ಹೊಸದಿಲ್ಲಿ : ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಸಂಬಂಧಿತವಾದ ತನ್ನ ಸಮುದಾಯದ ಬೇಡಿಕೆಗಳನ್ನು ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಿದೆ ಎಂದು ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಇಂದು ಬುಧವಾರ ಘೋಷಿಸಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ತಾನು ವಿಜಯಶಾಲಿಯಾದರೆ ಪಾಟಿದಾರ್ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಪರಿಗಣಿಸುವುದಾಗಿ ಕಾಂಗ್ರೆಸ್ ತನಗೆ ಭರವಸೆ ಕೊಟ್ಟಿರುವುದಾಗಿ ಹಾರ್ದಿಕ್ ಪಟೇಲ್ ಅವರಿಂದು ಮಾಧ್ಯಮವನ್ನು ಉದ್ದೇಶಿಸಿ ಹೇಳಿದರು.
ಕೆಲವೊಂದು ಸಮುದಾಯಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಮೀಸಲಾತಿಯನ್ನು ನೀಡಲಾಗಿದೆ ಎಂದು ಆರೋಪಿಸಿದ ಹಾರ್ದಿಕ್ ಪಟೇಲ್, “ಕಾಂಗ್ರೆಸ್ ಪಕ್ಷ ನಮ್ಮ ಸಂಬಂಧಿಯೇನೂ ಅಲ್ಲ; ಆದರೂ ಅದು ಒಬಿಸಿ ಕೋಟಾ ಸಮೀಕ್ಷೆಯನ್ನು ಕೈಗೊಳ್ಳುವುದಾಗಿ ಹೇಳಿದೆ’ ಎಂದು ತಿಳಿಸಿದರು.
ಪಟೇಲ್ ನಾಯಕರು ಕಾಂಗ್ರೆಸ್ ಪಕ್ಷದಿಂದ ಯಾವುದೇ ಟಿಕೆಟ್ ಬೇಕೆಂದು ಕೇಳಿಲ್ಲ; ನಮಗೆ ಬೇಕಿರುವುದು ಮೀಸಲಾತಿ ಮಾತ್ರ ಎಂದು ಹಾರ್ದಿಕ್ ಹೇಳಿದರು.
ಪಾಟಿದಾರ್ ಸಮುದಾಯಕ್ಕೆ ಬೇಕಿರುವುದು ಕಲಿಯುವ ಹಕ್ಕು ಮತ್ತು ಉದ್ಯೋಗ ಎಂದು 24ರ ಹರೆಯದ ಹಾರ್ದಿಕ್ ಪಟೇಲ್ ಹೇಳಿದರು
ಭಾರತೀಯ ಜನತಾ ಪಕ್ಷದ ಬಗ್ಗೆ ಮಾತನಾಡುತ್ತಾ ಹಾರ್ದಿಕ್ ಪಟೇಲ್, “ನಮಗೇನೂ ಆಡಳಿತ ಪಕ್ಷ ಬಿಜೆಪಿಯೊಂದಿಗೆ ಯಾವುದೇ ವೈರತ್ಯ ಇಲ್ಲ; ಆದರೆ ಬಿಜೆಪಿಗೆ ಗುಜರಾತಿನ 6 ಕೋಟಿ ಜನರ ಬಗ್ಗೆ ಯಾವುದೇ ಕಾಳಜಿ ಇಲ್ಲ’ ಎಂದು ನೇರವಾಗಿ ಟೀಕಿಸಿದರು.