಬೌಂಡರಿ ಮತ್ತು 6 ಸಿಕ್ಸರ್‌ ನೆರವಿನಿಂದ 48 ರನ್‌ ಗಳಿಸಿದ್ದರು.

Advertisement

ಅಲ್ಪ ಮೊತ್ತವಾದರೂ ಗುಜರಾತ್‌ ಈ ಪಂದ್ಯವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಐಪಿಎಲ್‌ನ ಈವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ. ಈ ಗೆಲುವಿನಿಂದಾಗಿ ಗುಜರಾತ್‌ ಅಂಕಪಟ್ಟಿಯಲ್ಲಿ 12 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.

ಹಾರ್ದಿಕ್‌ ಪಾಂಡ್ಯ ಆಸರೆ
ನಾಯಕ ಹಾರ್ದಿಕ್‌ ಪಾಂಡ್ಯ ಅವರನ್ನು ಬಿಟ್ಟರೆ ಗುಜರಾತ್‌ ತಂಡದ ಇತರ ಯಾವುದೇ ಆಟಗಾರ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಲು ವಿಫ‌ಲರಾದರು. ಎಚ್ಚರಿಕೆಯ ಕ್ರಮದಿಂದಾಗಿ ಈ ಹಿಂದಿನ ಪಂದ್ಯವನ್ನು ಕಳೆದುಕೊಂಡಿದ್ದ ಹಾರ್ದಿಕ್‌ ಪಾಂಡ್ಯ ಈ ಐಪಿಎಲ್‌ನಲ್ಲಿ ತನ್ನ ಮೂರನೇ ಅರ್ಧಶತಕ ಸಿಡಿಸಿದ್ದರಿಂದ ತಂಡ ಸಾಧಾರಣ ಮೊತ್ತ ಪೇರಿಸುವಂತಾಯಿತು.

ಹಾರ್ದಿಕ್‌ ಅವರ ಆಟವೂ ಬಿರುಸಿನಿಂದ ಕೂಡಿರಲಿಲ್ಲ. 49 ಎಸೆತ ಎದುರಿಸಿದ್ದ ಅವರು 67 ರನ್‌ ಗಳಿಸಿದ್ದರು. 4 ಬೌಂಡರಿ ಮತುತ 2 ಸಿಕ್ಸರ್‌ ಬಾರಿಸಿದ್ದರು.ಕೆಕೆಆರ್‌ನ ಬೌಲಿಂಗ್‌ ಈ ಪಂದ್ಯದಲ್ಲಿ ಉತ್ತಮ ಮಟ್ಟದಲ್ಲಿತ್ತು. ಬೌಲರ್‌ಗಳ ಬಿಗು ದಾಳಿಗೆ ಗುಜರಾತ್‌ ತಂಡದ ಆಟಗಾರರು ರನ್‌ ಗಳಿಸಲು ಬಹಳಷ್ಟು ಒದ್ದಾಡಿದರು. ಕೆಕೆಆರ್‌ 43 ಡಾಟ್‌ ಎಸೆತ ಎಸೆದಿತ್ತು.

ಈ ಹಿಂದಿನ ಪಂದ್ಯದ ಗೆಲುವಿನ ರೂವಾರಿ ಡೇವಿಡ್‌ ಮಿಲ್ಲರ್‌ 27 ರನ್‌ ಗಳಿಸಿದರು. ಅವರು ನಾಯಕ ಹಾರ್ದಿಕ್‌ ಉತ್ತಮ ಬೆಂಬಲ ನೀಡಿದರಲ್ಲದೇ ಮೂರನೇ ವಿಕೆಟಿಗೆ 50 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು.

ರಸೆಲ್‌ ಮಾರಕ
ಡೆತ್‌ ಓವರ್‌ನಲ್ಲಿ ಕೆಕೆಆರ್‌ ಪರಿಣಾಮಕಾರಿ ದಾಳಿ ಸಂಘಟಿಸಿದ್ದರಿಂದ ಗುಜರಾತ್‌ ತಂಡದ ರನ್‌ವೇಗಕ್ಕೆ ಕಡಿವಾಣ ಬಿತ್ತು. ರಸೆಲ್‌ ಸಹಿತ ಸೌಥಿ, ಯಾದವ್‌ ನಿಖರ ದಾಳಿ ಸಂಘಟಿಸಿದರು. ಅಂತಿಮ ಓವರ್‌ ಎಸೆದ ರಸೆಲ್‌ 5 ರನ್ನಿಗೆ ನಾಲ್ಕು ವಿಕೆಟ್‌ ಕಿತ್ತು ಪ್ರಬಲ ಹೊಡೆತ ನೀಡಿದರು. ಹ್ಯಾಟ್ರಿಕ್‌ ಪಡೆಯುವ ಅವಕಾಶ ಪಡೆದಿದ್ದ ರಸೆಲ್‌ ಎದುರಾಳಿಗೆ ಕೇವಲ 5 ರನ್‌ ಬಿಟ್ಟುಕೊಟ್ಟಿದ್ದರು. ಫೀಲ್ಡಿಂಗ್‌ನಲ್ಲಿ ಮಿಂಚಿದ ರಿಂಕು ಸಿಂಗ್‌ ನಾಲ್ಕು ಕ್ಯಾಚ್‌ ಪಡೆದು ಸಂಭ್ರಮಿಸಿದರು.

ಸಂಕ್ಷಿಪ್ತ ಸ್ಕೋರ್‌: ಗುಜರಾತ್‌ 20 ಓವರ್‌, 156/9 (ಹಾರ್ದಿಕ್‌ ಪಾಂಡ್ಯ 67, ಆಂಡ್ರೆ ರಸೆಲ್‌ 5ಕ್ಕೆ 4, ಟಿಮ್‌ ಸೌದಿ 24ಕ್ಕೆ 3). ಕೋಲ್ಕತ 20 ಓವರ್‌, 148/8 (ಆಂಡ್ರೆ ರಸೆಲ್‌ 48, ಮೊಹಮ್ಮದ್‌ ಶಮಿ 20ಕ್ಕೆ 2, ರಶೀದ್‌ ಖಾನ್‌ 22ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next