ಮೊರ್ಬಿ: ನೂರಾರು ಜನರನ್ನು ಬಲಿಪಡೆದು, ಭೀಕರ ದುರಂತಕ್ಕೆ ಸಾಕ್ಷಿಯಾದ ಗುಜರಾತ್‌ನ ಮೊರ್ಬಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ನೀಡಿದ್ದಾರೆ.
ತೂಗುಸೇತುವೆ ಕುಸಿದ ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಬಳಿಕ, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳೊಂದಿಗೂ ಮಾತುಕತೆ ನಡೆಸಿದ್ದಾರೆ.
ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನೂ ನಡೆಸಿರುವ ಪ್ರಧಾನಿ ಮೋದಿ, “ಅವಘಡಕ್ಕೆ ಕಾರಣವಾದ ಎಲ್ಲ ಅಂಶಗಳನ್ನೂ ಗುರುತಿಸಿ, ವಿಸ್ತೃತ ತನಿಖೆ ನಡೆಸುವುದು ಅತ್ಯಗತ್ಯ. ಅಧಿಕಾರಿಗಳು ಕೂಡ ಸಂತ್ರಸ್ತ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದುಕೊಂಡು, ಅವರಿಗೆ ಎಲ್ಲ ರೀತಿಯ ನೆರವನ್ನೂ ಒದಗಿಸಬೇಕು’ ಎಂದು ಸೂಚಿಸಿದ್ದಾರೆ.
ಇದೇ ವೇಳೆ, ಅವರು ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, 141 ಮಂದಿಯ ಸಾವಿಗೆ ಕಾರಣವಾದ ಮೊರ್ಬಿ ತೂಗುಸೇತುವೆ ದುರಂತ, ರಕ್ಷಣಾ ಕಾರ್ಯಾಚರಣೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ತಲುಪುವ ಮುನ್ನ ವೈಮಾನಿಕ ಸಮೀಕ್ಷೆಯನ್ನೂ ನಡೆಸಿದ್ದಾರೆ.
ಗಾಯಾಳುಗಳ ಜತೆ ಮಾತು:
ಸುಮಾರು 15 ನಿಮಿಷಗಳ ಕಾಲ ಆಸ್ಪತ್ರೆಯಲ್ಲಿ ಕಳೆದ ಪ್ರಧಾನಿ ಮೋದಿ, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಪೈಕಿ ಕೆಲವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಒಟ್ಟಾರೆ 1 ಗಂಟೆ ಕಾಲ ಮೊರ್ಬಿಯಲ್ಲಿದ್ದ ಅವರು, ನಂತರ ಹೆಲಿಕಾಪ್ಟರ್ ಮೂಲಕ ಅಹಮದಾಬಾದ್‌ಗೆ ವಾಪಸಾಗಿದ್ದಾರೆ.