ಜಾಮ್‌ನಗರ : ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆಯ ಕಾವು ಏರತೊಡಗಿದ್ದು, ಜಾಮ್‌ನಗರ ಉತ್ತರ ಕ್ಷೇತ್ರದ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಇದಕ್ಕೆ ಕಾರಣ ಭಾರತದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಕಣಕ್ಕಿಳಿದಿರುವುದು.
ರಿವಾಬಾ ಜಡೇಜಾ ಅವರು ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
”ಪ್ರಗತಿ ಮತ್ತು ಅಭಿವೃದ್ಧಿಯ ವಿಷಯವು ಮುಖ್ಯವಾಗಿದೆ. ಪಕ್ಷವು ನನ್ನ ಮೇಲೆ ನಂಬಿಕೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ” ಎಂದು ರಿವಾಬಾ ಜಡೇಜಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
1990, ಸೆಪ್ಟೆಂಬರ್ 5, ರಂದು ಜನಿಸಿದ ರಿವಾಬಾ ಅವರು ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಆತ್ಮೀಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸೈನ್ಸ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು 2019 ರಲ್ಲೇ ಬಿಜೆಪಿ ಸೇರಿದ್ದರು. ರಿವಾಬಾ ಮತ್ತು ರವೀಂದ್ರ ಜಡೇಜಾ ಏಪ್ರಿಲ್ 17, 2016 ರಂದು ಹೊಸ ಬಾಳಿಗೆ ಕಾಲಿರಿಸಿದ್ದರು.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಬಿಜೆಪಿ ಗುರುವಾರ ತನ್ನ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ತವರು ಕ್ಷೇತ್ರ ಘಟ್ಲೋಡಿಯಾದಿಂದ ಕಣಕ್ಕಿಳಿಯಲಿದ್ದಾರೆ.
ಹಲವಾರು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಡಿಸೆಂಬರ್ 1 ರಂದು ಮೊದಲ ಹಂತದಲ್ಲಿ 89 ಸ್ಥಾನಗಳ ಪೈಕಿ ಪಕ್ಷವು 84 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಹೆಸರಿಸಿದೆ. ಡಿಸೆಂಬರ್ 5 ರಂದು ಎರಡನೇ ಹಂತದಲ್ಲಿ 93 ಕ್ಷೇತ್ರಗಳ ಪೈಕಿ 76 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಬಿಜೆಪಿ ಆರನೇ ಬಾರಿಗೆ ಅಧಿಕಾರಕ್ಕೆ ಏರಲು ಬಯಸುತ್ತಿರುವ ರಾಜ್ಯ ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.