Advertisement
ಹಿಮಾಚಲದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಐವರು ಮೃತಪಟ್ಟರೆ, ಗುಜರಾತ್‌ನಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಪಂಜಾಬ್ ರಸ್ತೆ ಸಾರಿಗೆಯ ಬಸ್ಸೊಂದು ಮನಾಲಿಯ ಬಿಯಾಸ್ ನದಿಯ ಮಧ್ಯೆ ರವಿವಾರ ಪತ್ತೆಯಾಗಿದೆ. ಜು.9ರಂದು ಚಂಡೀಗಢದಿಂದ ಹೊರಟಿದ್ದ ಬಸ್ ಜು.10ರಂದು ಮನಾಲಿ ಸಮೀಪ ಪ್ರವಾಹದಲ್ಲಿ ಕೊಚ್ಚಿಹೋಗಿತ್ತು. ಇದೇ ವೇಳೆ ಉತ್ತರಾಖಂಡದಲ್ಲಿ ಜು. 26ರವರೆಗೂ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದ್ದು, ಎಲ್ಲ 13 ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಧಾರಾಕಾರ ಮಳೆಯಿಂದಾಗಿ ಚಮೋಲಿಯ ಬದ್ರಿನಾಥ ಹೆದ್ದಾರಿ ಬ್ಲಾಕ್ ಆಗಿದೆ. ಯಮುನೋತ್ರಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಗುಜರಾತ್ ಜನರ ನಿದ್ದೆಗೆಡಿಸಿದೆ. ಜುನಾಗಢ್‌ನಲ್ಲಿ ದಿಢೀರ್ ಪ್ರವಾಹಕ್ಕೆ ಬೆಚ್ಚಿಬಿದ್ದಿದ್ದ ಜನರು ಮನೆಯಿಂದ ಹೊರಬರಲು ಹೆದರುವಂತಾಗಿದೆ. ರವಿವಾರವೂ ಗುಜರಾತ್‌ನ ದಕ್ಷಿಣ ಮತ್ತು ಸೌರಾಷ್ಟ್ರ ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಅಣೆಕಟ್ಟುಗಳು ಮತ್ತು ನದಿಗಳಲ್ಲಿ ನೀರು ಅಪಾಯದ ಮಟ್ಟಕ್ಕೇರುತ್ತಿರುವ ಕಾರಣ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನವಸಾರಿ ನಗರದ ಮುಂಬಯಿ- ಅಹ್ಮದಾಬಾದ್ ರಾ. ಹೆದ್ದಾರಿ ಮುಳುಗಡೆಯಾಗಿದೆ. ಜುನಾಗಢ್, ದೇವಭೂಮಿ ದ್ವಾರಕಾ, ಜಾಮ್‌ನಗರ, ಕಛ…, ಸೂರತ್, ವಲ್ಸದ್, ನವಸಾರಿ ಮತ್ತು ಸೂರತ್‌ನಲ್ಲಿ ಸೋಮವಾರವೂ ವಿಪರೀತ ಮಳೆಯಾಗುವ ಸಾಧ್ಯತೆಯಿದೆ. ಏಳು ರಾಜ್ಯಗಳಿಗೆ ಎಚ್ಚರಿಕೆ
ಭಾರೀ ಮಳೆಯ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು 7 ರಾಜ್ಯಗಳಿಗೆ ಅಲರ್ಟ್ ಘೋಷಿಸಿದೆ. ಗುಜರಾತ್ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ 204.4 ಮಿ.ಮೀ. ಮಳೆಯಾಗುವ ಸಾಧ್ಯತೆಯಿದ್ದು,ಈ ಎರಡು ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಮಧ್ಯಪ್ರದೇಶ, ಕರ್ನಾಟಕ, ಒಡಿಶಾ, ಗೋವಾ ಮತ್ತು ಕೇರಳಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.
Related Articles
ರವಿವಾರ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ, ಮಾತ್ರವಲ್ಲ ನೀರಿನ ಪ್ರಮಾಣ ಮಂಡಿಯೆತ್ತರಕ್ಕೇರಿದೆ. ಟರ್ಮಿನಲ್‌ಗಳು ಮತ್ತು ರನ್‌ವೇಗಳು ಜಲಾವೃತವಾಗಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಏರ್‌ಪೋರ್ಟ್‌ನಲ್ಲಿ ನೀರು ತುಂಬಿದ ಕಾರಣ, ಸಮಯಕ್ಕೆ ಸರಿಯಾಗಿ ಒಳಗೆ ತಲುಪಲಾಗದೇ ಪ್ರಯಾಣಿಕರು ಪರದಾಡಿದ್ದಾರೆ. ಅಹ್ಮದಾಬಾದ್ ವಿಮಾನ ನಿಲ್ದಾಣ ನಿರ್ವಹಣೆಯ ಹೊಣೆ ಹೊತ್ತಿರುವ ಗೌತಮ್ ಅದಾನಿ ವಿರುದ್ಧವೂ ಕೆಲವರು ಹರಿಹಾಯ್ದಿದ್ದಾರೆ. “ಈಗ ಅಹ್ಮದಾಬಾದ್‌ನಲ್ಲಿ ವಿಮಾನ ಸಂಚರಿಸಲ್ಲ, ಹಡಗು ಸಂಚರಿಸುತ್ತದೆ’ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
Advertisement
ಸಿಎಂ, ಎಲ್‌ಜಿ ಜತೆ ಶಾ ಮಾತುಕತೆಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರವಿವಾರ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ದೂರವಾಣಿ ಕರೆ ಮಾಡಿ, ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಮಾತುಕತೆ ನಡೆಸಿದ್ದಾರೆ. ಜತೆಗೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನ ಅವರೊಂದಿಗೂ ಚರ್ಚಿಸಿ, ಯಮುನಾ ನದಿ ನೀರಿನ ಮಟ್ಟ ಹೆಚ್ಚುತ್ತಿರುವ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಇರ್ಶಲ್‌ವಾಡಿಯಲ್ಲಿ ನಿಷೇಧಾಜ್ಞೆ
ಬುಧವಾರ ರಾತ್ರಿ ಭೂಕುಸಿತ ಸಂಭವಿಸಿದ್ದ ಮಹಾರಾಷ್ಟ್ರದ ಇರ್ಶಲ್‌ವಾಡಿಯಲ್ಲಿ ರಕ್ಷಣ ಕಾರ್ಯಾಚರಣೆಯನ್ನು ರವಿವಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಪರಿಹಾರ ಮತ್ತು ರಕ್ಷಣ ಸಿಬಂದಿ ಹೊರತುಪಡಿಸಿದ ಬೇರ್ಯಾರೂ ಈ ಪ್ರದೇಶಕ್ಕೆ ಆಗಮಿಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆ.6ರ ವರೆಗೂ ಸೆಕ್ಷನ್ 144 ಜಾರಿಯಲ್ಲಿರಲಿದೆ ಎಂದು ರಾಯಗಢ ಜಿಲ್ಲಾಡಳಿತ ಹೇಳಿದೆ. ಭೂಕುಸಿತದ ಪ್ರದೇಶದಲ್ಲಿ ಒಟ್ಟಾರೆ 57 ಮಂದಿಯ ಮೃತದೇಹ ಪತ್ತೆಯಾಗಿದ್ದರೆ, 50ಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ. ಪತ್ತೆಯಾಗದ ಮೃತದೇಹಗಳು ಕೊಳೆಯಲಾರಂಭಿಸಿದ್ದು, ಅವಶೇಷಗಳಡಿಯಿಂದ ದುರ್ವಾಸನೆ ಬರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಆರೆಂಜ್ ಅಲರ್ಟ್
ಮಹಾರಾಷ್ಟ್ರದ ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳಿಗೆ ಜು.24ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಯಾವತ್ಮಲ್ ಜಿಲ್ಲೆಯಲ್ಲಿ ಮಳೆ ಸಂಬಂಧಿ ದುರ್ಘಟನೆಗಳಿಗೆ ಮೂವರು ಬಲಿಯಾಗಿದ್ದಾರೆ. ಮೃತರ ಕುಟುಂಬಕ್ಕೆ ಸರಕಾರ ತಲಾ 4 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ. ಜಲಗಾಂವ್‌ನ ಹತೂ°ರ್ ಅಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗಿದೆ. ರವಿವಾರ ಮಾತನಾಡಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಭಾರೀ ಮಳೆಯಿಂದ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರಕಾರ ಸಿದ್ಧವಾಗಿದೆ ಎಂದಿದ್ದಾರೆ. ಕೆಲವು ಭಾಗಗಳಲ್ಲಿ 15-20 ದಿನಗಳಲ್ಲಿ ಆಗುವ ಮಳೆಯು ಕೇವಲ ಎರಡೇ ದಿನಗಳಲ್ಲಿ ಸುರಿದಿದೆ ಎಂದೂ ಅವರು ತಿಳಿಸಿದ್ದಾರೆ. ದಿಲ್ಲಿಯಲ್ಲಿ ಕಟ್ಟೆಚ್ಚರ
ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ರವಿವಾರ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡಲಾಗಿದ್ದು, ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದೆ. ಹರಿಯಾಣದಿಂದ 2 ಲಕ್ಷ ಕ್ಯುಸೆಕ್ ನೀರು ಬಿಡುಗಡೆಯಾದ ಕೂಡಲೇ ದಿಲ್ಲಿ ಸರಕಾರವು ಕಟ್ಟೆಚ್ಚರ ಘೋಷಿಸಿದೆ. ರವಿವಾರ ಬೆಳಗ್ಗೆ ನೀರಿನ ಮಟ್ಟ 205.81 ಮೀಟರ್ ತಲುಪಿತ್ತು. ಇದು 206.7 ಮೀಟರ್ ದಾಟಿದರೆ ಪ್ರವಾಹ ಉಂಟಾಗುತ್ತದೆ. ಅಂಥ ಸಂದರ್ಭ ಎದುರಾದರೆ ಸೂಕ್ಷ್ಮ ಪ್ರದೇಶಗಳಲ್ಲಿನ ಜನರನ್ನು ಕೂಡಲೇ ಸ್ಥಳಾಂತರಿಸಲು ನಾವು ಸಂಪೂರ್ಣವಾಗಿ ಸನ್ನದ್ಧರಾಗಿದ್ದೇವೆ ಎಂದು ದಿಲ್ಲಿ ಕಂದಾಯ ಸಚಿವೆ ಆತಿಷಿ ಹೇಳಿದ್ದಾರೆ.