ಬಳ್ಳಾರಿ: ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಬಳಿ ನಿರ್ಮಾಣವಾಗುತ್ತಿರುವ ಸಾವಿರ ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆಗೆ ಗುಜರಾತ್ ರಾಜ್ಯದಿಂದ ನರ್ಸ್ ಗಳನ್ನು ಕರೆತಂದಿದ್ದು, ಮಂಗಳವಾರ ಸಂಜೆ ಬಳ್ಳಾರಿ ನಗರಕ್ಕೆ ಆಗಮಿಸಿ, ಆಸ್ಪತ್ರೆಯತ್ತ ತೆರಳಿದರು.
ಮೂಲತಃ ಗುಜರಾತ್ ಮೂಲದ ಈ 18 ನರ್ಸಿಂಗ್ ವಿದ್ಯಾರ್ಥಿಗಳು ಬಳ್ಳಾರಿಯ ಬೆಸ್ಟ್ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ತಮ್ಮ ರಾಜ್ಯಕ್ಕೆ ತೆರಳಿದ್ದರು. ಇದೀಗ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಬಳಿ ನಿರ್ಮಿಸಲಾಗುತ್ತಿರುವ ಸಾವಿರ ಆಕ್ಸೀಜನ್ ಬೆಡ್ ಗಳುಳ್ಳ ತಾತ್ಕಾಲಿಕ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದು, ಗುಜರಾತ್ ರಾಜ್ಯದಿಂದ ಮಂಗಳವಾರ ಸಂಜೆ ರೈಲು ಮೂಲಕ ಬಳ್ಳಾರಿ ನಗರಕ್ಕೆ ಆಗಮಿಸಿದ್ದು, ಇವರನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸರ್ವ್ ತಂಡದ ಸದಸ್ಯರು, ಸ್ವಯಂ ಸೇವಕರು ಹೂಮಳೆಗೈಯ್ಯುವ ಮೂಲಕ ಅದ್ದೂರಿ ಸ್ವಾಗತ ಕೋರಿದರು.
ಇದನ್ನೂ ಓದಿ :ಖಾಸಗಿ ಆಸ್ಪತ್ರೆಯಲ್ಲಿನ ಪ್ರತಿ ಸಾವಿನ ಬಗ್ಗೆ ಅಂದಂದೇ ವರದಿಗೆ ಜಿಲ್ಲಾಧಿಕಾರಿ ಸೂಚನೆ
ಬಳಿಕ ಈ ನರ್ಸಿಂಗ್ ವಿದ್ಯಾರ್ಥಿಗಳನ್ನು ಆರ್ ಇ ಟಿ ಟೆಸ್ಟ್ ಮಾಡಿ ನೆಗೆಟಿವ್ ಬಂದವರಿಗೆ ಲಘು ಉಪಾಹಾರ ನೀಡಿ ಬಳಿಕ ಬಸ್ ಮೂಲಕ ಜಿಂದಾಲ್ ಕೋವಿಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್ ತಿಳಿಸಿದ್ದಾರೆ.
ಈ ವೇಳೆ ಬೆಸ್ಟ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪೂರ್ಣಿಮಾ, ಭರತ್ ಜೈನ್, ಖಾಜಾ ಮೈನುದ್ದೀನ್, ಶಮೀಮ್ ಜಕಾಲಿ, ರಿಜ್ವಾನ್, ಮೈನುದ್ದೀನ್, ಶ್ವೇತಾ, ಮಂಜುನಾಥ್ ಮತ್ತು ಕಚೇರಿ ಸಿಬ್ಬಂದಿಗಳು ಇದ್ದರು.